ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ಭಾನುವಾರ ಮಂಗಳೂರು ಕುದ್ಮಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಿದ ರಾಜ್ಯ ಆದಿ ದ್ರಾವಿಡ ಸಮಾವೇಶ 2023 ದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಸನ್ಮಾನಿಸಲಾಯಿತು 
ಜಿಲ್ಲೆ

ಗಟ್ಟಿಗೊಳ್ಳುತ್ತಿರುವ ಜಾತೀಯ ವ್ಯವಸ್ಥೆ; ಸಮಾಜದ ಸ್ವಾವಲಂಬನೆ ಅನಿವಾರ್ಯ- ಆದಿದ್ರಾವಿಡ ಸಮುದಾಯ ಸಮಾವೇಶದಲ್ಲಿ ಗೃಹಸಚಿವ ಡಾ.ಪರಮೇಶ್ವರ ಕರೆ

Mangaluru - Prakash MC Manjeshwar

ವಿಜಯವಾಣಿ ಸುದ್ದಿಜಾಲ ಮಂಗಳೂರು
ಸ್ವಾತಂತ್ರೃ ಸಿಕ್ಕಿ 75 ವರ್ಷಗಳ ಬಳಿಕವೂ ದೇಶದಲ್ಲಿ ಸಮಾನತೆ ಸಾಧ್ಯವಾಗಿಲ್ಲ. ಜಾತೀಯ ವ್ಯವಸ್ಥೆ ಬೇರೂರುತ್ತಲೇ ಇದೆ. ಕಾನೂನು, ಶಾಸನಗಳು ನಮಗೆ ಸ್ವಲ್ಪಮಟ್ಟಿನ ಸಹಾಯಕ್ಕೆ ಬರಬಹುದು. ಹೆಚ್ಚು ಪ್ರಯೋಜನ ಆಗದು. ನಮ್ಮ ರಕ್ಷಣೆಗೆ ಯಾರೂ ಬರಲಾರರು. ಆದ್ದರಿಂದ ಸಮಾಜ ಸ್ವಾವಲಂಬನೆ ಸಾಧಿಸುವುದು ಮತ್ತು ಒಗ್ಗಟ್ಟಾಗುವುದು ಅನಿವಾರ್ಯ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ವತಿಯಿಂದ ಭಾನುವಾರ ಪುರಭವನದಲ್ಲಿ ಆದಿದ್ರಾವಿಡ ರಾಜ್ಯ ಸಮಾವೇಶದಲ್ಲಿ ಮಾತನಾಡಿದರು.
ಕೃಷಿ ಮಾಡಲು ಆದಿದ್ರಾವಿಡ ಸಮಾಜದ ಜನರಲ್ಲಿ ಭೂಮಿಯೇ ಇಲ್ಲ. ಉದ್ಯಮದಲ್ಲಿ ಮೇಲೆ ಬರೋಣ ಎಂದರೆ ಹೂಡಿಕೆ ಮಾಡಲು ಬಂಡವಾಳವಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಹೇಳಿರುವಂತೆ ಶಿಕ್ಷಣ ನಮ್ಮ ಸಮಾಜದ ಪ್ರಧಾನ ಅಸ್ತ್ರವಾಗಬೇಕು. ಹೆತ್ತವರು ಒಂದು ಹೊತ್ತು ಊಟ ಬಿಟ್ಟರೂ ಪರವಾಗಿಲ್ಲ, ಸಮಾಜದ ಎಲ್ಲ ಮನೆಯಲ್ಲೂ ಪದವೀಧರರು ಸೃಷ್ಟಿಯಾಗಬೇಕು ಎಂದರು.
ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಇವತ್ತು ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯಾಗಿ, ಸುಳ್ಯದಲ್ಲಿ ಭಾಗೀರಥಿ ಮುರುಳ್ಯ ಅವರನ್ನು ಶಾಸಕರಾಗಿ ಕಾಣಲು ಸಾಧ್ಯವಾಗಿದೆ. ಸಮಾಜದಲ್ಲಿ ಒಗ್ಗಟಾಗಿದ್ದಲ್ಲಿ ಯಾವುದೇ ಶಕ್ತಿ ಅಲುಗಾಡಿಸಲು ಸಾಧ್ಯವಿಲ್ಲ ಎಂದರು.
ಸಂಘದ ಅಧ್ಯಕ್ಷ ಶಿವಾನಂದ ಬಳ್ಳಾಲ್ಬಾಗ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಭಾಗೀರಥಿ ಮುರುಳ್ಯ, ಹರೀಶ್ ಪೂಂಜ, ಮೇಯರ್ ಸುಧೀರ್ ಶೆಟ್ಟಿ  ಕಣ್ಣೂರು, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕ ಜೆ.ಆರ್.ಲೋಬೊ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಮಹಾನಗರ ಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಮನಪಾ ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಪಾಲಿಕೆ ಸದಸ್ಯರಾದ ಭರತ್ ಕುಮಾರ್ ಎಸ್., ಮನೋಜ್ ಕೋಡಿಕಲ್,  ಜಿ.ಪಂ. ಮಾಜಿ ಅಧ್ಯಕ್ಷ ಸೋಮನಾಥ್ ಉಪ್ಪಿನಂಗಡಿ, ಜಿಪಂ ಮಾಜಿ ಸದಸ್ಯ ಶೇಖರ ಕುಕ್ಕೇಡಿ, ಬಂಟ್ವಾಳ ಪುರಸಭೆ ಸದಸ್ಯ ಜನಾರ್ದನ ಚೆಂಡ್ತಿಮಾರ್, ಸಂಘದ ದ.ಕ ಜಿಲ್ಲಾಧ್ಯಕ್ಷ  ಶ್ರೀನಿವಾಸ್ ಅರ್ಬಿಗುಡ್ಡೆ, ಉಡುಪಿ ಜಿಲ್ಲಾಧ್ಯಕ್ಷ ಶೇಖರ ಕೌಡೂರು, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಸುರೇಶ್ ಕೊಪ್ಪ, ಹಾಸನ ಜಿಲ್ಲಾಧ್ಯಕ್ಷ ರವಿ ನಾರಾಯಣ್, ಕಾಸರಗೋಡು ಜಿಲ್ಲಾಧ್ಯಕ್ಷ ಗುಣಪಾಲ್, ಮೂಡುಬಿದಿರೆ ತೋಡಾರು ಕಾನದ ಕಟದ ಮೂಲ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವರಾಜ್ ಪಿ.ಬಿ., ಮುಖಂಡರಾದ ಶ್ರೀನಿವಾಸ್ ಕಾರ್ಲ, ಮೋಹನ್ ನೆಲ್ಲಿಗುಂಡಿ ಪುತ್ತೂರು, ಬಾಬು ಜಾಲ್ಸೂರು, ಉಷಾ ಮತ್ತಿತರರರು ಉಪಸ್ಥಿತರಿದ್ದರು.
 ಶಾಸಕಿ ಕು. ಭಾಗೀರಥಿ ಮುರುಳ್ಯ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆದಿದ್ರಾವಿಡ ಸಮಾಜದ ಸಾಧಕರನ್ನು ಗೌರವಿಸಲಾಯಿತು.
ರಾಜ್ಯ ಸಂಘಟನಾ ಸಂಚಾಲಕ ಪ್ರೇಮನಾಥ ಬಳ್ಳಾಲ್‌ಬಾಗ್ ಸ್ವಾಗತಿಸಿದರು. ರೋಹಿತ್ ಉಳ್ಳಾಲ್  ಕಾರ್ಯಕ್ರಮ ನಿರೂಪಿಸಿದರು.
** * * *
ನಿಗಮದಲ್ಲಿ ಸ್ಥಾನ
 ಆದಿ ದ್ರಾವಿಡ ಸಮುದಾಯದ ಒಬರನ್ನು ನಿಗಮ ಮಂಡಳಿಗೆ ನೇಮಿಸಲಾಗುವುದು. ಈ ಕುರಿತು ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ. ಆದಿದ್ರಾವಿಡ ಸಮುದಾಯ ಭವನಕ್ಕೆ 5ಎಕರೆ ಜಮೀನು, ಡಿಸಿ ಮನ್ನಾ ಯೋಜನೆ ಭೂಮಿ ಮಂಜೂರು, ಮೂಲಸ್ಥಾನದ ಅಭಿವೃದ್ಧಿಗೆ ಮುಂದಿನ ಬಜೆಟ್‌ನಲ್ಲಿ ಸರ್ಕಾರದಿಂದ ಅನುದಾನ ನೀಡಲು ಪ್ರಾಮಾಣಿಕ ಪ್ರಯತ್ನ, ಆದಿದ್ರಾವಿಡ ಜಾತಿಗಳ ಮಧ್ಯೆ ಇರುವ ಗೊಂದಲದ ಬಗ್ಗೆ ಮಾತನಾಡೋಕೆ ಉಪಜಾತಿ ಮಾಡಲು ಚಿಂತನೆ, ಜಾತಿ ಪ್ರಮಾಣಪತ್ರ ಸರಳಗೊಳಿಸಲು ಪ್ರಯತ್ನ, ವಸತಿ ನಿರ್ಮಾಣಕ್ಕೆ ಸರ್ಕಾರಿ ಜಾಗ ಮೀಸಲಿಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ, ಸರ್ಕಾರದ ಖಾಲಿಹುದ್ದೆ ಭರ್ತಿ ಕುರಿತು ಅವರು ಭರವಸೆ ನೀಡಿದರು.

