ಬೆಂಗಳೂರು: ದರ್ಶನ್ ( darsha ) ಅಭಿಮಾನಿಗಳ ಹುಚ್ಚಾಟದಿಂದ ತಾವು ಅನುಭವಿಸಿದ ಹಾಗೂ ಎಂದೂ ಸರಿಯಾಗಲಾರದ ಘಾಸಿಯ ಬಗ್ಗೆ ಹಿರಿಯ ಸಾಹಿತಿ ನಾಡೋಜ ಡಾ. ಗೊರೂರು ಚೆನ್ನಬಸಪ್ಪ ಮಾತನಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಲಿಂ.ತೋಂಟದ ಸಿದ್ದಲಿಂಗ ಸ್ವಾಮಿಗಳ 6ನೇ ಪುಣ್ಯಸ್ಮರಣೆ, ಮರಣವೇ ಮಹಾನವಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಮಾತನಾಡಿದ ಡಾ.ಗೊರೂರು ಚೆನ್ನಬಸಪ್ಪನವರು, ದರ್ಶನ್ ಅಭಿಮಾನಿಗಳು ಮಾಡಿದ ಯಡವಟ್ಟನ್ನು ತೆರೆದಿಟ್ಟಿದ್ದಾರೆ.
ಇಂದು ಮಾಧ್ಯಮದಲ್ಲಿ ಪ್ರಚಲಿತದಲ್ಲಿರುವ ಪುಣ್ಯಾತ್ಮ ದರ್ಶನ್ ಜನ್ಮದಿನದ ಸಂದರ್ಭ ಅದು. ಬೆಂಗಳೂರಿನ ನನ್ನ ನಿವಾಸದ ಪಕ್ಕವೇ ದರ್ಶನ್ ಮನೆಯಿದೆ. ಪುಣ್ಯಾತ್ಮನ ಜನ್ಮದಿನ ಹಿನ್ನೆಲೆ ಸಹಸ್ರಾರು ಅಭಿಮಾನಿಗಳು ಸೇರಿದ್ದರು. ಭಾರೀ ಪ್ರಮಾಣದಲ್ಲಿ ಸಿಡಿಮದ್ದು ಹಾರಿಸಿದ್ರು. ಆ ಭಾರಿ ಪ್ರಮಾಣದ ಸಿಡಿಮದ್ದಿನ ಕರ್ಕಶ ಸದ್ದಿನಿಂದಾಗಿ ನಾನು ನನ್ನ ಶ್ರವಣ ಶಕ್ತಿಯನ್ನೇ ಕಳೆದುಕೊಳ್ಳಬೇಕಾಯ್ತು ಎಂದು ಚೆನ್ನಬಸಪ್ಪನವರು ಹೇಳಿದ್ದಾರೆ.
ನನಗೀಗ 97 ವಯಸ್ಸು. ಈ ವಯಸ್ಸಿನಲ್ಲಿಯೂ ಕೂಡ ಸ್ಪಷ್ಟವಾಗಿ ಮಾತನಾಡಬಲ್ಲೆ, ನಡೆದಾಡಬಲ್ಲೆ. ಆದರೆ, ತಾವೆಲ್ಲರೂ ಮಾತನಾಡುವ ಪದಗಳನ್ನು ಕೇಳಿಸಿಕೊಳ್ಳಲಾಗದಷ್ಟು ಶ್ರವಣದೋಷ ಅನುಭವಿಸುತ್ತಿದ್ದೇನೆ. ಇದೆಲ್ಲಾ ಆ ಪುಣ್ಯಾತ್ಮ ದರ್ಶನ್ ಅಭಿಮಾನಿಗಳಿಂದಾಗಿದ್ದು ಎಂದು ತಮ್ಮ ತಮ್ಮ ಭಾಷಣದಲ್ಲಿ ನೋವನ್ನು ತೋಡಿಕೊಂಡಿದ್ದಾರೆ.