ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಬಸವಣ್ಣನವರ ಬಹುಮುಖ ವ್ಯಕ್ತಿತ್ವ, ಅವರ ಸಂದೇಶಗಳು ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಿ ನಿಲ್ಲುತ್ತವೆ ಎಂದು ಚಿಕ್ಕಮಗಳೂರು ಬಸವ ತತ್ತ್ವ ಪೀಠ ಹಾಗೂ ಶಿವಮೊಗ್ಗದ ಬಸವ ಕೇಂದ್ರದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.
ಕೆಎಲ್ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಕೆಎಲ್ಇ ಡೀಮ್ಡ್ ವಿಶ್ವವಿದ್ಯಾಲಯ), ಬೆಳಗಾವಿಯ ಕನ್ನಡ ಬಳಗದ ವತಿಯಿಂದ ಶನಿವಾರ ಜೆಎನ್‌ಎಂಸಿ ಕ್ಯಾಂಪಸ್‌ನ ಕೆಎಲ್ಇ ಶತಮಾನೋತ್ಸವ ಸಭಾಂಗಣದಲ್ಲಿ ಕನ್ನಡದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ 892ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಏಳು ಮಂದಿ ಆದರ್ಶ ಶಿಕ್ಷಕರು ಸ್ಥಾಪಿಸಿದ ಕೆಎಲ್‌ಇ ಸೊಸೈಟಿಯನ್ನು ಡಾ.ಪ್ರಭಾಕರ ಕೋರೆ ಅವರು ತಮ್ಮ ಕ್ರಿಯಾಶೀಲ ನಾಯಕತ್ವದಲ್ಲಿ 40 ವರ್ಷಗಳಲ್ಲಿ ಕ್ಷಿಪ್ರ ರೂಪಾಂತರಕ್ಕೆ ಒಳಪಡಿಸಿ, ದೇಶಾದ್ಯಂತ 320ಕ್ಕೂ ಅಧಿಕ ಸಂಸ್ಥೆಗಳನ್ನು ವಿಸ್ತರಿಸಿರುವುದು ಸ್ವತಃ ಸ್ಫೂರ್ತಿದಾಯಕ ಸಾಧನೆಯಾಗಿದೆ ಮತ್ತು ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.
ಬಸವಣ್ಣನವರ ಬೋಧನೆಯೊಂದಿಗೆ ಕಲ್ಯಾಣದಲ್ಲಿ ಕ್ರಾಂತಿಯ ಸಂದರ್ಭದಲ್ಲಿ ಶರಣರ ತ್ಯಾಗ ಬಲಿದಾನ ಬಿಂಬಿಸುವ ವಿಶೇಷ ರೂಪಕ ವಾಹನ ಮೆರವಣಿಗೆಯು ಕಾಹೆರ್ (ಜೆಎನ್‌ಎಂಸಿ ಕ್ಯಾಂಪಸ್)ನಿಂದ ಬೆಳಗಾವಿಯ ಲಿಂಗರಾಜ ಕಾಲೇಜಿನವರೆಗೆ ನಡೆಯಿತು. ಇದೇ ವೇಳೆ ಕನ್ನಡ ಬಳಗ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಮಾಣ ಪತ್ರ ವಿತರಿಸಿದರು.
ಕುಲಸಚಿವ ಡಾ.ಎಂ.ಎಸ್.ಗಣಾಚಾರಿ, ಜೆಎನ್‌ಎಂಸಿ ಪ್ರಾಚಾರ್ಯೆ ಡಾ.ಎನ್.ಎಸ್.ಮಹಾಂತಶೆಟ್ಟಿ, ಡಾ.ಎಚ್.ಬಿ.ರಾಜಶೇಖರ, ಡಾ.ವಿ.ಡಿ.ಪಾಟೀಲ, ಡಾ.ಎಂ.ವಿ.ಜಾಲಿ, ಡಾ.ಕರ್ನಲ್ ದಯಾನಂದ, ಡಾ.ರಾಜೇಶ ಪೊವಾರ, ಡಾ.ವಿ.ಎಂ.ಪಟ್ಟಣಶೆಟ್ಟಿ, ಕೆಎಲ್ಇ ವಿವಿ ಘಟಕಗಳ ಪ್ರಾಚಾರ್ಯರು, ಉಪ ಪ್ರಾಚಾರ್ಯರು, ವಿಶ್ವವಿದ್ಯಾಲಯದ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಕನ್ನಡ ಬಳಗದ ವಿದ್ಯಾರ್ಥಿಗಳು 12ನೇ ಶತಮಾನದ ಕರ್ನಾಟಕದಲ್ಲಿ ಪ್ರಮುಖ ಸಾಮಾಜಿಕ-ಧಾರ್ಮಿಕ ಚಳವಳಿಯಾದ ಕಲ್ಯಾಣ ಕ್ರಾಂತಿ ಚಿತ್ರಿಸುವ ಕಿರು ನಾಟಕ ಪ್ರದರ್ಶಿಸಿದರು. ಕನ್ನಡ ಬಳಗದ ಕಾರ್ಯಾಧ್ಯಕ್ಷ ಡಾ.ಅವಿನಾಶ ಕವಿ ಸ್ವಾಗತಿಸಿ, ಬಸವಣ್ಣನವರ ಬೋಧನೆ, ಜೀವನ ಮತ್ತು ತತ್ತ್ವ ವಿವರಿಸಿದರು. ಎಂಬಿಬಿಎಸ್ ವಿದ್ಯಾರ್ಥಿನಿ ಚೇತನ ನಿರೂಪಿಸಿದರು. ಶಂಕರಮ್ಮ ಗೌಡರ ವಂದಿಸಿದರು.