ತಾಳಿಕೋಟೆ: ಅಧ್ಯಾತ್ಮಕ್ಕೆ ಅಪಾರ ಶಕ್ತಿಯಿದೆ. ಅದು ಮನುಷ್ಯನನ್ನು ವಿಕಾಸದೆಡೆ ಕರೆದೊಯ್ಯುವುದರ ಜೊತೆಗೆ ದೈವತ್ವದ ಭಾವನೆ ಪ್ರಾಪ್ತವಾಗುತ್ತದೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಶಿವಶರಣೆ ಮಂಜುಳಾ ತಾಯಿಯವರು ಲೋಕ ಕಲ್ಯಾಣಾರ್ಥ ಶ್ರಾವಣಮಾಸದಲ್ಲಿ ಹಮ್ಮಿಕೊಂಡಿದ್ದ 11ನೇ ಮೌನಾನುಷ್ಠಾನ ಮಂಗಲ ಕಾರ್ಯಕ್ರಮ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಮೌನಕ್ಕೆ ಅಪಾರ ಶಕ್ತಿಯಿದೆ. ಧ್ಯಾನ, ಹಠಯೋಗ, ಶಿವಯೋಗ, ಕ್ರಿಯಾಯೋಗ ಇವೆಲ್ಲವೂ ಅಧ್ಯಾತ್ಮ ಶಕ್ತಿಯನ್ನು ವಿಕಾಸಗೊಳಿಸುತ್ತದೆ. ನಮ್ಮ ಸನಾತನ ಪರಂಪರೆಯಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದರು.
ಶರಣೆ ಮಂಜುಳಾತಾಯಿಯವರು ಯಾವ ಗರ್ಭಗುಡಿಯಲ್ಲೂ ಕುಳಿತು ಅನುಷ್ಠಾನ ಮಾಡದೆ, ತಮ್ಮ ಮನೆಯ ಪೂಜಾ ಕೋಣೆಯನ್ನೇ ಗರ್ಭಗುಡಿಯನ್ನಾಗಿಸಿಕೊಂಡು ಲೋಕಕಲ್ಯಾಣಕ್ಕಾಗಿ ಅನುಷ್ಠಾನ ಕೈಗೊಂಡಿರುವುದು ಸಂತಸ ತಂದಿದೆ ಎಂದರು.
ಸಿಂದಗಿ ಸಾರಂಗಮಠದ ಶ್ರೀ ಪ್ರಭುಸಾರಂಗದೇವ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಅಷ್ಟಾಂಗ ಯೋಗ ಅನುಷ್ಠಾನ ಅಷ್ಟು ಸುಲಭವಲ್ಲ. ಮಂಜುಳಾತಾಯಿಯವರು ಹಲವು ಸಲ ಅನುಷ್ಠಾನ ಮಾಡಿದ್ದು, ಇದಕ್ಕೆ ಗುರುಕೃಪೆಯೇ ಕಾರಣ ಎಂದರು.
ನಿರಾಪೇಕ್ಷೆಯಿಂದ ಮಾಡಿದ ಯಾವುದೇ ಅನುಷ್ಠಾನವು ಯಶಸ್ಸು ಕಾಣುತ್ತದೆ. ನಿರ್ಲಿಪ್ತ ಮನೋಭಾವ ಅಳವಡಿಸಿಕೊಂಡರೆ ಇಂತಹ ಅನುಷ್ಠಾನ ಸಾಧ್ಯ. ಬಳಗಾನೂರಿನಲ್ಲಿ ತಾಯಿಯವರ ಅನುಷ್ಠಾನಕ್ಕೆ ಅನುಕೂಲವಾಗಲು ಗ್ರಾಮಸ್ಥರೆಲ್ಲ ಸೇರಿ ಜಾಗದ ವ್ಯವಸ್ಥೆ ಮಾಡಿಕೊಡಿ ಎಂದು ಸಲಹೆ ನೀಡಿದರು.
