ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಕನ್ನಡ ಭಾಷೆ ಪಸರಿಸುವ ನಿಟ್ಟಿನಲ್ಲಿ ಕನ್ನಡದ ಜತೆಗೆ ಇಂಗ್ಲಿಷ್ ಮಾಧ್ಯಮ ಶಿಕ್ಷಣವನ್ನು ಬೆಂಬಲಿಸುವುದಾಗಿ ಹಿರಿಯ ವಿದ್ವಾಂಸ ಡಾ. ಹಂ.ಪ. ನಾಗರಾಜಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಶೇಷಾದ್ರಿಪುರಂ ಕಾಲೇಜಿನಲ್ಲಿ ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿ ಮತ್ತು ಶೇಷಾದ್ರಿಪುರಂ ಸಂಜೆ ಕಾಲೇಜಿನ ಗೋಧೂಳಿ ಕನ್ನಡ ಸಂಘ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಚಿದಾನಂದ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.
ಇದನ್ನೂ ಓದಿ: ಇಂಜೆಕ್ಷನ್ ಅಂದ್ರೆ ಡಿಕೆಶಿಗೆ ಭಯವಂತೆ!
ಫ್ರೆಂಚ್ ಮತ್ತು ಜರ್ಮನ್ ಭಾಷೆಗಳು ಇಂಗ್ಲಿಷ್‌ನಷ್ಟೇ ಪ್ರಾಬಲ್ಯ ಹೊಂದಿವೆ. ಆದ್ದರಿಂದ ಸಾಗರ, ಬೆಟ್ಟಗಳನ್ನು ದಾಟಿ ಕನ್ನಡದ ಕಂಪು ಪಸರಿಸಲು ಕನ್ನಡಿಗರು ಬೇರೆ ಭಾಷೆಗಳಲ್ಲಿಯೂ ಪ್ರಾವಿಣ್ಯದ ಜತೆಗೆ ಹಿಡಿತ ಸಾಧಿಸುವುದು ಅಗತ್ಯ. ನಮ್ಮ ಸಾಹಿತ್ಯವನ್ನು ಬೇರೆ ಭಾಷೆಗಳಿಗೂ ಭಾಷಾಂತರವಾಗಬೇಕಿದೆ ಎಂದು ಹೇಳಿದರು.
ಪಂಪ ಕನ್ನಡದ ಆದಿ ಕವಿ. ಅವನ ತಮ್ಮ ಜಿನವಲ್ಲಭ ತೆಲುಗಿನ ನೈಜ ಆದಿ ಕವಿ. ಆದರೆ ತೆಲುಗರು ಜಿನವಲ್ಲಭನ ಬಳಿಕದ ನಾಣಯ್ಯರನ್ನು ತಮ್ಮ ಆದಿಕವಿ ಎಂದು ಹೇಳಿಕೊಳ್ಳುತ್ತಾರೆ. ಅಣ್ಣ ತಮ್ಮಂದಿರು ಎರಡು ಭಾಷೆಯ ಆದಿಕವಿಗಳಾಗಿರುವ ವಿಶಿಷ್ಟ ವಿದ್ಯಮಾನವಿದು. ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಪಂಪ ಮತ್ತು ಜಿನವಲ್ಲಭ ಅವರಿಗೆ ಸಂಬಂಧಪಟ್ಟ ಜಾಗಗಳು ಪಾಳು ಬಿದ್ದಿವೆ. ಎರಡೂ ರಾಜ್ಯ ಸರ್ಕಾರಗಳು ಈ ಸ್ಥಳಗಳ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಪಂಪ ಶಾಸನ ಇರುವ ಕುರ್ಕಿಯಾಲವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಬೇಕು. ಅಲ್ಲಿ ಸಾಹಿತ್ಯ, ಸಂಶೋಧನಾ ಚಟುವಟಿಕೆಗೆ ಒತ್ತು ನೀಡುವಂತೆ ಒತ್ತಾಯಿಸಿದರು. ಯುವ ಸಂಶೋಧಕ ಡಾ. ಸುಂಕಂ ಗೋವರ್ಧನ್ ಮಾತನಾಡಿ, ಕನ್ನಡದಲ್ಲಿ ಜೈನ ಧರ್ಮದ ಆಳ ಅಗಲವನ್ನು ಹಂಪನಾ ಅವರಷ್ಟು ವಿಸ್ತಾರವಾಗಿ ಅರಿತವರು ಮತ್ತು ಬರೆದವರು ಬೇರೆ ಯಾರೂ ಇಲ್ಲ ಎಂದು ಪ್ರಶಂಶಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ. ವೂಡೇ ಪಿ. ಕೃಷ್ಣ, ಪ್ರಶಸ್ತಿ ಪ್ರದಾನ ಸಮಿತಿಯ ಅಧ್ಯಕ್ಷ ಡಾ. ಸಿ. ಯು. ಮಂಜುನಾಥ್, ಗೋಧೂಳಿ ಕನ್ನಡ ಸಂಘದ ಸಂಚಾಲಕ ಡಾ. ಸತ್ಯಮಂಗಲ ಮಹಾದೇವ, ಸಂಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಎನ್. ಎಸ್. ಸತೀಶ್ ಉಪಸ್ಥಿತರಿದ್ದರು.
ನಾನು ಮತ್ತು ಕಮಲಾ ಹಂಪನಾ ಆರು ವರ್ಷ ಒಟ್ಟಿಗೆ ಓದಿದವರು. ನಮ್ಮದು ಲವ್ ಆಟ್ ಫಸ್ಟ್ ಸೈಟ್ ಅಲ್ಲ. ಲವ್ ಆಟ್ ಮೆನಿ ಸೈಟ್. ಅಷ್ಟು ವರ್ಷ ಪರಸ್ಪರ ನೋಡಿದ ಮೇಲೆ ಮತ್ತೊಬ್ಬರನ್ನು ನೋಡಿ ಮದುವೆ ಆಗುವುದು ಏನಕ್ಕೆ ಎಂದುಕೊಂಡು ಮದುವೆ ಮಾಡಿಕೊಂಡೆವು ಎಂದು ಹಂಪ ನಾಗರಾಜಯ್ಯ ಹಾಸ್ಯ ಚಟಾಕಿ ಹಾರಿಸಿದರು.