ಜಿಲ್ಲೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿಗಳಾಗಿ ಡಾ.ಲಕ್ಷ್ಮೀದೇವಿ, ಡಿ.ಟಿ.ಪ್ರಕಾಶ್ ಆಯ್ಕೆ

ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಕ್ಕೆ 2025-30ನೇ ಸಾಲಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಮೈಸೂರು ಪ್ರತಿನಿಧಿಗಳಾಗಿ ವಿಪ್ರ ಮಹಿಳಾ ಸಂಗಮದ ಅಧ್ಯಕ್ಷೆ ಡಾ.ಲಕ್ಷ್ಮೀದೇವಿ ಹಾಗೂ ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಚುನಾಯಿತರಾಗಿದ್ದಾರೆ.

ಕೃಷ್ಣಮೂರ್ತಿಪುರಂನಲ್ಲಿರುವ ಭಗಿನಿ ಸೇವಾ ಸಮಾಜದಲ್ಲಿ ನಿರ್ಮಿಸಿದ್ದ ಮತಗಟ್ಟೆಯಲ್ಲಿ ಒಟ್ಟು 4069 ಮತಗಳಿಗೆ ಸಂಜೆ ವರೆಗೆ 1831ಮತಗಳು ಚಲಾವಣೆಗೊಂಡವು. ಏಳು ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.

ನಾಲ್ಕು ಸಾವಿರಕ್ಕೂ ಹೆಚ್ಚು ಮತದಾರರು ಇರುವುದರಿಂದ ನಿಯಮ ಪ್ರಕಾರ ಜಿಲ್ಲೆಯಿಂದ ಇಬ್ಬರು ಪ್ರತಿನಿಧಿಗಳನ್ನು ಮಹಾಸಭಾಕ್ಕೆ ಕಳುಹಿಸಲು ಅವಕಾಶವಿದೆ. ಅದರಂತೆ ಮೊದಲ ಪ್ರತಿನಿಧಿಯಾಗಿ ಡಾ.ಲಕ್ಷ್ಮೀದೆವಿ 808 ಮತ ಪಡೆದು ಆಯ್ಕೆಯಾದರೆ, ಡಿ.ಟಿ.ಪ್ರಕಾಶ್ 635 ಮತ ಪಡೆಯುವ ಮೂಲಕ ಎರಡನೇ ಪ್ರತಿನಿಧಿಯಾಗಿ ಚುನಾಯಿತರಾದರು.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಭಾನುಪ್ರಕಾಶ್ ಶರ್ಮ ಮತ್ತು ರಘುನಾಥ್ ಕಣದಲ್ಲಿದ್ದರು, ಡಾ.ಲಕ್ಷ್ಮೀದೇವಿ ಅವರು ರಘುನಾಥ್ ಬಣದಲ್ಲಿ ಗುರುತಿಸಿಕೊಂಡಿದ್ದರೆ, ಡಿ.ಟಿ.ಪ್ರಕಾಶ್ ಅವರು ಡಾ.ಭಾನುಪ್ರಕಾಶ್ ಶರ್ಮ ಅವರನ್ನು ಬೆಂಬಲಿಸಿದ್ದರು.

ಉಳಿದಂತೆ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಕಣದಲ್ಲಿದ್ದ ಕಲ್ಕರೆ ನಾಗರಾಜು 555, ಕೆ.ಆರ್.ಜಗದೀಶ್‌ಕುಮಾರ್ 472, ಪ್ರೇಮತನಯ ಶ್ರೀನಿವಾಸ್ 38, ಭಾಗ್ಯಶ್ರೀಭಟ್ 384, ಆರ್.ಎಸ್.ಸತ್ಯನಾರಾಯಣ 527 ಮತಗಳನ್ನು ಪಡೆದಿದ್ದಾರೆ.

ರಾಜ್ಯಾಧ್ಯಕ್ಷರಾಗಿ ಎಸ್.ರಘುನಾಥ್ ಆಯ್ಕೆ:

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷರಾಗಿ ಎಸ್.ರಘುನಾಥ್ ಅವರು 2164 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಎಸ್.ರಘುನಾಥ್ ಅವರು 13,399 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಭಾನುಪ್ರಕಾಶ್ ಶರ್ಮ ಅವರು 11,235 ಮತಗಳನ್ನು ಪಡೆದು ಪರಾಭವಗೊಂಡರು.

ವಿಜೇತ ಪ್ರತಿನಿಧಗಳನ್ನು ಅಭಿಮಾನಿಗಳು, ಮುಖಂಡರು ಅಭಿನಂದಿಸಿದರು. ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ ಪಾರ್ಥಸಾರಥಿ, ಬ್ರಾಹ್ಮಣ ಸಂಘದ ರಾಜ್ಯ ಉಪಾಧ್ಯಕ್ಷ ನಂ.ಶ್ರೀಕಂಠಕುಮಾರ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್ ಸತ್ಯನಾರಾಯಣ್, ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷ ಎಚ್.ಎನ್.ಶ್ರೀಧರಮೂರ್ತಿ, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಮುಖಂಡರಾದ ಅಜಯ್ ಶಾಸ್ತ್ರಿ, ಹೇಮಲತಾ, ಪ್ರಶಾಂತ್ ತಾತಾಚಾರ್ ಕಣ್ಣನ್, ಮುಳ್ಳೂರು ಸುರೇಶ್, ವಿಜಯಕುಮಾರ್, ವಿನಯ್ ಕಣಗಾಲ್, ನಾಗೇಂದ್ರಬಾಬು, ಸುಚೀಂದ್ರ, ಶ್ರೀನಿವಾಸಪ್ರಸಾದ್, ಅರುಣ್, ಶ್ರೀಕಾಂತ್ ಕಶ್ಯಪ್, ಮಿರ್ಲೆ ಫಣೀಶ್, ಎನ್.ಕೆ ಸುಂದರ್, ಅರವಿಂದ, ರಂಗನಾಥ್ ಇನ್ನಿತರರು ಇದ್ದರು.