** * * *
ಪರಮೇಶ್ವರ್ ಎಲ್ಲ ಸರಿ ಕಣ್ರೀ.. ಆದರೆ...
ದೇಶದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆದವರ ಬಗ್ಗೆಯೂ ಒಂದು ದೊಡ್ಡ ಜನವರ್ಗದ ದೃಷ್ಟಿಕೋನ ಬದಲಾಗಿಲ್ಲ. ಪರಮೇಶ್ವರ್ ಎಲ್ಲ ಸರಿ ಕಣ್ರೀ... ಆದರೆ ಅವನು ದಲಿತ ಎಂದು ಹೇಳುವವರೂ ಇದ್ದಾರೆ...
ರಾಜ್ಯದ ಗೃಹಸಚಿವ ಡಾ.ಜಿ.ಪರಮೇಶ್ವರ್ ಮಂಗಳೂರಿನ ಆದಿ ದ್ರಾವಿಡ ಸಮಾವೇಶದ ಬಳಿಕ ಆಡಿದ ಮಾತುಗಳಿವು.
ಸಮಾಜದ ಈ ಪರಿಸ್ಥಿತಿ ಬದಲಾಯಿಸುವ ಜವಾಬ್ದಾರಿಯನ್ನು ಸಮಾಜವೇ ತೆಗೆದುಕೊಳ್ಳಬೇಕು. ಕೀಳರಿಮೆಯಿಂದ ಹೊರಬಂದು  ನಾವು ಸಂಘಟಿತರಾಗಬೇಕಾಗಿದೆ. ಈ ಮಾತಿನಲ್ಲಿ ಸುಳ್ಳು ಇಲ್ಲ, ಸತ್ಯವನ್ನೇ ಹೇಳಿದ್ದೇನೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.