ನೆಲಮಂಗಲ ನಗರದ ಮಹಂತಿನ ಮಠದಲ್ಲಿ ಶ್ರೀ ರುದ್ರೇಶ್ವರ ತರುಣ ಸಂಘದ ಶತಮಾನೋತ್ಸವ ಪ್ರಯುಕ್ತ ಮುದ್ರಿಸಿದ್ದ ಶತರುದ್ರನಮನ ವಿಶೇಷ ಸಂಚಿಕೆಯನ್ನು ಕಾಶಿ ಜಗದ್ಗುರುಗಳು ಲೋಕಾರ್ಪಣೆ ಮಾಡಿದರು. ಮೇಲಣಗವಿ ಮಠ, ವಿಭೂತಿಪುರ ಹಾಗೂ ಬಿದರಕೆರೆ ಗುರುಸಿದ್ದೇಶ್ವರ ಗದ್ದುಗೆ ಮಠದ ಶ್ರೀಗಳು ಇದ್ದರು.  
ಜಿಲ್ಲೆ

ಇಂದ್ರಿಯ ನಿಗ್ರಹದಿಂದ ಸಾಧನೆ ಸಾಧ್ಯ

Bengaluru Rural

ನೆಲಮಂಗಲ: ಇಂದ್ರಿಯಗಳ ಅನವಶ್ಯಕ ಬಳಕೆ ಕಡಿಮೆ ಮಾಡಿದರೆ ಸಾಕಷ್ಟು ಸಾಧನೆ ಮಾಡಬಹುದಾಗಿದೆ. ಅಂತೆಯೇ ಶಿವಮಹಾಮಂತ್ರ ಜಪ, ಪೂಜೆಗಳಿಂದ ಇಷ್ಟಾರ್ಥ ನೆರವೇರಲಿವೆ ಎಂದು ಶ್ರೀಮದ್ ಕಾಶಿ ಜ್ಞಾನ ಸಿಂಹಸನಾಧೀಶ್ವರ ಶ್ರೀ 1008 ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.
ನಗರದ ರುದ್ರೇಶ್ವರ ಸಮುದಾಯ ಭವನದಲ್ಲಿ ಶ್ರೀ ರುದ್ರೇಶ್ವರ ತರುಣ ಸಂಘದ ಶತಮಾನೋತ್ಸವ ಸಮಾರಂಭದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಧರ್ಮಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.
ಶತಮಾನೋತ್ಸವ ಆಚರಣೆಗೆ 6 ತಿಂಗಳಿನಿಂದಲೂ ಸಾಕಷ್ಟು ಸಿದ್ಧತೆ ಮಾಡಿ, ಶ್ರಮಿಸಿದ್ದೀರಿ. ಬೆಂಗಳೂರಿನ ವಿಭೂತಿಪುರ, ಶಿವಗಂಗಾ ಶ್ರೀಗಳು ವಿವೇಕಾನಂದರಿದ್ದಂತೆ. ದೇಶ, ವಿದೇಶಗಳಲ್ಲೂ ಸನಾತನ ವೀರಶೈವ ಧರ್ಮ ಸಿದ್ಧಾಂತವನ್ನು ಪರಿಚಯಿಸುವ ಕೆಲಸ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಅದರಲ್ಲೂ ವಿಭೂತಿಪುರ ಮಠದ ಸ್ವಾಮೀಜಿ ಪ್ರವೇಶ ಶುಲ್ಕ, ದೇಣಿಗೆ ಪಡೆಯದೆ ಉಚಿತವಾಗಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ವೇದ, ಜ್ಯೋತಿಷ ಶಾಸದಲ್ಲಿ ಪಾರಂಗತರಾದ ಬಿದರಕೆರೆ ರುದ್ರಮುನಿಶಿವಾಚಾರ್ಯ ಸ್ವಾಮೀಜಿ, ಗುರುದಕ್ಷಿಣೆ ಇಲ್ಲದೆ ಶಿಕ್ಷಣ ನೀಡುತ್ತಿರುವ ಗುರುತ್ರಯರನ್ನು ಆಹ್ವಾನಿಸುವ ಜತೆಗೆ ಕಾಶಿ ಜಗದ್ಗುರುಗಳನ್ನು ಕರೆಸಲು ಶ್ರಮಪಟ್ಟಿರುವುದು ಪರಮೇಶ್ವರನನ್ನು ಒಲಿಸಿಲು ಪಾರ್ವತಿ ಮಾಡಿದ ತಪ್ಪಸ್ಸಿನಂತಿದೆ. ಕಾಶಿ ಜಗದ್ಗುರುಗಳ ದರ್ಶನದಿಂದ ಪಟ್ಟ ಕಷ್ಟಗಳೆಲ್ಲವೂ ಮಾಯವಾಗಿವೆ. ಉತ್ಸವ, ಇಷ್ಟಲಿಂಗ ಪೂಜಾ ಕಾರ್ಯ ಸೇರಿ ಧರ್ಮ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿರುವುದು ಸಂತೋಷವನ್ನುಂಟು ಮಾಡಿದೆ ಎಂದರು.
ಮೇಲಣಗವಿ ಮಠ ಶ್ರೀ ಡಾ.ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಂಘ ಸ್ಥಾಪನೆಗೊಂಡು ಒಂದೆರೆಡು ವಾರ್ಷಿಕೋತ್ಸವ ಆಚರಣೆ ಮಾಡುವುದರೊಳಗೆ ಮಾಯವಾಗುತ್ತವೆ. ಸಂಘವೊಂದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಅಭಿನಂದನೀಯ ಸಂಗತಿ. ಅಧಿಕ ಭವಿಷ್ಯವಿರದ ಕಟ್ಟಡ ಕಟ್ಟುವ ಬದಲಿಗೆ ಮನಸ್ಸುಗಳನ್ನು ಕಟ್ಟುವ ನಿಟ್ಟಿನಲ್ಲಿ ಎಂ.ಗುಬ್ಬಿಹುಚ್ಚಪ್ಪ ಅವರು ಸ್ಥಾಪಿಸಿದ ತರುಣ ಸಂಘ ನಿಸ್ವಾರ್ಥ, ಸಾಮಾಜಿಕ ಕಾಳಜಿಯಿಂದಾಗಿ ಇಂದಿಗೂ ಜೀವಂತವಾಗಿದೆ ಎಂದರು.
ಪ್ರಾಪಂಚಿಕ ವಸ್ತುಗಳ ಬೆಲೆಯನ್ನು ಅರಿಯುವ ಭರದಲ್ಲಿ ಜೀವನದ ಮೌಲ್ಯದ ಬೆಲೆಯನ್ನು ಮರೆಯುತ್ತಿದ್ದೇವೆ. ದುಶ್ಚಟಗಳಿಂದ ದೂರವಿದ್ದು ಸುಸಂಸ್ಕೃತಿಯನ್ನು ಕಲಿಯಬೇಕಿದೆ. ಕರೋನಾದಂತ ಕಷ್ಟದ ಸಮಯದಲ್ಲೂ ಮಠಮಂದಿರಗಳ ಜೀರ್ಣೋದ್ಧಾರ ಮಾಡಿರುವ ಹೆಗ್ಗಳಿಕೆ ಸಮುದಾಯದ ಹಿರಿಯರು, ಯುವಕರದ್ದಾಗಿದೆ. ವಿಶ್ವದ ಜನತೆಯ ಮನಸ್ಸನ್ನು ಗೆದ್ದಿರುವ ಕಾಶಿ ಜಗದ್ಗುರುಗಳ ಆಗಮನ ಸಂತೋಷವನ್ನುಂಟು ಮಾಡಿದೆ ಎಂದರು.