ಮನಗೂಳಿ ಸಂಸ್ಥಾನ ಹಿರೇಮಠದ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಯಾವ ರೀತಿ ದೀಪ ತನ್ನನ್ನು ತಾನು ಸುಟ್ಟುಕೊಂಡು ಬೆಳಕು ಕೊಡುತ್ತದೆಯೋ ಹಾಗೆ ಶರಣೆ ಮಂಜುಳಾತಾಯಿಯವರು ಲೋಕಕಲ್ಯಾಣಕ್ಕಾಗಿ ಮೌನಾನುಷ್ಠಾನ ಮಾಡಿದ್ದು, ಪರಮಾತ್ಮ ಭಿಕ್ಷುಕ ರೂಪದಲ್ಲಿ ಬಂದು ಭಕ್ತನನ್ನು ಪರೀಕ್ಷಿಸಿದ ಚಿಕ್ಕ ಕಥೆ ಹೇಳಿದರು.
ಶಿವಶರಣೆ ಮಂಜುಳಾತಾಯಿಯವರು ಮಾತನಾಡಿ, ಬದುಕಿನ ಆನಂದಕ್ಕಾಗಿ ಅಧ್ಯಾತ್ಮ ಚಿಂತನೆ ಅಗತ್ಯ. ಬದುಕು ಪರಿಪೂರ್ಣತೆಗೆ ಅಧ್ಯಾತ್ಮಿಕ ಚಿಂತನೆ ಅತ್ಯವಶ್ಯ. ತಾಳಿಕೋಟೆ ಖಾಸ್ಗತ ವಿರಕ್ತಶ್ರೀಗಳ ಆದೇಶವೇ ಬಳಗಾನೂರಿನಲ್ಲಿಯೇ ಅನುಷ್ಠಾನ ಮಾಡಲು ಕಾರಣವಾಗಿದ್ದು, ಗ್ರಾಮದವರ ಎಲ್ಲರ ತುತ್ತು ನನ್ನ ಅಡಗಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ, ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ. ಅಸ್ಕಿ, ಶಂಕರಗೌಡ ಹಿರೇಗೌಡರ, ನಿವತ್ತ ಶಿಕ್ಷಕ ಎಸ್.ಐ. ಕಡಕೋಳ, ಬಾಗಲಕೋಟೆ ಜಿ.ಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ದ್ಯಾಮನಗೌಡ ಪಾಟೀಲ, ಸಿದ್ದನಗೌಡ ಬಿರಾದಾರ ಮಾತನಾಡಿದರು.
ತಿಕೋಟಾ ಹಿರೇಮಠದ ಶ್ರೀ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು, ಶಹಾಪುರ ಸಂಸ್ಥಾನ ಹಿರೇಮಠದ ಸೂಗೂರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹುಣಶ್ಯಾಳದ ಆನಂದ ದೇವರು, ಸಿದ್ಧಾರೂಢಮಠದ ಜಮ್ಮಲದಿನ್ನಿ ಶ್ರೀಗಳು ಆಶೀರ್ವಚನ ನೀಡಿದರು. ಇಂಗಳೇಶ್ವರ ವಿರಕ್ತಮಠದ ಶ್ರೀ ಚನ್ನಬಸವ ಮಹಾ ಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆ ಮೇಲೆ ಬಸವ ಸೈನ್ಯದ ಶಂಕರಗೌಡ ಬಿರಾದಾರ, ವಿರೇಶ ಕಳಸಗೊಂಡ, ಮಂಜುನಾಥಗೌಡ, ಬಸನಗೌಡ ದೋರನಳ್ಳಿ, ಗುತ್ತಿಗೆದಾರ ರವಿ ದೇಸಾಯಿ ಇತರರಿದ್ದರು. ಕುಂಭ, ಕಳಸದೊಂದಿಗೆ ಹರಚರಮೂರ್ತಿಗಳನ್ನು ಹಾಗೂ ಅನುಷ್ಠಾನ ಶಿವಶರಣೆ ಮಂಜುಳಾ ತಾಯಿಯವರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. ಶಿಕ್ಷಕಿ ಮಡಿವಾಳಮ್ಮ ನಾಡಗೌಡ ಸ್ವಾಗತಿಸಿದರು. ಶಿಕ್ಷಕ ವಾಲಿಕಾರ ಕಾರ್ಯಕ್ರಮ ನಿರ್ವಹಿಸಿದರು.