ಬೆಳಗಾವಿ ಜೆಎನ್‌ಎಂಸಿ ಆವರಣದ ಕೆಎಲ್‌ಇ ಶತಮಾನೋತ್ಸವ ಸ್ಮಾರಕ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕೆಎಲ್ಇ ಸಂಸ್ಥೆಯ 109ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಸಾಧನೆಗೈದ ವಿದ್ಯಾರ್ಥಿಗೆ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಲಾಯಿತು. ಕೇಂದ್ರ ಸಚಿವ ವಿ.ಸೋಮಣ್ಣ, ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಡಾ. ಫರ್ವೇಜ್ ಗ್ರಾಂಟ್, ಮಹಾಂತೇಶ ಕೌಜಲಗಿ, ಡಾ. ದೀಪಾ ಮೆಟಗುಡ್ಡ, ಜಿ.ಬಿ. ದೇಸಾಯಿ ಇದ್ದರು. 
ಜಿಲ್ಲೆ

ಡಾ. ಪ್ರಭಾಕರ ಕೋರೆ ಕಾರ್ಯ ಪ್ರಶಂಸನೀಯ

ಶಂಕರ ಗೆಜ್ಜಿ

ಬೆಳಗಾವಿ: ಶಿಕ್ಷಣ ವಂಚಿತ ಪ್ರದೇಶದಲ್ಲಿ ಸಪ್ತರ್ಷಿಗಳು ಹುಟ್ಟು ಹಾಕಿದ ವಿದ್ಯಾಸಂಸ್ಥೆಗಳು ಇಂದು ಹೆಮ್ಮರವಾಗಿ ಬೆಳೆದು ನಿಂತಿವೆ. 4 ದಶಕಗಳ ಕಾಲ ಸಂಸ್ಥೆಯನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಬಂದಿರುವ ಡಾ. ಪ್ರಭಾಕರ ಕೋರೆ ಅವರ ಕಾರ್ಯ ಪ್ರಶಂಸನೀಯ ಎಂದು ಕೇಂದ್ರದ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಜೆಎನ್‌ಎಂಸಿ ಆವರಣದ ಕೆಎಲ್‌ಇ ಶತಮಾನೋತ್ಸವ ಸ್ಮಾರಕ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕೆಎಲ್ಇ ಸಂಸ್ಥೆಯ 109ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ಸಾಧನೆ ಮಾಡುವಲ್ಲಿ ಕೆಎಲ್ಇ ವಿದ್ಯಾರ್ಥಿಗಳು ಒಂದು ಹೆಜ್ಜೆ ಮುಂದಿದ್ದಾರೆ. ಯಾವುದೇ ಭಾಗಕ್ಕೆ ಹೋದರೂ ಉನ್ನತ ಸ್ಥಾನಗಳಲ್ಲಿ ಕೆಎಲ್‌ಇ ವಿದ್ಯಾರ್ಥಿಗಳು ಕಾಣಿಸುತ್ತಾರೆ ಎಂದು ವಿ.ಸೋಮಣ್ಣ ಸಂಸ್ಥೆಯ ಕೆಲಸ-ಕಾರ್ಯಗಳನ್ನು ಬಣ್ಣಿಸಿದರು.

ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ಕೆಎಲ್‌ಇ ಸಂಸ್ಥೆ ಹುಟ್ಟು ಹಾಕಿದ ಸಪ್ತರ್ಷಿಗಳು ತಮ್ಮ ಎಲ್ಲ ಕಷ್ಟಗಳನ್ನು ಬದಿಗಿರಿಸಿ ಜನ ಕಲ್ಯಾಣಕ್ಕಾಗಿ ಶೈಕ್ಷಣಿಕ ದಾಸೋಹ ಗೈದವರು. ಅವರ ನಿಶ್ವಾರ್ಥ ಪರಿಶ್ರಮದಿಂದಲೇ ಇಂದು ಸಂಸ್ಥೆ ಜಾಗತಿಕವಾಗಿ ವಿಸ್ತರಿಸಲು ಸಾಧ್ಯವಾಗಿದೆ. ಶಿಕ್ಷಕರು, ಸಿಬ್ಬಂದಿ ಸೇರಿ ಪ್ರತಿಯೊಬ್ಬರ ಸಹಕಾರದಿಂದಲೂ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಕಾರಣವಾಗಿದೆ ಎಂದರು.

