ಬೆಂಗಳೂರು ದಲಿತ ಸಂಘಟನೆಗಳು ನುಚ್ಚು ನೂರಾಗಿದ್ದು, ಮನೆಗೊಬ್ಬ ‘ರಾಜ್ಯಾಧ್ಯಕ್ಷರು’ ಹುಟ್ಟುಕೊಂಡಿದ್ದಾರೆ. ಏಕಾಧಿಪತ್ಯದ ಸಂಘಟನೆಗಳು ಹೆಚ್ಚಾಗಿರುವುದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಹಿಂದೆ ಸಮತ ಸೈನಿಕ ದಳ, ದಲಿತ ಸಂಘರ್ಷ ಸಮಿತಿ ಹೆಸರು ಕೇಳಿದರೆ ಮೇಲ್ವರ್ಗದವರು ಭಯ ಪಡುವ ಸ್ಥಿತಿ ಇತ್ತು. ಇಂದು ನಮ್ಮ ದುರ್ಬಲ ಶಕ್ತಿಯಿಂದಾಗಿ ಸಂಘಟನೆಗಳ ಶಕ್ತಿ ಕುಂದಿದೆ ಎಂದು ರಾಜ್ಯಸಭಾ ಮಾಜಿ ಸದಸ್ಯ ಡಾ. ಎಲ್. ಹನುಮಂತಯ್ಯ ಬೇಸರ ವ್ಯಕ್ತಪಡಿಸಿದರು.
ಎಸ್.ಶಿವಲಿಂಗಂ ಬರೆದಿರುವ ‘ಭಾರತದ ಕಾಂಡ ಕೊರಕ ಜಾತಿ ಮನಸ್ಸಾಕ್ಷಿ ಮಾತನಾಡಲಿ’ ಎಂಬ ಕೃತಿಯನ್ನು ಭಾನುವಾರ ಗಾಂಧಿ ಭವನದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅಸಂಘಟಿತ ವಲಯದಲ್ಲಿರುವ ಎಲ್ಲ ಶ್ರಮಿಕರು ಸಂಘಟಿತರಾಗಿ ಪ್ರಬಲ ಜ್ಯಾತಿ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಬೇಕಾದ ಅನಿವಾರ್ಯತೆ ಇನ್ನೂ ಇದೆ ಎಂದು ಕರೆ ನೀಡಿದರು.
ಜಾತಿ ವ್ಯವಸ್ಥೆ ಸಮಾಜಕ್ಕೆ ಕಳಂಕವಾಗಿದೆ. ತಮಿಳುನಾಡಿನಲ್ಲಿ ದಲಿತರು ದೇವಸ್ಥಾನಕ್ಕೆ ಹೋದಲ್ಲಿ, ಬೆಂಕಿ ಹಾಕಿ ಸುಡುತ್ತಾರೆ. ಆ ನಂತರ ದೇವರೇ ಬೆಂಕಿ ರೂಪದಲ್ಲಿ ಬಂದು ಕರೆದುಕೊಂಡು ಹೋದ, ಎಂದು ಬಿಂಬಿಸುತ್ತಾರೆ. ಕೇರಳದಲ್ಲಿ ದಲಿತ ಮಹಿಳೆಯರು ‘ಕುಬುಸ’ ತೊಡುವಂತಿರಲಿಲ್ಲ. ಇನ್ನೂ ದೇವದಾಸಿ ಪದ್ಧತಿ ಮಹಿಳೆಯ ಪರಿಸ್ಥಿತಿ ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ನಾವು ಯಾವ ಸಮಾಜದಲ್ಲಿ ಬದುಕುತ್ತಿದ್ದೇವೆ?, ಪ್ರಬಲ ಶಕ್ತಿಗಳ ವಿರುದ್ಧ ಹೋರಾಟ ನಡೆಸಲು ನಾವು ಸಂಘಟಿತರಾಗದ ಹೊರತು ಸಾಧ್ಯವಿಲ್ಲವೆಂದರು.
ಶ್ರೇಷ್ಠ ಭಾರತ, ವಿಕಸಿತ ಭಾರತ ಇವುಗಳಿಗೆ ಆರ್ಥ ಎಲ್ಲಿದೆ?, ದಲಿತರ ಮೇಲಿನ ದೌರ್ಜನ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಆದರೂ, ಮೇಲ್ವರ್ಗದವರ ಜತೆಗೆ ನಮ್ಮ ದಲಿತರು ಸೇರಿ, ನಮ್ಮ ದೇಶ ‘ಭವ್ಯಭಾರತ’ ಎಂದು ಘೋಷಣೆ ಹಾಕಲು ಮುಂದಾಗಿದ್ದಾರೆ ಎಂದರು.
ಈ ಪುಸ್ತಕವನ್ನು ಸಾಮಾನ್ಯ ಜನರಿಗಿಂತ ಜ್ಞಾನಿಗಳು ಓದಬೇಕು. 5 ಸಾವಿರ ವರ್ಷದ ಇತಿಹಾಸವನ್ನು ಈ ಪುಸ್ತಕದಲ್ಲಿ ದಾಖಲು ಮಾಡಲಾಗಿದೆ. ದಲಿತರ ಮೇಲಿನ ದೌರ್ಜನ್ಯಗಳನ್ನು ಇದರಲ್ಲಿ ದಾಖಲಿಸಲಾಗಿದೆ ಎಂದರು.
ಸಾಮಾಜಿಕ ಮುಖಂಡ ಮೋಹನ್ ಕುಮಾರ್ ಮಾತನಾಡಿ, ಜಾತಿ ಶ್ರೇಣಿಕೃತ ವ್ಯವಸ್ಥೆಯಿಂದ ಲ ಪಡೆದವರಿದ್ದಾರೆ. ಅದೇ ರೀತಿ ತಕರಾರು ತೆಗೆಯುವವರು ಸಹ ಇದ್ದಾರೆ. ಧರ್ಮವೇ ಬೇಡ ಎಂದು, ಕ್ರೈಸ್ತ ಧರ್ಮಕ್ಕೆ ಹೋದರು, ವ್ಯಕ್ತಿ ಅಂಟಿಕೊಂಡ ಜಾತಿಯ ಹೆಸರು ಹೋಗುವುದಿಲ್ಲ. ಇಂದಿಗೂ ಅಂತರಜಾತಿ ವಿವಾಹ ಸಹಿಸದವರು ನಡುವೆ ನಾವಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾದಿಗ ದಂಡೋರ ಮುಖಂಡ ಅಂಬಣ್ಣ ಅರೋಲೀಕರ್, ನಾವೇ ಕರ್ನಾಟಕ ಸಂಘಟನೆ ಅಧ್ಯಕ್ಷ ಪಾರ್ವತೀಶ ಬಿಳಿದಾಳೆ ಉಪಸ್ಥಿತರಿದ್ದರು.