ಜಿಲ್ಲೆ

ಅಂತಿಮ ತೀರ್ಪಿನಲ್ಲಿದೆ ಸಂಕಷ್ಟ ಸೂತ್ರ: ಕಾವೇರಿ ಕುಟುಂಬದ ಮುಖ್ಯಸ್ಥ ಡಾ.ಕೆ.ಸಿ.ಬಸವರಾಜು ಮಾಹಿತಿ

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಅಭಾವದಿಂದ ಉಂಟಾಗುವ ನೀರಿನ ಕೊರತೆ ಪ್ರಮಾಣ ಲೆಕ್ಕ ಹಾಕಿ ನಾಲ್ಕು ರಾಜ್ಯಗಳಿಗೆ ನೀರು ಹಂಚಿಕೆ ಮಾಡುವ ಸಂಕಷ್ಟ ಸೂತ್ರ ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನಲ್ಲಿದೆ ಎಂದು ಕಾವೇರಿ ಕುಟುಂಬದ ಮುಖ್ಯಸ್ಥ ಡಾ.ಕೆ.ಸಿ.ಬಸವರಾಜು ತಿಳಿಸಿದರು.

ಅಂತಿಮ ತೀರ್ಪಿನ 5ನೇ ಸಂಪುಟದ 7ನೇ ಅಧ್ಯಾಯದ 212ನೇ ಪುಟದಲ್ಲಿ ಕಾಲಂ 28ರಲ್ಲಿ ಸಂಕಷ್ಟ ಸೂತ್ರದ ಬಗ್ಗೆ ತಿಳಿಸಿದೆ. ಸಾಮಾನ್ಯವಾಗಿ ಕಾವೇರಿ ಜಲಾನಯನ ಪ್ರದೇಶದ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಪುದುಚೇರಿ ಭಾಗಗಳಲ್ಲಿ ಬೀಳುವ ಮಳೆ ಆಧರಿಸಿ 740 ಟಿ.ಎಂ.ಸಿ ನೀರು ಸಿಗುತ್ತದೆ. ನಾಲ್ಕೂ ರಾಜ್ಯಗಳಿಗೆ ಒಂದು ನೀರಾವರಿ ವರ್ಷದಲ್ಲಿ(ಜೂ.1 ರಿಂದ ಮೇ 30ರವರೆಗಿನ) ಮಳೆ ಕೊರತೆ ಕಾರಣಕ್ಕೆ ಅಷ್ಟೂ ನೀರು ಒದಗದಿದ್ದರೆ ಅದನ್ನು ಸಂಕಷ್ಟ ಸ್ಥಿತಿ ಎಂದು ಇದೇ ಸಂಪುಟದ 7ನೇ ಅಧ್ಯಾಯದ ಕಾಲಂ 11ರಲ್ಲಿ ಹೇಳಲಾಗಿದೆ ಎಂದು ಸುದ್ಧಿಗೋಷ್ಠಿಯಲ್ಲಿ ಹೇಳಿದರು.

ನೀರಾವರಿ ವರ್ಷದಲ್ಲಿ ಮಳೆಯ ಕೊರತೆ ಕಾರಣಕ್ಕೆ 740 ಟಿ.ಎಂ.ಸಿ ನೀರು ದೊರಕದಿದ್ದರೆ ಅದನ್ನು ಸಂಕಷ್ಟ ಸ್ಥಿತಿ ಎಂದು ಪರಿಗಣಿಸಿ, ನೀರಿನ ಕೊರತೆಯ ಪ್ರಮಾಣವನ್ನು ಲೆಕ್ಕ ಹಾಕಿ, ಈ ಕೊರತೆಯ ಪ್ರಮಾಣವನ್ನು ಸಂಬಂಧಿತ ರಾಜ್ಯಗಳು ಕೊರತೆಯ ಪ್ರಮಾಣಾನುಪಾತದಲ್ಲಿ ತಮ್ಮ ಪಾಲನ್ನು ಪಡೆಯುವುದೆಂದು ಸೂತ್ರದಲ್ಲಿ ಹೇಳಿದೆ. ರಾಜ್ಯಗಳ ನೀರಿನ ಪಾಲನ್ನು ಕಾವೇರಿ ನೀರು ನಿಯಂತ್ರಣ ಸಮಿತಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ತವ್ಯ ಮತ್ತು ಜವಾಬ್ದಾರಿಯ ಭಾಗವಾಗಿ ಒಟ್ಟು ಕೊರತೆಯ ಪ್ರಮಾಣ ಲೆಕ್ಕ ಹಾಕಲಾಗುತ್ತದೆ. ಅಂತೆಯೇ ಆ ಪ್ರಮಾಣಕ್ಕೆ ಅನುಗುಣವಾಗಿ ಕರ್ನಾಟಕ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳಿಗೆ ಖಚಿತ ಮಾಡಿ ಹಂಚುವುದು ಕಾವೇರಿ ನ್ಯಾಯಾಧೀಕರಣ ಅಂತಿಮ ತೀರ್ಪಿನ 5ನೇ ಸಂಪುಟದಲ್ಲಿ, 7ನೇ ಅಧ್ಯಾಯದ 212ನೇ ಪುಟದ ಕಲಂ 28ರಲ್ಲಿ ಈ ಸೂತ್ರವನ್ನು ನೀಡಿದೆ ಎಂದು ಹೇಳಿದರು.

