ಜಿಲ್ಲೆ

ಸರಣಿ ಮದುವೆಯ ಸರದಾರ…!

ಶಶಿಕಾಂತ ಮೆಂಡೆಗಾರ, ವಿಜಯಪುರ
ಒಬ್ಬೊಬ್ಬರಿಗೆ ಒಂದೊಂದು ಖಯಾಲಿ ಇರುತ್ತದೆ. ಅದರಂತೆ ಇಲ್ಲೊಬ್ಬ ಸರ್ಕಾರಿ ವೈದ್ಯನಿಗೆ ಒಂದಾದ ಮೇಲೊಂದರಂತೆ ಮದುವೆಯಾಗೋ ಖಯಾಲಿ ಇದ್ದಂತಿದೆ. ಹೀಗಾಗಿಯೇ ಒಂದಲ್ಲ ಎರಡಲ್ಲ ಮೂರು ಮದುವೆಯಾಗಿದ್ದಾನೆ. ಅದೂ ಸಾಲದೆಂಬಂತೆ ಇದೀಗ ನಾಲ್ಕನೇ ಮದುವೆಯಾಗಲು ಸಿದ್ಧವಾಗಿದ್ದಾನಂತೆ. ಹೀಗಾಗಿ ಅನ್ಯಾಯಕ್ಕೊಳಗಾದ ಮೂರನೇ ಪತ್ನಿ ನ್ಯಾಯಕ್ಕಾಗಿ ಮಹಿಳಾ ಠಾಣೆ ಮೆಟ್ಟಿಲೇರಿದ್ದಾರೆ. ಸರಣಿ ಮದುವೆಯ ಸರದಾರನ ಕುರಿತು ವರದಿ ಇಲ್ಲಿದೆ.
ಹೌದು. ಮೊದಲೆರಡು ಮದುವೆ ಮುಚ್ಚಿಟ್ಟು ನನ್ನನ್ನು ಮದುವೆಯಾಗಿ ವಂಚಿಸಿದ್ದಲ್ಲದೆ ಇದೀಗ ನಾಲ್ಕನೇ ಮದುವೆಯಾಗಲು ಹೊರಟಿದ್ದಾನೆ ಎಂದು ವಿಜಯಪುರ ನಗರ ನಿವಾಸಿ ನೀತಾ ಎಂಬುವವರು ತನ್ನ ಪತಿ ಮಂಜುನಾಥ ಸೊಪ್ಪಿಮಠ ವಿರುದ್ಧ ವಿಜಯಪುರ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಂದಹಾಗೆ ಮಂಜುನಾಥ ವೃತ್ತಿಯಲ್ಲಿ ಸರ್ಕಾರಿ ವೈದ್ಯನಾಗಿದ್ದು, ಆನೆಕಲ್ ತಾಲೂಕಿನ ಇಂದಲವಾಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಸರ್ಕಾರಿ ವೈದ್ಯನಾಗಿದ್ದರೂ ಈ ಮೊದಲೇ ಎರಡು ಮದುವೆಯಾಗಿರುವ ವಿಚಾರ ಬಚ್ಚಿಟ್ಟು ನೀತಾರನ್ನು ಮೂರನೇ ಮದುವೆಯಾಗಿದ್ದನಂತೆ. ಈಗ ಇವರನ್ನು ಬಿಟ್ಟು ನಾಲ್ಕನೇ ಮದುವೆಯಾಗಲು ಹೊರಟಿದ್ದಾನೆ ಅದನ್ನು ತಡೆಯಿರಿ ಎಂದು ನೀತಾ ಗೊಳಾಡುತ್ತಿದ್ದಾರೆ. ಧಾರವಾಡ ಮೂಲದ ಮಹಿಳೆಯೊಂದಿಗೆ ಮದುವೆಗೆ ಸಿದ್ಧವಾಗಿರುವ ಮಂಜುನಾಥನಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಗಂಡ ಮಂಜುನಾಥ, ಮಾವ ಶರಣಯ್ಯ, ಅತ್ತೆ ಪಾರ್ವತಿ, ನಾದಿನಿ ವಿನುತಾರ ವಿರುದ್ಧವೂ ನೀತಾ ದೂರು ನೀಡಿದ್ದಾರೆ.

