ರಾಯಚೂರು ಡಾ.ಫ.ಗು.ಹಳಕಟ್ಟಿ ಅವರು ವಚನಗಳ ಹಸ್ತ ಪ್ರತಿಗಳನ್ನು ಸಂಗ್ರಹಿಸಿ, ಪ್ರಕಟಿಸಿ, ಶರಣ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆಂದು ತಹಶೀಲ್ದಾರ್ ಸುರೇಶ ವರ್ಮ ಹೇಳಿದರು.
ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ,ಜಿಪಂ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಡಾ.ಫ.ಗು.ಹಳಕಟ್ಟಿಯವರ ಜನ್ಮದಿನದ ನಿಮಿತ್ತ ಬುಧವಾರ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕನ್ನಡ ನಾಡು, ನುಡಿ, ಹಾಗೂ ಸಾಹಿತ್ಯದ ಬಗ್ಗೆ ಅವರಿಗೆ ವಿಶೇಷ ಕಾಳಜಿ, ಪ್ರೀತಿ ಇದ್ದದ್ದನ್ನು ಗಮನಿಸಬಹುದು. ಅವರಲ್ಲಿಯ ಶಿಸ್ತು, ಶ್ರದ್ದೆ, ಮಾಡುವ ಕೆಲಸದಲ್ಲಿನ ನಿಷ್ಠೆಯಿಂದಾಗಿ ವಚನ ಸಾಹಿತ್ಯ ಸಂಗ್ರಹಕ್ಕೆ ಅವರು ಮಾಡಿದ ಸಾಹಸ ಪೂರ್ಣಕಾರ್ಯ ಶ್ಲಾಘನೀಯ ಹಾಗೂ ಸ್ಮರಣೀಯವಾಗಿದೆ ಎಂದರು.
ಹಿರಿಯ ಸಾಹಿತಿ ಡಾ.ಚನ್ನಬಸವ ಹಿರೇಮಠ ಉಪನ್ಯಾಸ ನೀಡಿ, ಫ.ಗು.ಹಳಕಟ್ಟಿ ಅವರು ಶರಣರ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸಿ ಸಂಶೋಧನಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. 1923 ರಲ್ಲಿ ಹಲವಾರು ವಚನ ಸಾಹಿತ್ಯದ ಹಸ್ತ ಪುಟಗಳನ್ನು ಪ್ರಕಟಿಸುವ ಉದ್ದೇಶದಿಂದ ಪ್ರಕಟಕರ ಜೊತೆ ಮಾತನಾಡಿ, ಅವುಗಳ ಪ್ರಕಟಣೆ ಮಾಡಿ ರಕ್ಷಣೆ ಮಾಡಿದರು. ವಚನ ಸಾಹಿತ್ಯದ ರಕ್ಷಣೆಗಾಗಿ ತಮ್ಮ ಸ್ವಂತ ಮನೆಯನ್ನೇ ಮಾರಿದ ಧೀಮಂತರಾಗಿದ್ದಾರೆ. ಹಲವಾರು ವಚನಕಾರರ ಸಾಹಿತ್ಯದ ಪ್ರಚಾರವನ್ನು ಮಾಡಿದರು. ಇಂದಿನ ಪೀಳಿಗೆಗೆ ವಚನ ಸಾಹಿತ್ಯದ ಜ್ಞಾನವು ಅತ್ಯವಶ್ಯಕ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ವೀರ ಹನುಮಾನ, ಬಸೀರ್‌ಅಹ್ಮದ್ ಹೊಸಮನಿ, ಯುವ ಸಾಹಿತಿ ಈರಣ್ಣ ಬೆಂಗಾಲಿ, ವೇಣು ಜಾಲಿಬೆಂಚಿ, ಮಲ್ಲೇಶ, ಎಂ.ಬಿ.ನರಸಿಂಹಲು ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಇಸ್ಮಾಯಿಲ್, ವಿನೋದ ಇದ್ದರು.