ಗೌರವ ಅತಿಥಿಯಾಗಿ ಆಗಮಿಸಿದ್ದ ಪುಣೆಯ ರುಬಿ ಹಾಲ್ ಕ್ಲಿನಿಕ್‌ನ ಮ್ಯಾನೇಜಿಂಗ್ ಟ್ರಸ್ಟಿ, ಮುಖ್ಯ ಹೃದ್ರೋಗ ತಜ್ಞವೈದ್ಯ ಡಾ. ಫರ್ವೇಜ್ ಗ್ರಾಂಟ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆ ಸುಲಭವಾಗಿ ಸಿಗುವಂತಾಗಬೇಕು. ಅದಕ್ಕೆ ತಕ್ಕಂತೆ ಗ್ರಾಮೀಣ ಭಾಗದಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕೆಎಲ್‌ಇ ಸಂಸ್ಥೆ ಮುಂಚೂಣಿಯಲ್ಲಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ಕೆಎಲ್ಇ ಆಜೀವ ಸದಸ್ಯ ಮಂಡಳಿಯ ಕಾರ್ಯಾಧ್ಯಕ್ಷೆ ಡಾ. ದೀಪಾ ಮೆಟಗುಡ್ಡ, ಕೆಎಲ್‌ಇ ಆಡಳಿತ ಕಾರ್ಯದರ್ಶಿ ಜಿ.ಬಿ. ದೇಸಾಯಿ ವೇದಿಕೆಯಲ್ಲಿದ್ದರು. ಡಾ. ಮಹೇಶ್ ಗುರನಗೌಡರ, ಡಾ. ನೇಹಾ ದಡೇದ, ಡಾ. ಆದಿತ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದಕ ನೀಡಿ ಗೌರವಿಸಲಾಯಿತು. 10 ಜನ ಶಿಕ್ಷಕ ಹಾಗೂ ಸಿಬ್ಬಂದಿಯನ್ನೂ ಸತ್ಕರಿಸುವ ಮೂಲಕ ಕೆಎಲ್‌ಇ ಸಂಸ್ಥೆ ಗಮನ ಸೆಳೆಯಿತು.

ಕೆಎಲ್‌ಇ ಜಾಗತಿಕ ಮಟ್ಟಕ್ಕೇರಲು ಡಾ.ಕೋರೆ ಕಾರಣ

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಅವರು ತಮ್ಮ ಭಾಷಣದುದ್ದಕ್ಕೂ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರನ್ನು ಹಾಡಿ ಹೊಗಳಿದರು. ಖಾಸಗಿ ಸಂಸ್ಥೆಗಳನ್ನು ಕಟ್ಟುವುದು ಸುಲಭ. ಆದರೆ, ಸಂಸ್ಥೆಯ ಯಶಸ್ವಿಯಾಗಿ ನಡೆಸಿಕೊಂಡು ಹೋಗುವುದು ಕಷ್ಟ ಸಾಧ್ಯದ ಮಾತು. ಡಾ. ಪ್ರಭಾಕರ ಕೋರೆ ಅವರು ನಾಲ್ಕು ದಶಕಗಳ ಕಾಲ ಕೆಎಲ್‌ಇ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದು, ಇಂದು 310ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳಿಗೆ ವಿಸ್ತರಿಸಿದ್ದಾರೆ. 1.38 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದಾರೆ. ಕೆಎಲ್‌ಇ ಸಂಸ್ಥೆಯು ಜಾಗತಿಕವಾಗಿ ಗುರುತಿಸಿಕೊಳ್ಳುವುದಕ್ಕೆ ಡಾ.ಪ್ರಭಾಕರ ಕೋರೆ ಕಾರಣೀಭೂತರಾಗಿದ್ದಾರೆ. ಡಾ. ಪ್ರಭಾಕರ ಕೋರೆ ಅವರು ಮುಖ್ಯಮಂತ್ರಿ ಆಗಿದ್ದರೆ ಕರ್ನಾಟಕ ಸಂಪೂರ್ಣ ಸುಶಿಕ್ಷಿತ ಮತ್ತು ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಸಾಗುತ್ತಿತ್ತು ಎಂದರು.