ಕಾವೇರಿ ನ್ಯಾಯಾಧೀಕರಣ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಮಳೆಯ ಕೊರತೆ ಎದುರಾಗಿ ಯಾವ ಸಂಕಷ್ಟ ಇಲ್ಲದೇ ಇದ್ದುದ್ದರಿಂದ ಸಂಕಷ್ಟವನ್ನು ವಿಶೇಷ ಸಮಸ್ಯೆ ಎಂದು ಪರಿಗಣಿಸಿರಲಿಲ್ಲ. ಆದರೂ ಸಹ ಮುಂಜಾಗ್ರತೆ ವಹಿಸಿದ್ದ ನ್ಯಾಯಾಧೀಕರಣ ಉತ್ತಮ ಮಳೆಯಾದ ವರ್ಷದ ಅವಧಿಯಲ್ಲಿ ಹೆಚ್ಚುವರಿ ನೀರನ್ನು ಜಲಾಶಯಗಳಲ್ಲಿ 3 ಟಿ.ಎಂ.ಸಿ ವರೆಗೆ ಉಳಿಸಿಕೊಂಡು, ಮುಂದಿನ ವರ್ಷದ ಸಂಕಷ್ಟದ ಸಮಯದಲ್ಲಿ ಬಳಸಲು ಉಪಯೋಗಿಸಬಹುದು ಎಂದು ನಿರ್ದಿಷ್ಟ ಅಧಿಕಾರ ಮತ್ತು ಪ್ರಾಧಿಕಾರಗಳ ಆಡಳಿತಕ್ಕೆ ಸಲಹೆ ರೂಪದಲ್ಲಿ ಕೊಟ್ಟಿದೆ ಎಂದು ತಿಳಿಸಿದರು.

ತ.ನಾಡಿನವರು ಕಾವೇರಿ ನದಿ ವ್ಯಾಪ್ತಿಯಲ್ಲಿ 36 ಲಕ್ಷ ಎಕರೆ ಪ್ರದೇಶದಲ್ಲಿ ಕೃಷಿ ಮಾಡುತ್ತಿದ್ದು, ಮೂರು ಬೆಳೆಯನ್ನು ತೆಗೆಯುತ್ತಿದ್ದಾರೆ. ಅಲ್ಲದೆ, ಕಾವೇರಿ ನದಿಯಿಂದಲೇ ಮೂರು ನದಿಗಳನ್ನು ಮಾಡಿಕೊಂಡಿದ್ದಾರೆ. ಅನಧಿಕೃತವಾಗಿ ಕೆರೆಗಳನ್ನು ನಿರ್ಮಿಸಿಕೊಂಡು ನೀರು ಹರಿಸಿ ಬೆಳೆ ಬೆಳೆಯುತ್ತಿದ್ದಾರೆ. ಇದನ್ನು ನಮ್ಮ ರಾಜ್ಯ ಸರ್ಕಾರ ಕಾವೇರಿ ಸಮಿತಿ ಮತ್ತು ಪ್ರಾಧಿಕಾರದ ಮುಂದೆ ಪ್ರಶ್ನಿಸುತ್ತಿಲ್ಲ. ಇಂದಿಗೂ ಕೂಡ 1924ರ ಒಪ್ಪಂದವನ್ನೇ ಮುಂದಿಟ್ಟುಕೊಂಡು ತ.ನಾಡು ವಾದ ಮಾಡುತ್ತಿದೆ. ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ನಾವು ಇನ್ನೂ 11 ಲಕ್ಷ ಎಕರೆ ಪ್ರದೇಶವನ್ನೇ ಸರಿಯಾಗಿ ಉಪಯೋಗಿಸಿಕೊಂಡು ವ್ಯವಸಾಯ ಮಾಡಲಾಗುತ್ತಿಲ್ಲ. ಅಲ್ಲದೆ, ಇಷ್ಟೂ ಪ್ರದೇಶಕ್ಕೆ ನೀರು ಸಹ ಹೋಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಕೆ.ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ ಹಾಜರಿದ್ದರು.