ಜಿಲ್ಲೆ

ಶಿಕ್ಷಣ ಕ್ಷೇತ್ರಕ್ಕೆ ಡಾ. ವಜ್ರಕುಮಾರ ಕೊಡುಗೆ ಅನನ್ಯ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡವು ಶಿಕ್ಷಣ ಕಾಶಿಯಾಗಿ ಹೆಸರುವಾಸಿಯಾಗಲು ಡಾ. ನ. ವಜ್ರಕುಮಾರ ಅವರ ಕೊಡುಗೆ ಅನನ್ಯ. ಅವರು ಶೈಕ್ಷಣಿಕ ಲೋಕದ ಧ್ರುವತಾರೆ ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಹೇಳಿದರು.
ನಗರದ ವಿದ್ಯಾಗಿರಿ ಜೆಎಸ್‌ಎಸ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಡಾ. ನ. ವಜ್ರಕುಮಾರ ಅವರ ದ್ವಿತೀಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಚ್ಚುವ ಸ್ಥಿತಿಯಲ್ಲಿದ್ದ ಜನತಾ ಶಿಕ್ಷಣ ಸಮಿತಿಯನ್ನು ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಆಶೀರ್ವಾದದಿಂದ ತಮ್ಮ ಸುಪರ್ದಿಗೆ ಪಡೆದರು. ಅವನತಿಯ ಹಂತದಲ್ಲಿದ್ದ ಸಂಸ್ಥೆಯನ್ನು ಬೃಹದಾಕಾರವಾಗಿ ಬೆಳೆಸಿದರು. ಸಂಸ್ಥೆಯು ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ನೀಡಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುತ್ತಿದೆ ಎಂದರು.
ಡಾ. ವಜ್ರಕುಮಾರ ಅವರ ಒಡನಾಡಿಯಾಗಿದ್ದ ಶ್ರೀಧರ ಹೆಗಡೆ ಮಾತನಾಡಿ, ಸಂಸ್ಥೆಯ ಶ್ರೇಯೋಭಿವೃದ್ಧಿಯ ವಿಚಾರದಲ್ಲಿ ಹಿಂಜರಿಯುತ್ತಿರಲಿಲ್ಲ. ತೆಗೆದುಕೊಳ್ಳುತ್ತಿದ್ದ ಪ್ರತಿಯೊಂದು ನಿರ್ಧಾರಗಳು ಜನಪರ ಕಾಳಜಿ ಹೊಂದಿದ್ದವು. ಜೆಎಸ್‌ಎಸ್ ಬಗ್ಗೆ ಅಪಹಾಸ್ಯ ಮಾಡಿದವರ ಮುಂದೆ ಅದನ್ನು ಬೆಳೆಸಿ ಅದರ ವಿಜಯಮಾಲೆಯನ್ನು ಪೂಜ್ಯ ಹೆಗ್ಗಡೆಯವರಿಗೆ ತೋಡಿಸಿದ ಧೀಮಂತ ನಾಯಕ. ಕೆಲಸದಲ್ಲಿ ವಜ್ರದಂತೆ ಕಠಿಣವಾಗಿರುತ್ತಿದ್ದರು. ಸಿಬ್ಬಂದಿಯನ್ನು ಪ್ರೀತಿ, ಕಾಳಜಿ, ಶಿಸ್ತಿನಿಂದ ಬೆಳೆಸಿದರು. ಮೈಲಾರಲಿಂಗ ಬೆಟ್ಟ ಇಂದು ವಿದ್ಯಾಗಿರಿಯಾಗಿರುವುದು ವಜ್ರಕುಮಾರ ಅವರಿಂದ ಎಂಬುದು ಚಿರಸತ್ಯ. ಅವರ ಶೈಕ್ಷಣಿಕ ಕೊಡುಗೆ ಚಿರಸ್ಮರಣೀಯ ಎಂದರು.
ಮಹಾವೀರ ಉಪಾಧ್ಯೆ ನಿರೂಪಿಸಿದರು. ಡಾ. ಸೂರಜ್ ಜೈನ್, ಡಾ. ಜಿನದತ್ತ ಹಡಗಲಿ, ಜೆಎಸ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ಉಪಸ್ಥಿತರಿದ್ದರು.