ಜಿಲ್ಲೆ

ಡಾ. ಕಮಲಾಕ್ಷ ಕೆ. ಅವರ ಕೃತಿ ಬಿಡುಗಡೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಜನಪದ ಕಲೆ ಸಂಸ್ಕೃತಿ ತುಂಬಾ ಅನನ್ಯವಾಗಿದ್ದು, ಪ್ರಾಚೀನ ಜನಪದ ಬದುಕಿನ ಆಳಕ್ಕಿಳಿದು ಅಧ್ಯಯನ ಮಾಡಿದರೆ ಅನೇಕ ಮಹತ್ವದ ವಿಚಾರಗಳು ನಮ್ಮ ಅರಿವಿಗೆ ದಕ್ಕುತ್ತದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಹೇಳಿದರು. ಗೋಣಿಕೊಪ್ಪ ಬಳಿಯ ಅರವತ್ತೊಕ್ಕಲಿನಲ್ಲಿ ಸಾಹಿತಿ ಡಾ. ಕಮಲಾಕ್ಷ ಕೆ. ಅವರ ಕೃತಿ "ಭೂಮಿಯಿಂದ ಮೊಳೆತು ಬಂದ ಪಾಟ್ ಕಥೆಗಳು" ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿವಿಧ ಪ್ರದೇಶಗಳ ಜಾನಪದೀಯ ಅಂಶಗಳನ್ನು ಕಲೆಹಾಕಿ ಪ್ರಸ್ತುತ ಕಾಲಘಟ್ಟಕ್ಕೆ ಇವನ್ನು ಸಮನ್ವಯ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಡಾ. ಕೆ. ಕಮಲಾಕ್ಷ ಅವರ ಕಾರ್ಯ ಅಭಿನಂದನೀಯ. ಇವರು ಈ ಹಿಂದೆ ಬರೆದ "ಕೇರಳದ ಜನಪದ ವೀರ ತಚ್ಚೋಳಿ ಒದೆನನ್" ಹಾಗೂ "ಅಂಕ ಕಲಿಗಳ ವಿರಗಾಥೆ" ಅನುವಾದಿತ ಕೃತಿಗಳು ಸಹ ಸಂಗ್ರಹ ಯೋಗ್ಯ ಪುಸ್ತಕಗಳಾಗಿವೆ. ಸಾಹಿತ್ಯ ಕೃತಿಗಳ ಅನುವಾದ ಸುಲಭ ಅಲ್ಲ. ಎರಡೂ ಭಾಷೆಗಳ ಹಿಡಿತ, ಜೊತೆಗೆ ಮೂಲ ಕೃತಿ ರಚನಕಾರರ ರಚನೆ ಕುರಿತ ಮನಸ್ಥಿತಿ ಇವೆಲ್ಲದರ ಮೇಲೆ ಹಿಡಿತ ಬೇಕಾಗುತ್ತದೆ.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬೆಂಗಳೂರಿನ 'ದೃಶ್ಯ' ರಂಗತAಡದ ಸಂಸ್ಥಾಪಕಿ ಹಾಗೂ ನಿರ್ದೇಶಕಿ ಡಾ. ದಾಕ್ಷಾಯಿಣಿ ಭಟ್ ಮಾತನಾಡಿ ರಂಗಕಲೆಯಲ್ಲಿ ಜನಪದ ಕಥೆಗಳನ್ನು ಬಳಸಿಕೊಳ್ಳುವಲ್ಲಿನ ಅಗತ್ಯತೆಗಳನ್ನು ವಿವರಿಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಬೆಂಗಳೂರು ವಲಯ ನಿವೃತ್ತ ಕಾರ್ಯದರ್ಶಿ ಮಹಾಲಿಂಗೇಶ್ವರ ಎಸ್.ಪಿ ಅವರು ಲೇಖಕರ ಬರವಣಿಗೆಗಳ ಕುರಿತು ಮಾತನಾಡಿ ಶುಭ ಹಾರೈಸಿದರು

ಸುಳ್ಯದ ಉಪನ್ಯಾಸಕ ಲೇಖಕ ಡಾ.ಸುಂದರ ಕೆನಾಜೆ ಅವರು ಜಾನಪದ ವೈವಿಧ್ಯ, ಭಾಷಾ ವೈವಿಧ್ಯ, ವಿವಿಧ ಸಾಂಸ್ಕೃತಿಕ ಮಜಲುಗಳು ಎಲ್ಲವೂ ಸೇರಿ ಹೇಗೆ ನಮ್ಮ ಸಮಾಜವನ್ನು ಆರೋಗ್ಯವಂತವಾಗಿಡಲು ಸಾಧ್ಯ ಎಂಬುದರ ಕುರಿತು ಸವಿವರವಾಗಿ ತಿಳಿಸಿದರು.
ಇದಕ್ಕೂ ಮೊದಲು ಅರವತ್ತೊಕ್ಕಲಿನ ಲಕ್ಷ್ಮೇಶ್ವರ ಎಸ್ಟೇಟ್ ಮಾಲಿಕ ಪಿ.ಆರ್. ಗಾಂಧಿರಾವ್ ಕೃತಿ ಬಿಡುಗಡೆ ಮಾಡಿದರು. ಕನ್ನಡ ಚಲನಚಿತ್ರ "ಡೇರ್ ಡೆವಿಲ್ ಮುಸ್ತಫಾ" ಚಿತ್ರ ತಂಡದ ನಾಯಕ ನಟ, ನಿರ್ದೇಶಕ ಹಾಗೂ ಇತರ ಕಲಾವಿದರು ಕಾರ್ಯಕ್ರಮಕ್ಕೆ ವಿಶೇಷ ಕಳೆ ನೀಡಿದರು. ಚಲನಚಿತ್ರ ಸಂಗೀತ ನಿರ್ದೇಶಕ ಸ್ವಸ್ತಿಕ್ ಕಾರೆಕಾಡು ಮತ್ತು ಬಳಗದವರಿಂದ ಸಂಗೀತ ಸಂಭ್ರಮ ನಡೆಯಿತು.