ಕರ್ತವ್ಯಗಳ ಬಗ್ಗೆ ಎಚ್ಚರಿಕೆಗೆ ಸಮಾವೇಶ: ಯುವಕರಲ್ಲಿ ಜೀವನಮೌಲ್ಯಗಳ ಅರಿವು ಮೂಡಿಸಿ, ಕರ್ತವ್ಯಗಳನ್ನು ಎಚ್ಚರಿಸುವುದೇ ಧರ್ಮ ಜಾಗೃತಿ ಸಮಾವೇಶದ ಉದ್ದೇಶ. ಶರೀರದಲ್ಲಿ ಶಕ್ತಿ ಇದ್ದಾಗಲೇ ಭಕ್ತಿ ಹೊಂದಬೇಕು. ಧರ್ಮ ಕಾರ್ಯಗಳನ್ನು ಮಾಡಿಮುಗಿಸಬೇಕು. ಶತಮಾನದ ಹಿಂದೆಯೇ ತರುಣ ಸಂಘ ಸ್ಥಾಪಿಸಿ ಆದರ್ಶ ತರುಣರ ಬೆಳವಣಿಗೆಗೆ ಸಹಕಾರಿಯಾಗಿದೆ. ಶಿವಗಂಗೆ ಶ್ರೀ ಮಲಯ ಶಾಂತಮುನಿ ಶಿವಚಾರ್ಯ ಶ್ರೀಗಳ ಮಾರ್ಗದರ್ಶನದಲ್ಲಿ ಕಾಲಕಾಲಕ್ಕೆ ಸಮಾಜೋದ್ಧಾರ ಕಾರ್ಯಗಳ ಜತೆಗೆ ಆರ್ಥಿಕ ಆದಾಯದ ಮೂಲಗಳನ್ನು ಸದೃಢಗೊಳಿಸಿರುವುದು, ಈಗ 3 ದಿನಗಳ ಕಾಲ ಕಾಶಿ ಜಗದ್ಗುರುಗಳ ದರ್ಶನ ಭಾಗ್ಯ ಕಲ್ಪಿಸಿರುವುದು ಶ್ಲಾಘನೀಯ ಎಂದು ಬೆಂಗಳೂರಿನ ವಿಭೂತಿಪುರ ಮಠದ ಶ್ರೀ ಡಾ.ಮಹಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶತರುದ್ರ ನಮನ ವಿಶೇಷ ಸಂಚಿಕೆ ಲೋಕಾರ್ಪಣೆ: ಶತಮಾನೋತ್ಸವ ಸವಿನೆನಪಿಗಾಗಿ ಮುದ್ರಿಸಿರುವ ಶತರುದ್ರನಮನ ವಿಶೇಷ ಸಂಚಿಕೆಯನ್ನು ಕಾಶಿ ಜಗದ್ಗುರುಗಳು ಲೋಕಾರ್ಪಣೆ ಮಾಡಿದರು. ವಿಶೇಷ ಸಂಚಿಕೆ ಸಂಪಾದಕ ಎಂ.ವಿ.ನೆಗಳೂರ್ ಇದ್ದರು.
ಜಗದ್ಗುರುಗಳಿಂದ ಗುರುರಕ್ಷೆ ರುದ್ರೇಶ್ವರ ತರುಣ ಸಂಘವನ್ನು ನಡೆಸಿಕೊಂಡು ಬಂದಿರುವ ಹಾಗೂ ವೀರಶೈವ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು ಕಾಶಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.

