ಮಂಗಳೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪುನಶ್ಚೇತನ ಕಾರ್ಯಕ್ರಮವನ್ನು ಸ್ವಸ್ತಿಕ ನ್ಯಾಷನಲ್ ಸ್ಕೂಲ್‌ನ ಡಾ.ರಾಘವೇಂದ್ರ ಹೊಳ್ಳ ಉದ್ಘಾಟಿಸಿದರು. ಅಷ್ಟಾವಧಾನಿ ಡಾ.ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್, ಹಿರಿಯ ಪತ್ರಕರ್ತರಾದ ಬಿ.ರವೀಂದ್ರ ಶೆಟ್ಟಿ ಮೊದಲಾದವರಿದ್ದರು. 
ಜಿಲ್ಲೆ

ನೆಲದ ಸಂಸ್ಕೃತಿಯ ಬೋಧನೆ ಅಗತ್ಯ, ಶಿಕ್ಷಕರ ಪುನಶ್ಚೇತನ ಕಾರ್ಯಕ್ರಮದಲ್ಲಿ ಡಾ.ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಹೇಳಿಕೆ

Mangaluru - Shravan Kumar Nala

ಮಂಗಳೂರು: ಶಿಕ್ಷಕರು ತಮ್ಮ ವತ್ತಿಯನ್ನು ಪೂಜಿಸಬೇಕು, ನಿತ್ಯ ಅಧ್ಯಯನ ಮಾಡಬೇಕು, ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಕಾಣಬೇಕು, ಮಕ್ಕಳಿಗೆ ಸತ್ವಪೂರ್ಣ ತತ್ವಪೂರ್ಣ ವಿಚಾರಗಳನ್ನು ಬೋಧಿಸಬೇಕಾಗಿದೆ. ನಮ್ಮ ನೆಲದ ಸಂಸ್ಕೃತಿ ಬೋಧನೆ ಮಾಡಿದಾಗ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದು ಅಷ್ಟಾವಧಾನಿ ಡಾ.ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಹೇಳಿದರು.

ಮಂಗಳೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಪ್ರಾಥಾಮಿಕ ಶಾಲಾ ಶಿಕ್ಷಕರ ಪುನಶ್ಚೇತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಕ್ಕಳು ಕೇವಲ ಟಿವಿ, ಮೊಬೈಲ್‌ಗಳ ಮುಂಭಾಗದಲ್ಲಿ ಮಾತ್ರ ಉಳಿದು ಬಿಡಬಾರದು. ನಮ್ಮ ಮೂಲ ಸಂಸ್ಕೃತಿಯನ್ನು ಮಕ್ಕಳು ಮರೆಯದ ಹಾಗೆ ನೋಡಿಕೊಳ್ಳಬೇಕಾಗಿದೆ. ನೆಲದ ಸಂಸ್ಕೃತಿ ನಮ್ಮಿಂದ ದೂರವಾಗುತ್ತಿದ್ದರೂ ಪರಕೀಯರಿಗೆ ಅದು ಬೇಕಾಗುತ್ತಿದೆ. ದೇಶಕ್ಕೆ ಕಂಟಕ ಬಾರದಂತೆ ತಡೆಯಲು ಮಕ್ಕಳನ್ನು ತಿದ್ದುವ ಕೆಲಸ ಶಿಕ್ಷಕರು ಮಾಡಬೇಕಾಗಿದೆ ಎಂದರು.

ಹಿರಿಯ ಪತ್ರಕರ್ತ ಬಿ.ರವೀಂದ್ರ ಶೆಟ್ಟಿ ಮಾತನಾಡಿ, ಉತ್ತಮ ವಿದ್ಯಾರ್ಥಿಗಳನ್ನು ರೂಪುಗೊಳಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು. ಈಗಿನ ಮಕ್ಕಳು ಬಹಳ ಸ್ಮಾರ್ಟ್ ಆಗಿದ್ದಾರೆ. ಇಂತಹ ಸಂದರ್ಭದಲ್ಲಿ ಅವರನ್ನು ಧನಾತ್ಮಕವಾಗಿ ರೂಪುಗೊಳಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಸ್ವಸ್ತಿಕ ನ್ಯಾಷನಲ್ ಸ್ಕೂಲ್‌ನ ಡಾ.ರಾಘವೇಂದ್ರ ಹೊಳ್ಳ ಕಾರ್ಯಕ್ರಮ ಉದ್ಘಾಟಿಸಿದರು. ಪತ್ರಕರ್ತ ಅನುಷ್ ಕೊಟ್ಟಾರಿ, ಬ್ರಹ್ಮಕುಮಾರೀಸ್‌ನ ವಿಶ್ವೇಶ್ವರಿ ಮೊದಲಾದವರು ಉಪಸ್ಥಿತರಿದ್ದರು. ವಿಜಯಾ ನಿರೂಪಿಸಿದರು.