ಜಿಲ್ಲೆ

ಡಾ. ಡಿ.ಎಸ್. ಕರಕಿ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ 7ಕ್ಕೆ

ಹುಬ್ಬಳ್ಳಿ : ಡಾ. ಡಿ.ಎಸ್. ಕರಕಿ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿ. 7ರಂದು ಸಂಜೆ 5.30ಕ್ಕೆ ಇಲ್ಲಿನ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ನಗರದಲ್ಲಿ ಮಂಗಳವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಡಾ. ಡಿ.ಎಸ್. ಕರಕಿ ಸಾಹಿತ್ಯ ವೇದಿಕೆ ಟ್ರಸ್ಟ್ ಅಧ್ಯಕ್ಷ ಎಂ.ವಿ. ಸುಬ್ರಹ್ಮಣ್ಯ, ಜಗದೀಶ ಶೆಟ್ಟರ್ ದತ್ತಿ ಆಶ್ರಯದಲ್ಲಿ ಹಮ್ಮಿಕೊಂಡಿರುವ ಈ ಸಮಾರಂಭಕ್ಕೆ ಹಿರಿಯ ಸಾಹಿತಿ ಜೋಗಿ ಅತಿಥಿಯಾಗಿದ್ದು, ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ ಅಧ್ಯಕ್ಷತೆ ವಹಿಸುವರು ಎಂದರು.

ಡಾ. ಡಿ.ಎಸ್. ರ್ಕ ಕಾವ್ಯ ಪ್ರಶಸ್ತಿಯನ್ನು 2019ನೇ ಸಾಲಿಗೆ ‘ಮಂಜಿನೊಳಗಣ ಕೆಂಡ’ ಕೃತಿಗಾಗಿ ಹೆಬಸೂರ ರಮಜಾನ್ ಅವರಿಗೆ, 2020ನೇ ಸಾಲಿಗೆ ‘ಸರಹದ್ದುಗಳಿಲ್ಲದ ಭೂಮಿಯ ಕನಸು’ ಕೃತಿಗಾಗಿ ನಿರ್ಮಲಾ ಶೆಟ್ಟರ ಅವರಿಗೆ, 2021ನೇ ಸಾಲಿಗೆ ‘ಮನಮದ್ದಳೆಯ ಸ್ವಗತ’ ಕೃತಿಗಾಗಿ ಶ್ವೇತಾ ನರಗುಂದ ಅವರಿಗೆ, 2022ನೇ ಸಾಲಿಗೆ ‘ಎಂಟು ಬಣ್ಣದ ಕೌದಿ’ ಕೃತಿಗಾಗಿ ಡಾ. ಶಿವಾನಂದ ಕುಬಸದ ಅವರಿಗೆ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ಪ್ರಶಸ್ತಿಯು 10 ಸಾವಿರ ರೂ. ನಗದು, ಸ್ಮರಣಿಕೆ ಹೊಂದಿರುತ್ತದೆ. 2003ರಿಂದ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಇದುವರೆಗೆ 18 ಕವಿಗಳು ಪ್ರಶಸ್ತಿ ಪುರಸ್ಕೃತರಾಗಿದ್ದಾರೆ ಎಂದು ಹೇಳಿದರು.

ತೀರ್ಪಗಾರರ ಪರವಾಗಿ ಚಂದ್ರಶೇಖರ ವಸ್ತ್ರದ, ಶಾಮಸುಂದರ ಬಿದರಕುಂದಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಸ್.ಪಿ. ಸಂಶಿಮಠ, ಕಾರ್ಯದರ್ಶಿ ರವೀಂದ್ರ ಬಳಿಗಾರ ಸಮಾರಂಭದಲ್ಲಿ ಉಪಸ್ಥಿತರಿರುವರು ಎಂದರು.

ಪ್ರಶಸ್ತಿಗೆ ಪಾತ್ರರಾಗಿರುವ ಹೆಬಸೂರ ರಮಜಾನ್ ಅವರು ಹುಬ್ಬಳ್ಳಿ ಬಳಿಯ ಹೆಬಸೂರ ಗ್ರಾಮದವರು. ಶಿಗ್ಗಾಂವಿಯ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ಶಿಗ್ಗಾಂವಿ ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷರೂ ಆಗಿದ್ದಾರೆ.

ನಿರ್ಮಲಾ ಶೆಟ್ಟರ ಅವರು ಹುಬ್ಬಳ್ಳಿಯ ಸರ್ಕಾರಿ ಹೈಸ್ಕೂಲ್​ನಲ್ಲಿ ಹಿಂದಿ ಭಾಷಾ ಶಿಕ್ಷಕಿಯರಾಗಿದ್ದಾರೆ. ಶ್ವೇತಾ ನರಗುಂದ ಅವರು ಬೆಳಗಾವಿಯವರಾಗಿದ್ದು, ಲಿಬಿಯಾದ ಬೆಂಗಾಝಿಯಲ್ಲಿ ಹೈಸ್ಕೂಲ್ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಡಾ. ಶಿವಾನಂದ ಕುಬಸದ ಅವರು ವೃತ್ತಿಯಿಂದ ಶಸ್ತ್ರಚಿಕಿತ್ಸಕರು. ಮುಧೋಳದಲ್ಲಿ ಸುಸಜ್ಜಿತ ಆಸ್ಪತ್ರೆ ಹೊಂದಿರುವ ಇವರು, 16 ವರ್ಷ ಸರ್ಕಾರಿ ವೈದ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದರು.

ಡಿ. 8ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ಗಂಟೆವರೆಗೆ ಹಿರಿಯ ಕವಿಗಳಾದ ಜೋಗಿ ಹಾಗೂ ಬಿ.ಆರ್. ಲಕ್ಷ್ಮಣರಾವ್ ಅವರೊಂದಿಗೆ ಮಾತುಕತೆ ಆಯೋಜಿಸಲಾಗಿದೆ. ಸಾಹಿತ್ಯ ಭಂಡಾರದ ಕಟ್ಟಡದ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಆಸಕ್ತರು ಪಾಲ್ಗೊಳ್ಳುವಂತೆ ತಿಳಿಸಿದರು.

ಟ್ರಸ್ಟ್ ಉಪಾಧ್ಯಕ್ಷ ಬಿ.ಎಸ್. ಮಾಳವಾಡ ಸುದ್ದಿಗೋಷ್ಠಿಯಲ್ಲಿ ಇದ್ದರು.