ಜಿಲ್ಲೆ

ಕೇಂದ್ರ ಸರ್ಕಾರದಿಂದ ಸಂವಿಧಾನದ ಮೇಲೆ ಗದಾಪ್ರಹಾರ

ಚಿಕ್ಕಮಗಳೂರು: ಸಂವಿಧಾನ ರಕ್ಷಿಸುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ನಗರದಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸೇರಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಧರಣಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಪಕ್ಷದ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ, ಕೇಂದ್ರ ಸರ್ಕಾರ ಆರು ವರ್ಷಗಳಿಂದ ಸಂವಿಧಾನದ ಮೇಲೆ ನಿರಂತರವಾಗಿ ಗದಾಪ್ರಹಾರ ನಡೆಸುವ ಮೂಲಕ ಸಂವಿಧಾನದ ಪಾವಿತ್ರ್ಯೆ ಕೆಡಿಸುತ್ತಿರುವುದಲ್ಲದೆ ಜನರು ಗೊಂದಲದಲ್ಲಿ ಬದುಕುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಇತ್ತೀಚೆಗೆ ಪೌರತ್ವ ಕಾಯ್ದೆ, ಪೌರತ್ವ ನೋಂದಣಿ ಕಾಯ್ದೆಗಳಲ್ಲಿ ತಿದ್ದುಪಡಿ ಮಾಡಿ ದೇಶದ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ ಎಂದು ದೂರಿದರು.

ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ಪ್ರಜೆಗಳ ಅಭಿಪ್ರಾಯ ಕಾಲ ಕಾಲಕ್ಕೆ ಆಲಿಸುವ ಮೂಲಕ ಆಳ್ವಿಕೆ ನಡೆಸುವುದರಿಂದ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತದೆ ಹಾಗೂ ಜನರಿಗೆ ನ್ಯಾಯ ಸಿಗುತ್ತದೆ. ಆದರೆ ಮೋದಿ ಅವರು ಯಾರ ಅಭಿಪ್ರಾಯಗಳಿಗೂ ಮನ್ನಣೆ ನೀಡುತ್ತಿಲ್ಲ. ಇಂತಹ ಬೆಳವಣಿಗೆಗಳನ್ನು ಸಹಿಸಿಕೊಂಡು ಪಕ್ಷ ಸುಮ್ಮನೆ ಕೂರುವುದಿಲ್ಲ ಎಂದು ಹೇಳಿದರು.

ಮಾಜಿ ಸಚಿವ ಸಿ.ಆರ್.ಸಗೀರ್ ಅಹಮ್ಮದ್ ಮಾತನಾಡಿ, ಜನ್ಮದಿನದ ಪ್ರಮಾಣ ಪತ್ರ ನಾನೂ ಸೇರಿದಂತೆ ಈ ದೇಶದ ಕೋಟ್ಯಂತರ ಜನರ ಬಳಿ ಇಲ್ಲ. ಇವರನ್ನೆಲ್ಲ ಎಲ್ಲಿಗೆ ಕಳಿಸುತ್ತಾರೆ ಎಂದು ಪ್ರಶ್ನಿಸಿದರು.

ಸರ್ಕಾರ ಜನರಿಗೆ ಉದ್ಯೋಗ, ಅನ್ನ, ನೀರು, ರಕ್ಷಣೆ ನೀಡುವ ಕೆಲಸ ಮಾಡಲಿ. ಅದು ಬಿಟ್ಟು ಅನವಶ್ಯಕ ಕಾರ್ಯಗಳಿಗೆ ಕಾಲಹರಣ ಮಾಡಬಾರದು ಎಂದರು. ಶಾಸಕ ಟಿ.ಡಿ.ರಾಜೇಗೌಡ, ಮುಖಂಡರಾದ ಡಾ. ಡಿ.ಎಲ್.ವಿಜಯಕುಮಾರ್, ಎಂ.ಎಲ್.ಮೂರ್ತಿ, ಗಾಯತ್ರಿ ಶಾಂತೇಗೌಡ, ಜಿ.ಎಚ್.ಶ್ರೀನಿವಾಸ್, ಎಂ.ಸಿ.ಶಿವಾನಂದಸ್ವಾಮಿ, ಕೆ.ಮಹಮ್ಮದ್, ರೇಖಾಹುಲಿಯಪ್ಪ ಗೌಡ, ಕೆ.ಎಸ್.ಆನಂದ್ ಮಾತನಾಡಿದರು. ಮುಖಂಡರಾದ ಮಂಜೇಗೌಡ, ಚಂದ್ರೇಗೌಡ, ಸಿಲ್ವರ್​ಸ್ಟರ್, ಜಿ.ಬಿ.ಪವನ್, ಮಹಮ್ಮದ್ ಮುದಾಫಿರ್, ಕೃಷ್ಣೇಗೌಡ, ಸತೀಶ್ ಮಹಡಿಮನೆ, ಸುರೇಖಾ ಸಂಪತ್ ಪ್ರತಿಭಟನೆಯಲ್ಲಿದ್ದರು.