ಮ್ಯಾರೇಜ್ ಬ್ಯುರೋ ಮೂಲಕ ಪರಿಚಯ

ನೀತಾಗೆ ಕಲಬುರ್ಗಿ ಮೂಲದ ವೈದ್ಯನ ಪರಿಚಯವಾಗಿದ್ದು ಮ್ಯಾರೇಜ್ ಬ್ಯೂರೋ ಮೂಲಕ. ಮುಂದೆ ಮಾತುಕತೆಯಾಗಿ ಡಾ. ಮಂಜುನಾಥ ನೀತಾರನ್ನು 2013 ಡಿಸೆಂಬರ್ 25ರಂದು ಕುಣಿಗಲ್ನ ಯಡಿಯೂರು ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ಮದುವೆಯಾಗಿದ್ದನಂತೆ. ಮದುವೆಯಾದ ವರ್ಷದ ಬಳಿಕ ತನ್ನ ಗಂಡ ಮಂಜುನಾಥನ ಅಸಲೀಯತ್ತು ಬಯಲಾಗಿದೆ. ಈಗಾಗಲೇ ಬೆಂಗಳೂರು ಮೂಲದ ಒಬ್ಬಳನ್ನು ಹಾಗೂ ಹಾಸನ ಮೂಲದ ಒಬ್ಬಳನ್ನು ಮದುವೆಯಾಗಿದ್ದು, ತಾನು ಮೂರನೇಯವಳು ಎಂಬ ವಿಚಾರ ನೀತಾರಿಗೆ ಗೊತ್ತಾಗಿದೆ. ಅದನ್ನು ಪ್ರಶ್ನಿಸಿದ್ದಕ್ಕೆ ಮನೆಯವರೆಲ್ಲ ಸೇರಿ ನೀತಾರನ್ನು ಹೊರಹಾಕಿದ್ದಾರಂತೆ.
ಅದಾದ ಬಳಿಕ ನೀತಾ 2015ರಲ್ಲಿ ವಿಜಯಪುರದ ಆದರ್ಶನಗರ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಆಗ ಬಂದ ಮಂಜುನಾಥ ತನ್ನದು ತಪ್ಪಾಗಿದೆ ಎಂದು ತಪ್ಪೊಪ್ಪಿಗೆ ನೀಡಿ ನೀತಾರೊಂದಿಗೆ ಸಂಸಾರ ನಡೆಸಿದ್ದಾನೆ. ತನಗೆ ಮದುವೆಯಾಗಿಲ್ಲ ಎಂದು ನಂಬಿಸಿ ಮೂರನೇ ಮದುವೆ ಮಾಡಿಕೊಂಡ ಮಂಜುನಾಥನ ವಿರುದ್ಧ ನೀತಾ 2016ರಲ್ಲಿ ತುಮಕೂರಿನಲ್ಲಿ ಕೇಸ್ ದಾಖಲಿಸಿದ್ದಾರೆ. ಪ್ರಕರಣ ಇನ್ನು ನ್ಯಾಯಾಲಯದಲ್ಲಿ ಇರುವಾಗಲೇ ಮತ್ತೊಂದು ಮದುವೆಗೆ ಹೊರಟಿದ್ದರಿಂದ ನೀತಾ ಇದೀಗ ಮತ್ತೊಂದು ಕೇಸ್ ದಾಖಲಿಸಿದ್ದಾರೆ.

ಕೇಸ್ ದಾಖಲಿಸಿಕೊಂಡ ಮಹಿಳಾ ಠಾಣೆ ಪೊಲೀಸರು ಡಾ. ಮಂಜುನಾಥನ ಮ್ಯಾರೇಜ್ ಲೀಲೆಯ ಕುರಿತು ತನಿಖೆ ಆರಂಭಿಸಿದ್ದಾರೆ. ತನ್ನ ಮೇಲಿರುವ ಆರೋಪದ ಬಗ್ಗೆ ಮಾತನಾಡಲು ನಿರಾಕರಿಸಿರುವ ವೈದ್ಯ ಮಂಜುನಾಥ, ಪೊಲೀಸ್ ಠಾಣೆಯಲ್ಲಿ ಹಾಗೂ ಕೋರ್ಟ್‌ನಲ್ಲೇ ಉತ್ತರಿಸುವುದಾಗಿ ತಿಳಿಸಿದ್ದಾರೆ. ಹಾಗಾಗಿ ಪೊಲೀಸರ ಸಂಪೂರ್ಣ ತನಿಖೆ ಬಳಿಕವೇ ಡಾ. ಮ್ಯಾರೇಜ್ ಸ್ಟೋರಿಯ ಸತ್ಯಾಸತ್ಯತೆ ಬಯಲಾಗಲಿದೆ.

ಮೊದಲೇ ಎರಡು ಮದುವೆಯಾಗಿದ್ದರೂ ಆ ವಿಷಯವನ್ನು ಮುಚ್ಚಿಟ್ಟು ನನ್ನನ್ನು ಮದುವೆ ಮಾಡಿಕೊಂಡು ವಂಚಿಸಿದ್ದಾರೆ. ತತ್ಸಂಬಂಧ ಪತಿ ಡಾ. ಮಂಜುನಾಥ ವಿರುದ್ಧ ಈಗಾಗಲೇ ಎರಡು ಬಾರಿ ಪೊಲೀಸರಲ್ಲಿ ದೂರು ದಾಖಲಿಸಿದ್ದೇನೆ. ಆದರೂ ಈಗ ಮತ್ತೆ ನಾಲ್ಕನೇ ಮದುವೆಗೆ ಮುಂದಾಗಿರುವ ವಿಷಯ ತಿಳಿದು ಬಂದಿದ್ದು, ಪತಿ ಹಾಗೂ ಅವರ ಕುಟುಂಬದವರ ಮೇಲೆ ದೂರು ದಾಖಲಿಸಿದ್ದೇನೆ.
ನೀತಾ ಸೊಪ್ಪಿಮಠ, ಮಂಜುನಾಥನ ಪತ್ನಿ

ನೀತಾ ಆಕೆಯ ಪತಿ ನಾಲ್ಕನೇ ಮದುವೆ ಆಗುತ್ತಿರುವ ಕುರಿತು ದೂರು ನೀಡಿದ್ದಾರೆ. ನಮ್ಮ ಅಧಿಕಾರಿಗಳು ಡಾ. ಮಂಜುನಾಥ್ ಅವರನ್ನು ಸಂಪರ್ಕಿಸಿದ್ದು, ಠಾಣೆಗೆ ವಿಚಾರಣೆಗೆ ಬರುವಂತೆ ತಿಳಿಸಿದ್ದಾರೆ. ಅವರಿಗೆ ಬುದ್ದಿವಾದ ಹೇಳಲಾಗುವುದು. ಕೇಳದಿದ್ದರೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುವುದು.
ಅನುಪಮ್ ಅಗ್ರವಾಲ್, ಪೊಲೀಸ್ ವರಿಷ್ಠಾಧಿಕಾರಿಗಳು, ವಿಜಯಪುರ