ಮಂಡ್ಯ: ಕಾವ್ಯ ಹಾಗೂ ಮಹಾಕಾವ್ಯಗಳು ಎಂದಿಗೂ ಜಗತ್ತಿನ ಸಂಸ್ಕೃತಿ ಕಟ್ಟಿಕೊಡಲು ಸಾಧ್ಯವಿಲ್ಲ. ಸಮಾಜದ ಒಟ್ಟು ಚಿತ್ರಣವನ್ನು ಕಟ್ಟಿಕೊಡುತ್ತವೆ. ಅವುಗಳ ಒಳಗಿನ ಸಂಸ್ಕೃತಿ ಯಾವ ರೀತಿ ಎಂಬುದು ಸಣ್ಣಕಥೆಗಳಿಂದ ತಿಳಿಯಲಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಹಿ.ಶಿ.ರಾಮಚಂದ್ರೇಗೌಡ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಹಿಂಗಿದ್ದ ನಮ್ಮ ರಾಮಣ್ಣ ಕೃತಿ ಬಿಡುಗಡೆ ಸಮಾರಂಭದಲ್ಲಿ 2022ನೇ ಸಾಲಿನ ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿಯನ್ನು ‘ಉಪ್ಪುಚ್ಚಿ ಮುಳ್ಳು’ ಕೃತಿಯ ಕರ್ತೃ ದಯಾ ಗಂಗನಘಟ್ಟ ಅವರಿಗೆ ಪ್ರದಾನ ಮಾಡಿ ಮಾತನಾಡಿದರು. ದೇಶವಲ್ಲದೆ, ಜಗತ್ತಿನ ಸಂಸ್ಕೃತಿ ಹಾಗೂ ಸ್ಥಳೀಯ ಗ್ರಾಮೀಣ ಸೊಗಡನ್ನು ಕಟ್ಟಿಕೊಡುವುದು ಸಣ್ಣಕಥೆಗಳಾಗಿವೆ. ಅಮ್ಮ ಪ್ರೀತಿಯ ಹಾಗೂ ಸಂಸ್ಕೃತಿಯ ಉತ್ಪಾದಕಿ. ಅದರಂತೆ ಬೆಸಗರಹಳ್ಳಿ ರಾಮಣ್ಣನವರ ಕಥೆಗಳನ್ನು ಸಂಭ್ರಮಿಸಬೇಕು. ಅವರ ಕಥೆಗಳನ್ನು ಓದುವಾಗ ಸಂಭ್ರಮದಿಂದ ಓದಬೇಕು. ಸಾಹಿತ್ಯ ಜಗತ್ತಿನ ಒಟ್ಟು ಸಂಸ್ಕೃತಿಯನ್ನು ಕಟ್ಟಿಕೊಡುವಲ್ಲಿ ಸಣ್ಣಕಥೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಬೆಸಗರಹಳ್ಳಿ ರಾಮಣ್ಣ ಅವರು ಎಲ್ಲ ಕಥೆಗಳಲ್ಲಿ ಗ್ರಾಮೀಣ ಸಂಸ್ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ. ಸಮಾಜದಲ್ಲಿನ ಆಗು-ಹೋಗುಗಳ ಬಗ್ಗೆ ತಿಳಿಸಿದ್ದಾರೆ. ಸಮಾಜದ ಅವರ ಕಥೆಗಳನ್ನು ಓದುತ್ತಿದ್ದರೆ ರಾಮಣ್ಣನವರು ವೈದ್ಯರ ಎನಿಸಿಬಿಡುತ್ತದೆ. ವೈದ್ಯರಿಂದ ಆಚೆಗೆ ಏನು ಎಂಬುದು ತಿಳಿಯುತ್ತದೆ ಎಂದ ಅವರು, ಮಂಡ್ಯ ಎಂಬುದು ಒಂದು ಲೋಕ. ಸ್ಥಳೀಯ ವಾಸ್ತವ, ದೇಶ ಆಡಳಿತಾತ್ಮಕ, ಅವು ಭದ್ರವಾದ ಯಾವುದನ್ನು ಕಟ್ಟಿಕೊಡಲು ಸಾಧ್ಯವಿಲ್ಲ. ಯಾವ ಲೇಖಕ ಕಥೆಗಳನ್ನು ಬರೆಯುತ್ತಾನೋ, ಕಥೆಗಳ ಮೂಲಕ ಜಗತ್ತನ್ನು ನೋಡುತ್ತಾನೋ, ಆತ ಒಂದು ದೇಶವನ್ನೇ ಕಟ್ಟಿಕೊಡುತ್ತಾನೆ. ಸಮಾಜ ಕಟ್ಟುವ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಾನೆ. ಬೆಸಗರಹಳ್ಳಿ ರಾಮಣ್ಣ ಅವರು ದಲಿತರನ್ನು ಪ್ರೀತಿಸಿದ ರೀತಿ ನೋಡಿದರೆ, ಅವರ ತಾಯಿ ಹೃದಯ ಕಂಡು ಬರುತ್ತದೆ ಎಂದರು.
