ಜಿಲ್ಲೆ

ಡಿಕೆಶಿ ಸಿಎಂ ಆಗುವುದು ಖಚಿತ: ಡಿಸಿಎಂ ಪರ ನಿಶ್ಚಲಾನಂದನಾಥ ಸ್ವಾಮೀಜಿ ಬ್ಯಾಟಿಂಗ್

ಮಂಡ್ಯ: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಪರ ಕೆಂಗೇರಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಉತ್ತರಾಧಿಕಾರಿ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಬ್ಯಾಟಿಂಗ್ ಮಾಡಿದ್ದಾರೆ. ಅಂತೆಯೇ ಡಿಕೆಶಿ ಸಿಎಂ ಆಗುವುದು ಖಚಿತವೆಂದು ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿ, ಸಿಎಂ ಸ್ಥಾನ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಕಳೆದ ವಿಧಾನಸಭಾ ಚುನಾವಣೆ ವೇಳೆ ಬಹಳಷ್ಟು ಕಷ್ಟಪಟ್ಟು ಪಕ್ಷ ಮುನ್ನಡೆಸಿದ್ದಾರೆ. ಪಕ್ಷದ ಹಿರಿಯರಿಗೆ ಸಿಎಂ ಆಗುವ ಹಂಬಲ ಇದ್ದೇ ಇರುತ್ತದೆ. ಡಿ.ಕೆ.ಶಿವಕುಮಾರ್ ಇಷ್ಟಪಡುವ ಎಲ್ಲರಿಗೂ ಅವರು ಸಿಎಂ ಆಗಲಿ ಎಂಬ ಬಯಕೆ ಇರುತ್ತದೆ. ಅದೇ ರೀತಿ ನಾವೂ ಕೂಡ ಅವರು ಸಿಎಂ ಆಗಲಿ ಎಂದು ಬಯಸುತ್ತೇವೆ ಎಂದಿದ್ದಾರೆ.

ಡಿ.ಕೆ.ಶಿವಕುಮಾರ್ ಶಿಸ್ತಿನ ಸಿಪಾಯಿ. ತಾಳ್ಮೆಯಿಂದ ಕಾಯ್ದು, ಒಳ್ಳೆಯ ಸ್ಥಾನ ಪಡೆದುಕೊಳ್ಳುತ್ತಾರೆ. ಅವರನ್ನ ಹತ್ತಿರದಿಂದ ನೋಡಿದ್ದೇವೆ. ಯಾವುದಕ್ಕೂ ಆತುರಪಡುವುದಿಲ್ಲ. ಸಂಯಮದಿಂದ ಪಕ್ಷವನ್ನ ಮುನ್ನಡೆಸಿ ಇಲ್ಲಿಯವರೆಗೆ ತಂದಿದ್ದಾರೆ. ಹೈಕಮಾಂಡ್ ಅಪೇಕ್ಷೆ ಮೇರೆಗೆ ಅಧಿಕಾರ ಪಡೆದುಕೊಳ್ಳುತ್ತಾರೆ. ಅದೇ ರೀತಿ ಡಿ.ಕೆ.ಶಿವಕುಮಾರ್ ಸಿಎಂ ಆಗೇ ಆಗುತ್ತಾರೆ. ಒಕ್ಕಲಿಗ ಸಮುದಾಯ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದು ಬೆಂಬಲಿಸಿತ್ತು. ಮೈಸೂರು ಭಾಗದಲ್ಲಿ ಹೆಚ್ಚು ಒಲವು ತೋರಿದ್ದಕ್ಕಾಗಿ 136 ಸ್ಥಾನಗಳು ದೊರಕಿತು. ಪಕ್ಷವನ್ನ ಹೆಚ್ಚು ಪ್ರೀತಿಸುತ್ತಾರೆ. ಹೈಕಮಾಂಡ್ ಯಾವ ನಿರ್ಧಾರ ಮಾಡಲಿದೆ ಎನ್ನುವುದನ್ನು ಕಾದು ನೋಡೋಣ. ದೇವರ ಅನುಗ್ರಹ ಅವರ ಮೇಲೆ ಇರಲಿ ಎಂದು ಹಾರೈಸಿದರು.