ಪಶುವೈದ್ಯಕೀಯ ಇಲಾಖೆಯಡಿ ಮಂಜೂರಾದ ಪಶು ಸಂಜೀವಿನಿ ತುರ್ತು ಚಿಕಿತ್ಸಾ ವಾಹನಕ್ಕೆ ಶಾಸಕ ಡಾ. ಚಂದ್ರು ಲಮಾಣಿ ಬುಧವಾರ ಚಾಲನೆ ನೀಡಿದರು. 
ಜಿಲ್ಲೆ

ಪಶು ಆರೈಕೆಗೆ ತುರ್ತು ವಾಹನ ಸದಾಸಿದ್ಧ

ಶಿರಹಟ್ಟಿ: ಪಶು ವೈದ್ಯಕೀಯ ಇಲಾಖೆಯಿಂದ ಮಂಜೂರಾದ ಪಶು ಸಂಜೀವಿನಿ ತುರ್ತು ಚಿಕಿತ್ಸಾ ವಾಹನಕ್ಕೆ ಶಾಸಕ ಡಾ. ಚಂದ್ರು ಲಮಾಣಿ ಬುಧವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಪಶುಪಾಲನೆ ಆಸ್ಪತ್ರೆಯಲ್ಲಿ ಪಶು ವೈದ್ಯರು ಹಾಗೂ ಚಿಕಿತ್ಸಾ ಸಿಬ್ಬಂದಿಯ ಕೊರತೆಯಿಂದ ರೈತರು ಸಕಾಲದಲ್ಲಿ ದನ, ಕರುಗಳಿಗೆ ಚಿಕಿತ್ಸೆ ಪಡೆಯುವುದು ಗಂಭೀರ ಸಮಸ್ಯೆಯಾಗಿತ್ತು. ಈ ಬಗ್ಗೆ ಸರ್ಕಾರದ ಗಮನ ಸೆಳೆದ ನಂತರ 400 ಪಶುವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ವಿವಿಧ ರೋಗಗಳಿಂದ ಬಳಲುತ್ತಿರುವ ಜಾನುವಾರುಗಳ ಚಿಕಿತ್ಸೆಯ ನೆರವಿಗೆ ಬರುವುದರ ಮೂಲಕ ಆಯಾ ಗ್ರಾಮಕ್ಕೆ ಹೋಗಿ ಚಿಕಿತ್ಸೆ ಸೌಲಭ್ಯ ನೀಡುವುದಕ್ಕಾಗಿ ಸರ್ಕಾರ ತುರ್ತು ಚಿಕಿತ್ಸಾ ವಾಹನದ ಸೌಲಭ್ಯ ನೀಡಿದೆ ಎಂದು ತಿಳಿಸಿದರು.
ತುರ್ತು ಚಿಕಿತ್ಸಾ ವಾಹನ ಪಶುಗಳಿಗೆ ಸಂಜೀವಿನಿ ಇದ್ದಂತೆ. ರೈತರು ತಮ್ಮ ದನಕರುಗಳ ಚಿಕಿತ್ಸೆಗಾಗಿ ಈ ವಾಹನ ಸದುಪಯೋಗ ಪಡಿಸಿಕೊಂಡು ಪಶು ವೈದ್ಯಕೀಯ ಇಲಾಖೆಗೆ ಸಹಕರಿಸಬೇಕು. ಹಾಗೆಯೇ ವಾಹನದಲ್ಲಿ ಕಾರ್ಯ ನಿರ್ವಹಿಸುವ ಪಶುವೈದ್ಯ ಹಾಗೂ ಉಳಿದ ಸಹಾಯಕ ಸಿಬ್ಬಂದಿ ರೈತರ ತುರ್ತು ಕರೆಗಳನ್ನು ಸ್ವೀಕರಿಸಿ ಸಂಬಂಧಿಸಿದ ಹಳ್ಳಿಗೆ ಹೋಗಿ ಪಶುಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಿ ರೈತರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಬೇಕು ಎಂದು ಹೇಳಿದರು.
ಪಶು ವೈದ್ಯಾಧಿಕಾರಿ ಡಾ. ಎನ್.ಎಚ್. ಓಲೇಕಾರ ಮಾತನಾಡಿ, ಪಶು ವೈದ್ಯಕೀಯ ಸೇವಾ ಇಲಾಖೆಯಡಿ ಕೇಂದ್ರ ಪುರಸ್ಕೃತ ಯೋಜನೆಯಡಿ ಪಶುಗಳ ಆರೈಕೆಯಲ್ಲಿ ಮಹತ್ವದ ಪಾತ್ರ ತೋರಲು ಸಂಚಾರಿ ವಾಹನ ನೀಡಲಾಗಿದೆ. ಈ ವಾಹನ ಸೇವೆಗಾಗಿ ರೈತರು 1962 ಸಂಖ್ಯೆಗೆ ಕರೆ ಮಾಡಿ, ತಾವು ವಾಸಿಸುವ ಗ್ರಾಮದ ಮಾಹಿತಿ ನೀಡಿದ್ದಲ್ಲಿ ವಾಹನ ಸಿಬ್ಬಂದಿ ತಕ್ಷಣ ಕಾರ್ಯ ಪ್ರವೃತ್ತರಾಗುತ್ತಾರೆ. ಸದರಿ ವಾಹನದ ತಾಲೂಕಿನ 7 ಪಶು ಆಸ್ಪತ್ರೆ ಸೇರಿ 48 ಹಳ್ಳಿಗಳ ರೈತರ ಸೇವೆಗೆ ಸಿದ್ಧವಾಗಿದ್ದು ಒಟ್ಟಾರೆ ಪಶು ವೈದ್ಯರ ಸಮಸ್ಯೆ ನೀಗಿಸುವ ಮೂಲಕ ಗ್ರಾಮಾಂತರ ಪ್ರದೇಶದ ರೈತರ ಮನೆ ಬಾಗಿಲಿಗೆ ಹೋಗಿ ಪಶುಗಳ ಸೇವೆ ಮಾಡುವ ಅವಕಾಶ ದೊರೆದಂತಾಗಿದೆ ಎಂದರು.