ಬೆಳಗಾವಿ: ವಿಧಾನ ಪರಿಷತ್ ಮಾಜಿ ಸಭಾಧ್ಯಕ್ಷ, ಅಖಿಲ ಭಾರತ ವೀರಶೈವ ಮಹಾಸಭಾ ಮಾಜಿ ರಾಜ್ಯಾಧ್ಯಕ್ಷ ಡಾ.ಎನ್.ತಿಪ್ಪಣ್ಣ (97) ಅವರ ನಿಧನಕ್ಕೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಪ್ರಭಾಕರ ಕೋರೆ ಕಂಬನಿ ಮಿಡಿದಿದ್ದಾರೆ.
ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಎನ್.ತಿಪ್ಪಣ್ಣ ಅವರು ಬಸವಣ್ಣವರ ನಿಜವಾದ ಅನುಯಾಯಿಗಳಾಗಿದ್ದರು. ಶರಣ ತತ್ತ್ವ ನಿಜವಾದ ಪ್ರತಿಪಾದಕರಾಗಿದ್ದರು. ವೀರಶೈವ ಲಿಂಗಾಯತ ಸಮುದಾಯಕ್ಕೆ ಸಾಕಷ್ಟು ಶ್ರಮಿಸಿದರು. ಮುತ್ಸದ್ಧಿ ರಾಜಕಾರಣಿಯಾಗಿದ್ದ ಅವರು ಯುವಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ. ಅವರ ನಿಧನ ಸಮಸ್ತ ನಾಡಿಗೆ ಹಾಗೂ ಸಮುದಾಯಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಶ್ರದ್ಧಾಂಜಲಿ:
ಬೆಳಗಾವಿ ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭೆಯ ಘಟಕದಲ್ಲಿ ಡಾ.ಎನ್.ತಿಪ್ಪಣ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ಅಪ್ಪಟ್ಟ ಬಸವ ಅನುಯಾಯಿಗಳಾಗಿದ್ದ ತಿಪ್ಪಣ್ಣ ಅವರು ಮಹಾಸಭೆಯನ್ನು ಕ್ರಿಯಾಶೀಲ ಹಾಗೂ ರಚನಾತ್ಮಕವಾಗಿ ಕಟ್ಟಿ ಬೆಳೆಸಿದರು. ಹಾನಗಲ್ ಕುಮಾರಸ್ವಾಮಿಗಳು ಸ್ಥಾಪಿಸಿದ ಮಹಾಸಭೆಯ ಧ್ಯೇಯೋದ್ದೇಶಗಳನ್ನು ಅನುಷ್ಠಾನಕ್ಕೆ ತಂದರು. ಅವರ ಪಾದರಸದ ವ್ಯಕ್ತಿತ್ವದಿಂದ ಮಹಾಸಭೆ ನಾಡಿನಾದ್ಯಂತ ಅನೇಕ ಸಮಾಜಮುಖಿ ಕೆಲಸಗಳನ್ನು ಕೈಗೊಂಡಿದ್ದು ಸರ್ವವಿಧಿತ. ಅವರ ಅಗಲಿಕೆ ವೀರಶೈವ ಲಿಂಗಾಯತ ಸಮುದಾಯವನ್ನು ಬಡವಾಗಿಸಿದೆ ಎಂದರು.
ಮಹಾಸಭೆಯ ಎಲ್ಲ ಪದಾಧಿಕಾರಿಗಳು ಶ್ರದ್ಧಾಂಜಲಿ ಸಮರ್ಪಿಸಿದರು. ಡಾ.ಎಫ್.ವಿ.ಮಾನ್ವಿ, ಪ್ರಸಾದ ಹಿರೇಮಠ, ಸರೋಜಿನಿ ನಿಶಾನ್ದಾರ್, ಶೈಲಜಾ ಸಂಸುದ್ದಿ, ಮಹೇಶ ಗುರಣಗೌಡರ, ಪ್ರವೀಣ ತವಕರಿ ಇತರರಿದ್ದರು.