ಜಿಲ್ಲೆ

ಡಾ. ಗಂಗೂಬಾಯಿ ಹಾನಗಲ್ ನಿರ್ವಹಣೆ ಹೊಣೆ ಮೈಸೂರು ವಿವಿಗೆ

ಹುಬ್ಬಳ್ಳಿ : ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ಹುಬ್ಬಳ್ಳಿ ಪ್ರಾದೇಶಿಕ ಕೇಂದ್ರದಲ್ಲಿ ಸಂಗೀತ ಪಾಠ ನಡೆಸುವ, ಪರೀಕ್ಷೆ ನಡೆಸಿ, ಪ್ರಮಾಣ ಪತ್ರ ನೀಡುವ ಜತೆಗೆ ಇರುವ ಸಂಪನ್ಮೂಲದಲ್ಲಿಯೇ ಇನ್ನಿತರ ಸೌಕರ್ಯಗಳನ್ನು ಮೈಸೂರು ವಿಶ್ವವಿದ್ಯಾಲಯವೇ ಒದಗಿಸಲಿದೆ ಎಂದು ವಿವಿ ಕುಲಪತಿ ಪ್ರೊ. ನಾಗೇಶ ಬೆಟ್ಟಕೋಟೆ ಹೇಳಿದರು.

ಹುಬ್ಬಳ್ಳಿ ಪ್ರಾದೇಶಿಕ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಕೋರ್ಸ್​ಗಳ ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ಹುಬ್ಬಳ್ಳಿ ಪ್ರಾದೇಶಿಕ ಕೇಂದ್ರದಲ್ಲಿ ಈಗಾಗಲೇ ಭರತನಾಟ್ಯ, ಶಾಸ್ತ್ರೀಯ ಸಂಗೀತ ಸೇರಿದಂತೆ ವಿವಿಧ ಕೋರ್ಸ್​ಗಳಿಗೆ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ಹುಬ್ಬಳ್ಳಿ ಪ್ರಾದೇಶಿಕ ಕೇಂದ್ರದ ಶಿಕ್ಷಕರ ಜತೆಗೆ ಮೈಸೂರು ವಿಶ್ವವಿದ್ಯಾಲಯದ ಶಿಕ್ಷಕರೂ ಇಲ್ಲಿಗೆ ಬಂದು ಸಂಗೀತ, ಭರತನಾಟ್ಯ ಪಾಠ ಮಾಡಲಿದ್ದಾರೆ ಎಂದರು.

ಕಾಯಂ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ನೇಮಕಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಬಜೆಟ್​ನಲ್ಲಿ ಹಣ ಮೀಸಲಿಟ್ಟು, ಅಗತ್ಯ ಸೌಲಭ್ಯ ಒದಗಿಸುವ ಆಶಯ ಇದೆ ಎಂದು ಹೇಳಿದರು.

ಆನ್​ಲೈನ್ ಸಂಗೀತ ಪಾಠಕ್ಕಾಗಿ ದೇಶದ ವಿವಿಧ ರಾಜ್ಯ ಹಾಗೂ ವಿದೇಶದಿಂದಲೂ ಒತ್ತಡ ಬರುತ್ತಿದೆ. ತಾಂತ್ರಿಕ ಕಾರಣದಿಂದಾಗಿ ಆನ್​ಲೈನ್ ಪಾಠ ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ನಿವಾರಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ರಾಜ್ಯಾದ್ಯಂತ 70 ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಲಿಸುವ ಶಿಕ್ಷಣ ಸಂಸ್ಥೆಗಳು ಇದ್ದು, ಅವುಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ, ಪ್ರಮಾಣ ಪತ್ರ ನೀಡುವ ಕೆಲಸವನ್ನು ವಿಶ್ವವಿದ್ಯಾಲಯ ಮಾಡುತ್ತಿದೆ ಎಂದರು.

ಕುಲಚಿವರಾದ ರೇಖಾ ಕೆ.ಎಸ್. ಅತಿಥಿಯಾಗಿದ್ದರು. ಹುಬ್ಬಳ್ಳಿ ಪ್ರಾದೇಶಿಕ ಕೇಂದ್ರದ ಸಂಯೋಜಕ ಮಾರಪ್ಪ ಬಿ.ಆರ್., ಸಂಗೀತ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.