ಜಿಲ್ಲೆ

ಬೆಂಗಳೂರು ವಿವಿಗೆ ನ್ಯಾಕ್ ಮಾನ್ಯತೆ ದೊರಕಿಸಿದವರು ಡಾ. ಕೆ. ಸಿದ್ದಪ್ಪ - ಶಾಮನೂರು

ಪಂಕಜ ಕೆ.ಎಂ.

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯ ಮಾಪನ ಮತ್ತು ಮಾನ್ಯತೆ ಮಂಡಳಿಯ (ನ್ಯಾಕ್) ಪ್ರತಿಷ್ಠಿತ ಪೈವ್ ಸ್ಟಾರ್ ಮಾನ್ಯತೆ ದೊರೆಯುವಲ್ಲಿ ಆಗಿನ ಕುಲಪತಿಯಾಗಿದ್ದ ಡಾ. ಕೆ. ಸಿದ್ದಪ್ಪ ಅವರು ಮಹತ್ವ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.

ಡಾ.ಕೆ. ಸಿದ್ದಪ್ಪ ಅಭಿನಂದನ ಸಮಿತಿಯು ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರ ಕಾರ್ಯಾಲಯದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಡಾ.ಕೆ. ಸಿದ್ದಪ್ಪ ಅಭಿನಂದನೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಯುವಕರಲ್ಲಿ ವಿಜ್ಞಾನದ ಕ್ರಾಂತಿ ಹುಟ್ಟಿಸುವಲ್ಲಿಯೂ ಇವರ ಪಾತ್ರ ಮಹತ್ವದ್ದಾಗಿದೆ ಎಂದರು.

ದಾವಣಗೆರೆ ಜಿಲ್ಲೆಯ ಕುಗ್ರಾಮದಲ್ಲಿ ಜನಿಸಿ ಕೆ. ಸಿದ್ದಪ್ಪ ಅವರು, ಕರ್ನಾಟಕದ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ. ವಿಜ್ಞಾನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಇವರ ಕೊಡುಗೆ ಅಪಾರವಾಗಿದ್ದು, ನಿವೃತ್ತಿಯ ನಂತರವು ನಾನಾ ಸಮಾಜ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೇವೆಗೆ ವಯಸ್ಸಿಗಿಂತ ಮನಸ್ಸು ಮುಖ್ಯ ಎಂಬ ಸಂದೇಶ ನೀಡಿದ್ದಾರೆ ಎಂದು ಬಣ್ಣಿಸಿದರು. ಇದೇ ವೇಳೆ ಸಿದ್ದಪ್ಪ ಅವರೊಂದಿಗಿನ 40 ವರ್ಷಗಳ ಒಡನಾಟ ಸ್ಮರಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ ನಾಡೋಜ ಗೊ.ರು. ಚನ್ನಬಸಪ್ಪ ಮಾತನಾಡಿ, ಡಾ. ಕೆ. ಸಿದ್ದಪ್ಪ ಅವರಿಗೆ 80 ವರ್ಷಗಳು ತುಂಬಿದ್ದರೂ, ಅವರಲ್ಲಿ ಆ ವೃದ್ದಾಪ್ಯತನದ ಸುಳಿವೇ ಇಲ್ಲ. ಬಾಲ್ಯದಿಂದ ಅವರು ಬೆಳೆಸಿಕೊಂಡು ಬಂದಿರುವ ಕ್ರಿಯಾಶೀಲತೆಯೇ ಇದಕ್ಕೆ ಕಾರಣ. ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕೇವಲ ಶಿಕ್ಷಕರಾಗಿ ಮಾತ್ರವಲ್ಲದೇ ಉತ್ತಮ ಆಡಳಿತಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಜತೆಗೆ ದೇಶ-ವಿದೇಶಗಳಲ್ಲಿ ನೂರಾರು ವಿಚಾರ ಕಮ್ಮಟಗಳಲ್ಲಿ ಪಾಲ್ಗೊಂಡು, ನಾನಾ ವಿಷಯಗಳನ್ನು ಮಂಡಿಸಿದ್ದಾರೆ ಎಂದು ಹೇಳಿದರು.