ಸಾಮೂಹಿಕ ಇಷ್ಟಲಿಂಗ ಪೂಜೆ: ಗುರುವಾರ ಬೆಳಗ್ಗೆ ನಗರದ ಮಹಂತಿನ ಮಠದಲ್ಲಿ ಕಾಶಿ ಜಗದ್ಗುರುಗಳ ಇಷ್ಟಲಿಂಗ ಪೂಜೆ ಆಯೋಜಿಸಲಾಗಿತ್ತು. ವೀರಶೈವ ಸಮಾಜದ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು.

ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಮಲ್ಲಯ್ಯ, ರುದ್ರೇಶ್ವರ ತರುಣ ಸಂಘ ಶತಮಾನೋತ್ಸವ ಸಮಾರಂಭದ ಗೌರವಾಧ್ಯಕ್ಷ ಎನ್.ಎಸ್.ನಟರಾಜು, ಅಧ್ಯಕ್ಷ ಎನ್.ಆರ್.ಜಗದೀಶ್, ಉಪಾಧ್ಯಕ್ಷ ಬಿ.ದಯಾಶಂಕರ್, ಖಜಾಂಚಿ ಎನ್.ಎಸ್.ರಾಜು, ಗೌರವಕಾರ್ಯದರ್ಶಿ ಎನ್.ಎಸ್.ಗಣೇಶ್, ಪ್ರಧಾನ ಕಾರ್ಯದರ್ಶಿ ಎನ್.ಎಸ್.ರೇಣುಕಾಪ್ರಸಾದ್, ಸಹಕಾರ್ಯದರ್ಶಿ ಕೆ.ಎನ್.ಯತೀಶ್, ಸದಸ್ಯ ಎಂ.ವಿ.ನೆಗಳೂರು, ಎನ್. ಪಿ.ರಾಜಶೇಖರ್, ಎನ್.ವಿ.ಮಂಜುನಾಥ್, ಎನ್.ಚೆನ್ನಬಸವರಾಜು, ಎಸ್.ಎನ್.ಕಾರ್ತಿಕ್, ಎನ್.ಜೀವನ್ ಹರೀಶ್, ಪಿ.ಪುಟ್ಟಯ್ಯ, ಗಂಗರಾಜು, ಎನ್.ಪಿ.ಲೋಕೇಶ್, ವಿ.ಉಮಾಶಂಕರ್, ಜೆ.ವಿನಯ್, ಆರ್.ಪುನೀತ್ ಕುಮಾರ್, ರುದ್ರೇಶ್ವರ ದೇವಾಲಯ ಟ್ರಸ್ಟ್ ಉಪಾಧ್ಯಕ್ಷ ಎಸ್.ಜಿ.ಚಂದ್ರಶೇಖರ್, ಸಹಕಾರ್ಯದರ್ಶಿ ಎನ್.ಎಂ.ಮಹೇಶ್, ಖಜಾಂಜಿ ಎನ್.ವಿ.ಶಿವಪ್ರಕಾಶ್, ಸದಸ್ಯ ಎನ್.ವಿ.ಯತೀಶ್, ಎನ್.ಯು.ದೀಪಕ್, ಬಿ.ವಿಶ್ವಾಸ್, ಎನ್.ಎಚ್.ಶಂಕರ್, ಎನ್.ಬಿ.ನಾಗರಾಜು, ಎನ್.ಜಿ.ಶಿವಶಂಕರ್, ಪುರಸಭೆ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಆನಂದ್, ಸದಸ್ಯ ಸಿ.ಪ್ರದೀಪ್, ಪೂರ್ಣಿಮಾ ಸುಗ್ಗರಾಜು, ಮಾಜಿ ಅಧ್ಯಕ್ಷ ಉಮಾಶಂಕರ್, ಮುಖಂಡ ಕೇಬಲ್ ಸುರೇಶ್, ಪುನೀತ್ ಖಿಲೇದಾರ್ ಇದ್ದರು.