ಜಿಲ್ಲೆ

ಬನ್ನಂಜೆಯೆಂದರೆ ಎಲ್ಲರಿಗೂ ಸ್ಫೂರ್ತಿ, ಚೈತನ್ಯ...

ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ

ಗೋವಿಂದಾಚಾರ್ಯರ ನವತಿ ಜನ್ಮ ವರ್ಧಂತಿ ಉತ್ಸವ

ವಿಜಯವಾಣಿ ಸುದ್ದಿಜಾಲ ಉಡುಪಿ

ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಬನ್ನಂಜೆ ಗೋವಿಂದಾಚಾರ್ಯರು ಎಲ್ಲ ಜ್ಞಾನ ಕ್ಷೇತ್ರ ಪ್ರವೇಶಿಸಿ ತನ್ನತನ, ಹೊಸತನ ತೋರ್ಪಡಿಸುವ ಮೂಲಕ ಪ್ರತಿಯೊಬ್ಬರನ್ನೂ ಬಡಿದೆಬ್ಬಿಸಿದ್ದಾರೆ. ಶ್ರೀಕೃಷ್ಣನ ಚಿಂತನೆಯಂತೆ ವಿಮರ್ಶಾ ಗುಣ ಹಾಗೂ ಜ್ಞಾನ ದಾಹ ಇರುವುದರಿಂದಲೇ ಅಪಾರ ವಿದ್ವತ್​ ಗಳಿಸಿದ್ದರು. ಹೀಗಾಗಿಯೇ ಬನ್ನಂಜೆಯವರೆಂದರೆ ಎಲ್ಲರಿಗೂ ಹೊಸ ಸ್ಫೂರ್ತಿ, ಸದಾ ಚೈತನ್ಯರಾಗಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠ, ಡಾ. ಬನ್ನಂಜೆ ಗೋವಿಂದ ಪಂಡಿತಾಚಾರ್ಯರ ನವತಿ ಜನ್ಮ ವರ್ಧಂತಿ ಸಮಿತಿ ಉಡುಪಿ ಹಾಗೂ ಈಶಾವಾಸ್ಯ ಪ್ರತಿಷ್ಠಾನ ಅಂಬಲಪಾಡಿ ಆಶ್ರಯದಲ್ಲಿ ಆಗಸ್ಟ್​ 9ರಂದು ಸಂಜೆ ಆಯೋಜಿಸಿದ್ದ ಡಾ. ಬನ್ನಂಜೆ ಗೋವಿಂದಾಚಾರ್ಯರ ನವತಿ ಜನ್ಮ ವರ್ಧಂತಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಬನ್ನಂಜೆ ಬರಹಗಳ ಪುಸ್ತಕ ಬಿಡುಗಡೆ

ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಬನ್ನಂಜೆ ಗೋವಿಂದಾಚಾರ್ಯ ವಿರಚಿತ ಬನ್ನಂಜೆ ಬರಹಗಳು -5 ಎಂಬ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ತಮ್ಮ ಅಧ್ಯಯನದ ಅವಧಿಯಲ್ಲಿ ಶಾಸ್ತ್ರಕ್ಕೆ ಸಂಬಂದಿಸಿ ಬನ್ನಂಜೆ ಅವರು ಬರೆದ ಪುಸ್ತಕವನ್ನೂ ಪಠಿಸಿದ್ದೇನೆ. ಅವರ ಜ್ಞಾನ ಲಹರಿ ಅಪಾರವಾದುದು ಎಂದರು.

ಮಾಜಿ ಶಾಸಕ ಕೆ.ರಘುಪತಿ ಭಟ್​ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ನ್ಯಾಯಮೂರ್ತಿ ದಿನೇಶಕುಮಾರ್​, ಶಾಸಕ ಯಶ್​ಪಾಲ್​ ಸುವರ್ಣ, ಡಾ. ರಾಘವೇಂದ್ರ ರಾವ್​, ಮಂಗಳೂರು ಶಾರದಾ ವಿದ್ಯಾಲಯದ ಸಂಚಾಲಕ ಎಂ.ಡಿ. ಪುರಾಣಿಕ್​, ಅಂಬಲಪಾಡಿ ದೇಗುಲದ ಧರ್ಮದರ್ಶಿ ಡಾ. ನೀ.ಬಿ. ವಿಜಯ ಬಲ್ಲಾಳ, ರಮೇಶ ರಾವ್​ ಬೀಡು, ವಿದ್ವಾನ್​ ವಾಸುದೇವ ಭಟ್​ ಪಾವಂಜೆ, ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಉಪಸ್ಥಿತರಿದ್ದರು.

ಶತಾವಧಾನಿ ಡಾ. ರಾಮನಾಥ ಆಚಾರ್ಯ ಬನ್ನಂಜೆ ಗೋವಿಂದಾಚಾರ್ಯರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ವಾರಿಜಾಕ್ಷಿ ಭಟ್​ ಪ್ರಾರ್ಥಿಸಿದರು. ವರ್ಧಂತಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಬಾಲಾಜಿ ರಾಘವೇಂದ್ರ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೆರಂಪಳ್ಳಿ ವಾಸುದೇವ ಭಟ್​ ಕಾರ್ಯಕ್ರಮ ನಿರೂಪಿಸಿದರು. ಅಭಿರಾಮ ತಂತ್ರಿ ವಂದಿಸಿದರು.

ನಾವೆಲ್ಲ ಗೋವಿಂದಾಚಾರ್ಯರ ಜೀವಿತಾವಧಿಯಲ್ಲಿ ಇದ್ದೆವು ಅನ್ನುವುದೇ ಹೆಮ್ಮೆಯ ಸಂಗತಿ. ನಡೆದಾಡುವ ವಿಶ್ವಕೋಶವಾಗಿದ್ದ ಅವರ ಅನುಭವ, ಮಾತುಗಾರಿಕೆ, ಕೃತಿ, ಪ್ರವಚನಗಳ ಸಂದೇಶ ಮುಂದಿನ ತಲೆಮಾರಿಗೆ ತಲುಪಿಸುವಂತಹ ಕಾರ್ಯಕ್ರಮ ನಡೆಯುವಂತಾಗಬೇಕು. | ಕೋಟ ಶ್ರೀನಿವಾಸ ಪೂಜಾರಿ. ಸಂಸದ.