ಬೆಳಗಾವಿ: ನಗರದ ದೆವರಾಜ ಅರಸು ಬಡಾವಣೆಯಲ್ಲಿರುವ ನಾಗನೂರು ಶಿವಬಸವೇಶ್ವರ ಟ್ರಸ್ಟ್‌ನ ಶ್ರೀಮತಿ ಬಸವಂತಯ್ಯ ಹಿರೇಮಠ ವೃದ್ಧಾಶ್ರಮಕ್ಕೆ ಗೋಕಾಕದ ಕೆಎಲ್‌ಇ ಸಂಸ್ಥೆಯ ಮಹಾದೇವಪ್ಪಣ್ಣ ಮುನವಳ್ಳಿ ಶಾಲೆಯ ವಿದ್ಯಾರ್ಥಿಗಳು ಭೇಟಿ ನೀಡಿ ಹಿರಿಯ ನಾಗರಿಕರೊಂದಿಗೆ ಬೆರೆತು ನಲಿದರು.
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಜನ್ಮದಿನ ನಿಮಿತ್ತ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಡಿ ವೃದ್ಧಾಶ್ರಮಕ್ಕೆ ಭೇಟಿ ನೀಡಿದರು. ಪ್ರಾಚಾರ್ಯೆ ನಂದಾ ಚುನಮುರಿ ಮಾತನಾಡಿ, ಡಾ.ಪ್ರಭಾಕರ ಕೋರೆ ಅವರು ಸಮಾಜಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ. ಅವರ ದಾರಿಯಲ್ಲಿ ನಾವು ಮುನ್ನೆಡೆಯಬೇಕಾಗಿದೆ. ಮಕ್ಕಳಲ್ಲಿ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯ ತುಂಬುವ ಪ್ರಯತ್ನವಾಗಿ ಈ ಭೇಟಿ ಆಯೋಜಿಸಲಾಗಿದೆ ಎಂದರು. ಆಶ್ರಮಕ್ಕೆ ದವಸ-ಧಾನ್ಯ ನೀಡಿದರು. ಪ್ರಕಾಶ ಪಾಟೀಲ, ಚೇತನಾ ಪಾಟೀಲ, ಸುಜಾತಾ ತೊಂಡಿಕಟ್ಟಿ, ನಂದಾದೀಪಾ ಶಿರಾಳಕರ, ಶ್ರೀಲೈಲ ಕೊಳದುರ್ಗಿ ಆಗಮಿಸಿದ್ದರು. ಸಂಸ್ಥೆಯ ಸಂಯೋಜಕ ಎಂ.ಎಸ್.ಚೌಗಲಾ ವೃದ್ಧಾಶ್ರಮದ ಕಾರ್ಯಚಟುವಿಕೆಗಳ ಬಗ್ಗೆ ವಿವರಿಸಿದರು. ಪ್ರಾಚಾರ್ಯ ಕಿರಣ ಚೌಗಲಾ ಉಪಸ್ಥಿತರಿದ್ದರು.