ಜಿಲ್ಲೆ

ಸಿಇಟಿ ಪರೀಕ್ಷೆ ಗೊಂದಲ ನಿವಾರಿಸಲು ಕುಪ್ಮಾ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಆಗ್ರಹ

Mangaluru - Hariprasad Rai


ಮಂಗಳೂರು : ಸಿಇಟಿ ಪರೀಕ್ಷೆಯಲ್ಲಿ 45ಕ್ಕೂ ಅಧಿಕ ಪಶ್ನೆಗಳನ್ನು ಪಠ್ಯದ ಹೊರತಾಗಿ ಕೇಳಲಾಗಿದ್ದು , ವಿದ್ಯಾರ್ಥಿಗಳ ಭವಿಷ್ಯ ಆತಂಕದಲ್ಲಿದೆ. ಕರ್ನಾಟಕ ಪರೀಕ್ಷಾ ಮಂಡಳಿ ಮತ್ತು ರಾಜ್ಯ ಸರ್ಕಾರ ಸಿಇಟಿ ಪರೀಕ್ಷೆಯಲ್ಲಿ ಆಗಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಹಾರ ನೀಡಬೇಕೆಂದು ಕರ್ನಾಟಕ ಅನುದಾನರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ (ಕುಪ್ಮಾ) ಆಗ್ರಹಿಸಿದೆ.
ಇಂಜಿನಿಯರಿಂಗ್ ಸಹಿತ ಇತರ ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕಾಗಿ ಈ ವರ್ಷ ನಡೆದ ಸಿಇಟಿ ಪರೀಕ್ಷೆಯು ವಿದ್ಯಾರ್ಥಿಗಳಿಗೆ, ಹೆತ್ತವರಿಗೆ ಗೊಂದಲದ ಆತಂಕದ ಗೂಡಾಗಿದೆ. ಕರ್ನಾಟಕ ಪಿಯು ಬೋರ್ಡ್ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅಳವಡಿಸುವ ಪಠ್ಯಕ್ರಮದ ಆಧಾರದ ಮೇಲೆ ಕರ್ನಾಟಕ ಪರೀಕ್ಷಾ ಮಂಡಳಿ ( ಕೆಇಎ) ಸಿಇಟಿ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಬೇಕು. ಆದರೆ ಈ ವರ್ಷದ ಸಿಇಟಿಯ ನಾಲ್ಕು ಪರೀಕ್ಷೆಗಳಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪಠ್ಯ ಪುಸ್ತಕದಿಂದ ತೆಗೆದು ಹಾಕಿರುವ ಅಧ್ಯಾಯಕ್ಕೆ ಸಂಬಂಧಿಸಿದ 45ಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಕುಪ್ಮಾ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ವರ್ಷದ ಪ್ರಶ್ನೆಪತ್ರಿಕೆಯನ್ನು ಈ ವರ್ಷ ಪರೀಕ್ಷೆಯಲ್ಲಿ ನೀಡಿದ್ದಾರೆ ಎನ್ನುವ ವಿಷಯ ಮೇಲ್ನೋಟಕ್ಕೆ ಕಂಡುಬಂದಿದೆ.
ಪರೀಕ್ಷೆ ಬರೆಯುವಾಗ ವಿದ್ಯಾರ್ಥಿಗಳಲ್ಲಾದ ಮಾನಸಿಕ ತಳಮಳಕ್ಕೆ ಹೊಣೆ ಯಾರು ? ಸಿಲೆಬಸ್‌ನಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳುವಲ್ಲಿ ತಜ್ಞ ಉಪನ್ಯಾಸಕರ ತಂಡ ಗಮನ ಹರಿಸಿಲ್ಲವೇ? ಈ ಪ್ರಶ್ನೆ ಪತ್ರಿಕೆಯನ್ನು ಮರು ಪರಿಶೀಲಿಸಿಲ್ಲವೇ ಎನ್ನುವ ಪ್ರಶ್ನೆ ಉದ್ಭವಿಸಿದೆ. ಸಿಇಟಿ ಪರೀಕ್ಷೆಯ ಗೊಂದಲದ ಬಗ್ಗೆ ಮತ್ತು ಪಠ್ಯದ ಹೊರತಾಗಿ ಬಂದಿರುವ ಪ್ರಶ್ನೆಗಳ ಬಗ್ಗೆ ಕೆಇಎ ತಕ್ಷಣ ಸ್ಪಷ್ಟೀಕರಣ ನೀಡಬೇಕು. ಇದು ಸರ್ಕಾರದ ಕರ್ತವ್ಯ ಎಂದು ಅವರು ಹೇಳಿದರು.
ಒಂದೆರಡು ಪ್ರಶ್ನೆಗಳು ಸಿಲೆಬಸ್‌ನ ಹೊರತಾಗಿರುವ ಬರುವುದು ಸಹಜ .ಆದರೆ 45ಕ್ಕಿಂತ ಹೆಚ್ಚು ಪ್ರಶ್ನೆಗಳು ಪಠ್ಯದ ಹೊರತಾಗಿ ಬಂದಿರುವುದು ಪರೀಕ್ಷೆಯ ಬಗ್ಗೆ ಇದ್ದ ಭರವಸೆಯನ್ನೇ ಹುಸಿಯಾಗಿಸಿದೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ಆತಂಕದಲ್ಲಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಗಮನ ಸೆಳೆದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಕೆಇಎ ಮತ್ತು ಸರ್ಕಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಹಾರ ಕೊಡಬೇಕು. ವಿದ್ಯಾರ್ಥಿಗಳಿಗೆ ನೇರವಾಗಿ ಕೃಪಾಂಕ ನೀಡುವುದೇ, ಪುನರ್ ಪರೀಕ್ಷೆ ನಡೆಸುವುದೇ ಅಥವಾ ಪಠ್ಯದ ಹೊರತಾಗಿ ಬಂದಿರುವ ಪ್ರಶ್ನೆಗಳನ್ನು ಕೈಬಿಟ್ಟು ಉಳಿದ ಪ್ರಶ್ನೆಗಳನ್ನು ಮಾತ್ರವೇ ಅಂಕ ಪರಿಗಣನಗೆ ತೆಗೆದುಕೊಳ್ಳುವುದೇ ಎನ್ನುವ ಬಗ್ಗೆ ತಜ್ಞರೊಂದಿಗೆ ಚರ್ಚಿಸಬೇಕು ಎಂದು ಕುಪ್ಮಾ ಕಾರ್ಯದರ್ಶಿ ಪ್ರೊ.ನರೇಂದ್ರ ಎಲ್ ನಾಯಕ್ ಹೇಳಿದರು.
ಕುಪ್ಮಾ ಗೌರವಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಉಪಾಧ್ಯಕ್ಷರಾದ ಯುವರಾಜ್ ಜೈನ್, ಡಾ.ಸುಧಾಕರ ಶೆಟ್ಟಿ, ಡಾ.ಮಂಜುನಾಥ್ ರೇವಣ್ಕರ್, ಜತೆ ಕಾರ್ಯದರ್ಶಿ ವಿಶ್ವನಾಥ ಶೇಷಾಚಲ ಉಪಸ್ಥಿತರಿದ್ದರು