ಹಿರಿಯ ಸಂಶೋಧಕ ಡಾ.ಸಿ.ವೀರಣ್ಣ ಮಾತನಾಡಿ, ಪ್ರಸ್ತುತ ಮನುಷ್ಯರ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ವೈದ್ಯರಿಗಿಂತ ಸಮಾಜಕ್ಕೆ ಚಿಕಿತ್ಸೆ ನೀಡುವಂತಹ ವೈದ್ಯರ ಅಗತ್ಯತೆ ಹೆಚ್ಚಿದೆ. ಸಮಾಜದಲ್ಲಿ ರೋಗಗಳು ಹೆಚ್ಚಾಗುತ್ತಿವೆ. ಆ ರೋಗಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಸೃಷ್ಟಿಯಾಗುತ್ತಿಲ್ಲ. ಮನುಷ್ಯನ ರೋಗಗಳಿಗೆ ಚಿಕಿತ್ಸೆ ನೀಡುವ ಲಕ್ಷ ವೈದ್ಯರಿಗಿಂತ ಸಮಾಜದ ವೈದ್ಯ ಅತಿ ಮುಖ್ಯವಾಗಿದ್ದಾನೆ. ಸಮಾಜದ ಒಳಿತು, ಕೆಡುಕುಗಳನ್ನು ಗುರುತಿಸಿ ಚಿಕಿತ್ಸೆ ನೀಡುವ ವೈದ್ಯರು ಬೇಕಿದ್ದಾರೆ ಎಂದು ನುಡಿದರು.
ಬೆಸಗರಹಳ್ಳಿ ರಾಮಣ್ಣನವರು ವೈದ್ಯರಾಗಷ್ಟೇ ಉಳಿಯದೆ ಸಮಾಜದ ರೋಗಗಳಿಗೆ ತಮ್ಮ ಬರಹಗಳ ಮೂಲಕ ಚಿಕಿತ್ಸೆ ನೀಡುವ ಪ್ರಯತ್ನ ನಡೆಸಿದರು. ಅದರಲ್ಲಿ ಎಷ್ಟರ ಮಟ್ಟಿಗೆ ಯಶಸ್ಸು ಕಂಡರು ಎನ್ನುವುದಕ್ಕಿಂತ ಎಷ್ಟುದೂರ ಕ್ರಮಿಸಿದರು ಎನ್ನುವುದು ಮುಖ್ಯ. ಸಮಾಜದ ಓರೆ-ಕೋರೆಗಳನ್ನು ಗುರುತಿಸಿ ಸಣ್ಣಕಥೆಗಳ ಮೂಲಕ ಅವುಗಳನ್ನು ಪ್ರಪಂಚಕ್ಕೆ ತೆರೆದಿಟ್ಟರು. ರಾಮಣ್ಣನವರ ತುಡಿತದ ಭಾವನೆಗಳನ್ನು ಯಾರಿಂದಲೂ ಹಿಡಿದಿಟ್ಟುಕೊಳ್ಳಲಾಗಲಿಲ್ಲ. ಸಮಾಜದ ಪರಿವರ್ತನೆ, ಸಮತಾ ಸಮಾಜದ ನಿರ್ಮಾಣದ ಬಗೆಗಿನ ಅವರ ಕನಸನ್ನು ನಾವೆಲ್ಲರೂ ನನಸು ಮಾಡಬೇಕಿದೆ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ಲೇಖಕಿ ದಯಾಗಂಗನಘಟ್ಟ ಮಾತನಾಡಿ, ಗ್ರಾಮೀಣ ಭಾಷೆ ನನಗೆ ಹೆಮ್ಮೆ ತಂದಿದೆ. ಆ ಭಾಷೆಯ ಪದಗಳು ಯಾವಾಗಲೂ ನುಸುಳುತ್ತವೆ. ಇದರಿಂದ ನನ್ನತನ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಹೊರತು, ಕೀಳರಿಮೆ ಮೂಡಿಸಿಲ್ಲ. ಆ ಭಾಷೆಯಿಂದಲೇ ಗ್ರಾಮೀಣ ಭಾಗದ ಜನರ ಸಂಸ್ಕೃತಿ ಕಟ್ಟಿಕೊಡಬಹುದಾಗಿದೆ. ನನ್ನ ತಂದೆಯ ಹೆಸರು ಗಂಗನಘಟ್ಟ ರಾಮಣ್ಣ. ಅದೇ ರೀತಿ ಬೆಸಗರಹಳ್ಳಿ ರಾಮಣ್ಣ ಎಂಬ ಇನ್ನೊಬ್ಬ ತಂದೆಯ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸಿರುವುದು ಸಂತೋಷ ತಂದಿದೆ ಎಂದರು.
ವಿಜೇತ ಕೃತಿಯ ಬಗ್ಗೆ ವಿಮರ್ಶಕ ಡಾ.ಸುಭಾಷ್ ರಾಜಮಾನೆ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷೆ ಎಚ್.ಆರ್.ಸುಜಾತಾ, ಆಜೀವ ಸದಸ್ಯೆ ಡಿ.ಪಿ.ರಾಜಮ್ಮ ರಾಮಣ್ಣ, ರವಿಕಾಂತೇಗೌಡ, ಸಾಹಿತಿ ಚಂದ್ರೇಗೌಡ ಇತರರಿದ್ದರು.