ಬೆಂಗಳೂರು ವಿವಿಯ ಕುಲಪತಿಗಳಾಗಿದ್ದ ವೇಳೆ, ಮೊದಲ ಬಾರಿಗೆ ಸ್ನಾತಕೋತ್ತರ ಮಟ್ಟದಲ್ಲಿ ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಷಯವನ್ನು ಅನುಷ್ಠಾನಗೊಳಿಸಿದರು. ಸಂಶೋಧನ ಕ್ಷೇತ್ರದಲ್ಲಿ ಅಮೇರಿಕಾದ ಮೂರು ವಿಶ್ವವಿದ್ಯಾಲಯಗಳ ಸಹಯೋಗವನ್ನು ಬೆಂ. ವಿವಿಗೆ ಪಡೆಯುವುದರ ಜತೆಗೆ ಸಂಶೋಧನ ಕ್ಷೇತ್ರದಲ್ಲಿ ಕೈಗಾರಿಕೋದ್ಯಮಗಳು ಪಾಲ್ಗೊಳ್ಳುವಂತೆ ಮಾಡಿದ್ದರು. ವಿಜ್ಞಾನವು ಜನಸಾಮಾನ್ಯರ ಬದುಕಿಗೆ ಉಪಯೋಗವಾಗುವಂತಿರಬೇಕು ಎಂಬ ಅವರ ಚಿಂತನೆ ಮಹತ್ವದ್ದಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ ಅವರು, ಡಾ.ಕೆ. ಸಿದ್ದಪ್ಪ ಅವರ ಅಭಿನಂದನ ಗ್ರಂಥ ಬಿಡುಗಡೆಗೊಳಿಸಿದರು. ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಪಿ. ವೆಂಕಟರಾಮಯ್ಯ, ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ವಿ.ಎಸ್. ರಾಮಮೂರ್ತಿ, ಇಸ್ರೋದ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್, ಮುಂಬೈನ ಭಾಭಾ ಪರಮಾಣು ಸಂಶೋಧನಾ ಕೇಂದ್ರದ ಸಹ ನಿರ್ದೇಶಕ ಡಾ.ಡಿ.ವಿ. ಗೋಪಿನಾಥ್, ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ. ಕೆ.ಜೆ. ರಾವ್ ಮತ್ತು ಡಾ.ಕೆ. ಸಿದ್ದಪ್ಪ ಹಾಗೂ ಅವರ ಪತ್ನಿ ರತ್ನಮ್ಮ ಇತರರು ಇದ್ದರು.

ಕೋಟ್

ವಿಜ್ಞಾನವನ್ನು ಇಂದು ಸಮಾಜದ ವಿವಿಧ ಸ್ತರಗಳಲ್ಲಿ ಅಳವಡಿಸಲು ಸಾಧ್ಯತೆ ಇರುವ ನಾಯಕರ ಕೊರತೆ ಇದ್ದು, ಇದರ ನಡುವೆ ಮರುಭೂಮಿಯ ಓಯಾಸಿಸ್‌ನಂತೆ ಸಿದ್ದಪ್ಪ ನಮ್ಮೊಡನೆ ಇದ್ದಾರೆ. ಈ ಪೀಳಿಗೆ ಮಕ್ಕಳಿಗೆ ವಿಜ್ಞಾನ ಮತ್ತು ಅದರ ಬಳಕೆ ಬಗ್ಗೆ ತಿಳಿಸಲು ಇವರ ಅಭಿನಂದನಾ ಗ್ರಂಥದ ಮಾಹಿತಿಯನ್ನು ಪ್ರಾಥಮಿಕ ಶಿಕ್ಷಣದ ಪಠ್ಯದಲ್ಲಿ ಅಳವಡಿಸುವುದು ಸೂಕ್ತ.

- ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