ಜಿಲ್ಲೆ

ಎಚ್.ಸಿ.ದಾಸಪ್ಪ ವಿಚಾರ ಸಂಸ್ಥೆಗೆ ಡಾ.ಕೆ.ಮಹದೇವ್ ಅಧ್ಯಕ್ಷ

ಮೈಸೂರು: ಮಾಜಿ ಶಾಸಕ ವಾಸು ನಿಧನದಿಂದ ತೆರವಾದ ಎಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಸಮಾಜ ಸೇವಕ, ಹಿರಿಯ ವೈದ್ಯ ಡಾ.ಕೆ.ಮಹದೇವ್ ಅವರನ್ನು ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ನೇಮಿಸಲಾಯಿತು.
ಎಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆ ಕಾರ್ಯದರ್ಶಿ ಸರೋಜಾ ತುಳಸಿದಾಸ್, ಖಜಾಂಚಿ ಮಾಜಿ ಮೇಯರ್ ಪಿ.ವಿಶ್ವನಾಥ್ ನೇತೃತ್ವದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಮೊದಲಿಗೆ ಇತ್ತೀಚೆಗೆ ನಿಧನರಾದ ಸಂಸ್ಥೆ ಅಧ್ಯಕ್ಷ ಮಾಜಿ ಶಾಸಕ ವಾಸು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಕೆ.ಮಹದೇವ್ ಮಾತನಾಡಿ, ಹಿರಿಯರು ಹಾಕಿಕೊಟ್ಟಿರುವ ಧ್ಯೇಯೋದ್ದೇಶಗಳಂತೆ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮತ್ತು ತತ್ವಾಧಾರಿತ ಚಿಂತನೆಗಳಿಂದ ಸಂಸ್ಥೆಯನ್ನು ಉತ್ತಮವಾಗಿ ಮುನ್ನಡೆಸಿಕೊಂಡು ಹೋಗುವುದಾಗಿ ಭರವಸೆ ನೀಡಿದರು.
ಗಾಂಧಿ, ಕಸ್ತೂರಬಾ, ಜವಾಹರಲಾಲ್ ನೆಹರು ಸೇರಿದಂತೆ ಇನ್ನಿತರ ನಾಯಕರ ಒಡನಾಡಿಯಾಗಿದ್ದ ಮೈಸೂರು ರಾಜ್ಯದ ಮೊದಲ ಹಣಕಾಸು, ಕೈಗಾರಿಕೆ ಮತ್ತು ರೈಲ್ವೆ ಸಚಿವ ಎಚ್.ಸಿ.ದಾಸಪ್ಪ ಸ್ಮರಣಾರ್ಥ ಈ ಸಾರ್ವಜನಿಕ ವಿಚಾರ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ರಾಜ್ಯದ ಮೊದಲ ಸಚಿವೆ ಯಶೋದರಾ ದಾಸಪ್ಪ ಅವರು ತಮ್ಮ ಪತಿ ಎಚ್.ಸಿ.ದಾಸಪ್ಪ ಅವರ ಸ್ಮರಣಾರ್ಥ ಸ್ಥಾಪಿಸಿದ ಸಂಸ್ಥೆಯ ನಿಯಮಾವಳಿಗಳು ಉತ್ತಮವಾಗಿದ್ದು, ಇದನ್ನೇ ಮುಂದುವರಿಸಿಕೊಂಡು ಹೋಗಲು ನಿರ್ಧರಿಸಲಾಗಿದೆ ಎಂದರು.
ಕಾರ್ಯಕಾರಿ ಸಮಿತಿ ಸದಸ್ಯರಾದ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗುಂಡಪ್ಪಗೌಡ, ಸೋಮನಾಥ್, ರೈಲ್ವೆ ಶ್ರೀನಿವಾಸ್, ಕೃಷ್ಣಪ್ಪ, ರಂಗಸ್ವಾಮಿ, ಮರೀಗೌಡ, ಎಸ್.ಪ್ರಕಾಶ್‌ಬಾಬು ಇತರರು ಇದ್ದರು.