ಜಿಲ್ಲೆ

6ರಂದು ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಸಹಕಾರ ಸಿರಿ ಪ್ರಶಸ್ತಿ ಪ್ರದಾನ

Mangaluru - Hariprasad Rai



ಮಂಗಳೂರು : ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ಸ್ವಂತ ಆಡಳಿತ ಕಚೇರಿ ನಗರದ ಪಂಪ್‌ವೆಲ್‌ನ ಲೋಟಸ್ ಗ್ಯಾಲಕ್ಸಿ ಕಟ್ಟಡದಲ್ಲಿ ಡಿ.6ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ.
ಅತ್ಯಾಧುನಿಕ ಸೌಲಭ್ಯ ಹೊಂದಿರುವ ಈ ಸುಸಜ್ಜಿತ ಕಚೇರಿಯನ್ನು ಒಡಿಯೂರು ಮಠದ ಶ್ರೀ ಗುರುದೇವಾನಂದ ಸ್ವಾಮೀಜಿ
ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಸಹಕಾರ ಸಿರಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.
2011ರಲ್ಲಿ ಆರಂಭಗೊಂಡ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಸಹಕಾರಿ ಕ್ಷೇತ್ರದಲ್ಲಿ ಉತ್ತುಂಗಕ್ಕೆ ಬೆಳೆದು 19 ಶಾಖೆಗಳ ಮೂಲಕ ಕೇವಲ 13 ವರ್ಷಗಳಲ್ಲಿ 500 ಕೋಟಿ ರೂ. ಮೀರಿ ವ್ಯವಹಾರ ನಡೆಸಿದೆ.
ಸಹಕಾರಿ ಕ್ಷೇತ್ರದ ಸಾಧನೆಗೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇವರಿಂದ 2018-2019ನೇ ಸಾಲಿನಲ್ಲಿ ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿ ಹಾಗೂ 69ನೇ ಮತ್ತು 70ನೇ ಅಖಿಲ ಭಾರತ ಸಹಕಾರಿ ಸಪ್ತಾಹಗಳಲ್ಲಿ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಪಡೆದಿದೆ. ಸಂಸ್ಥೆಯ ಸರ್ವಾಂಗೀಣ ಸಾಧನೆಯನ್ನು ಗುರುತಿಸಿ ವಿಜಯಪುರದಲ್ಲಿ ನಡೆದ 70ನೇ ಅಖಿಲ ಭಾರತ ಸಹಕಾರಿ ಸಪ್ತಾಹದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಘದ ಅಧ್ಯಕ್ಷ ಎ.ಸುರೇಶ್ ರೈ ಇವರಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಕೋವಿಡ್‌ನಂತಹ ಸಂಕಷ್ಟದ ಸಂದರ್ಭದಲ್ಲಿ ಆಟೋಚಾಲಕ ಸದಸ್ಯರಿಗೆ ಇನ್ಸೂರೆನ್ಸ್ ನವೀಕರಣಕ್ಕಾಗಿ ಬಡ್ಡಿ ರಹಿತ ಸಾಲವನ್ನು ವಿತರಿಸಿ ಸಹಕರಿಸಿದೆ. ದ.ಕ.ಮತ್ತು ಉಡುಪಿ ಜಿಲ್ಲೆಗಳಲ್ಲಿ 6850 ವಿಕಾಸ ವಾಹಿನಿ ಸ್ವ-ಸಹಾಯ ಗುಂಪುಗಳಲ್ಲಿ 68,000ಕ್ಕೂ ಮಿಕ್ಕಿ ಸದಸ್ಯರು ಸಹಕಾರಿಯ ಸೇವೆ ಪಡೆಯುತ್ತಿದ್ದಾರೆ . ಸಂಘದ 6 ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಎಲ್ಲ ಶಾಖೆಗಳು ಗಣಕೀಕೃತಗೊಳಿಸಿ ಕೋರ್ ಸಿಸ್ಟಂ ಅಳವಡಿಸಲಾಗಿದೆ. ಲೆಕ್ಕಪರಿಶೋಧನೆಯಲ್ಲಿ ಎ ಗ್ರೇಡ್ ಶ್ರೇಣಿಯನ್ನು ಪಡೆದುಕೊಂಡು, ತನ್ನ ಸದಸ್ಯರಿಗೆ ಪ್ರತಿ ವರ್ಷವೂ ಶೇ.15 ಡಿವಿಡೆಂಡ್ ನೀಡುತ್ತಾ ಬಂದಿದೆ.
ವಿಕಾಸವಾಹಿನಿ ಸ್ವಸಹಾಯ ಗುಂಪು ಗ್ರಾಮವಿಕಾಸ ಯೋಜನೆಯಲ್ಲಿ ಹಾಗೂ ಸಹಕಾರಿಯಲ್ಲಿ ಒಟ್ಟು 450ಕ್ಕೂ ಮಿಕ್ಕಿ ಸಿಬ್ಬಂದಿಗಳು ದುಡಿಯುತ್ತಿದ್ದಾರೆ. ಕೃಷಿ ಕ್ಷೇತ್ರವನ್ನು ಉತ್ತೇಜಿಸುವ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಹಕಾರಿಯ ಸಿಬ್ಬಂದಿಗಳಿಗೆ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ತರಬೇತಿ ನೀಡಲಾಗುತ್ತಿದೆ. ಸಾವಯವ ಕೃಷಿಯ ಬಗ್ಗೆ ರೈತರಿಗೆ ತೋಟದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಸ್ವತಃ
ಸಂಘದ ಆಧ್ಯಕ್ಷ ಎ.ಸುರೇಶ್ ರೈ ಅವರು ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.