ಜಿಲ್ಲೆ

ಮಾರುಕಟ್ಟೆ ಆಳುವ ಇಂಗ್ಲಿಷ್‌ನಿಂದ ಕನ್ನಡಕ್ಕೆ ಕುತ್ತು : ಡಾ.ಬಂಜಗೆರೆ ಜಯಪ್ರಕಾಶ್ ಬೇಸರ

ಮೈಸೂರು: ಅಂತಾರಾಷ್ಟ್ರೀಯ ಮಾರುಕಟ್ಟೆ ವ್ಯವಸ್ಥೆಗೆ ಪೂರಕವಾಗಿ ನಾವು ಸ್ಪಂದಿಸುವುದಕ್ಕೆ ಆಗದೇ ಇರುವ ದೌರ್ಬಲ್ಯದಿಂದ ನಮ್ಮ ಭಾಷೆಗೆ ಆತಂಕ ಎದುರಾಗಿದೆ ಎಂದು ಲೇಖಕ ಡಾ.ಬಂಜಗೆರೆ ಜಯಪ್ರಕಾಶ್ ಬೇಸರ ವ್ಯಕ್ತಪಡಿಸಿದರು.

ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ(ಸಿಎಫ್‌ಟಿಆರ್‌ಐ)ದಲ್ಲಿ ಶುಕ್ರವಾರ ಕನ್ನಡ ಸಹೃದಯ ಬಳಗದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.

ನೆರೆಯ ರಾಜ್ಯಗಳ ತಮಿಳು, ಮರಾಠಿ, ಮಲೆಯಾಳಂ ಸೇರಿದಂತೆ ಇನ್ನಿತರ ಭಾಷೆಗಳಿಂದ ಕನ್ನಡ ಭಾಷೆಗೆ ಕುತ್ತು ಬಂದಿಲ್ಲ. ವಿಶ್ವದ ಎಲ್ಲ ಕ್ಷೇತ್ರದ ಮಾರುಕಟ್ಟೆ ವ್ಯವಸ್ಥೆಯನ್ನು ಆಳುತ್ತಿರುವ ಇಂಗ್ಲಿಷ್ ಭಾಷೆಯಿಂದ ಕನ್ನಡಕ್ಕೆ ಕುತ್ತು ಬಂದಿದೆ ಎಂದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯ ವ್ಯವಸ್ಥೆಗೆ ಪೂರಕವಾಗಿ ನಾವು ಸ್ಪಂದಿಸುವುದಕ್ಕೆ ಆಗದೇ ಇರುವ ದೌರ್ಬಲ್ಯದಿಂದಲೂ ನಮ್ಮ ಭಾಷೆಗೆ ಆತಂಕ ಎದುರಾಗಿದೆ. ಇಂಗ್ಲಿಷ್ ಭಾಷೆ ಎದುರು ತಲೆ ಎತ್ತದೆ ನಿಂತಿದ್ದೇವೆ. ಆದ್ದರಿಂದ ಈ ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ವಿಶ್ವ ಮಾರುಕಟ್ಟೆಯಲ್ಲಿ ಇಂಗ್ಲಿಷ್ ಭಾಷೆ ಬೆಳೆದು ನಿಂತಿರುವ ಹಿನ್ನೆಲೆಯಲ್ಲಿ ಆ ಭಾಷೆಗೆ ಎಲ್ಲ ಕಡೆ ಅಷ್ಟೊಂದು ಮನ್ನಣೆ ಕೊಡಲಾಗುತ್ತಿದೆ. ಇಂಗ್ಲಿಷ್ ಭಾಷೆ ಕಲಿಯುವುದು ತಪ್ಪಲ್ಲ. ಆದರೆ ಕನ್ನಡ ಭಾಷೆಯ ಸಂಸ್ಕೃತಿಯನ್ನು ಕಳೆದುಕೊಳ್ಳದೆ ಭಾಷಾ ಅಸ್ಮಿತೆ ಉಳಿಸಿ-ಬೆಳಸುವ ನಿಟ್ಟಿನಲ್ಲಿ ಭಾಷಾ ಪ್ರೇಮಅಭಿವ್ಯಕ್ತಗೊಳಿಸಬೇಕು. ತನ್ಮೂಲಕ ಕನ್ನಡ ಭಾಷೆಯನ್ನು ವಿಶ್ವ ಮಟ್ಟಕ್ಕೆ ಬೆಳೆಯುವಂತೆ ಮಾಡಬೇಕಾಗಿದೆ ಎಂದರು.

ಕನ್ನಡದ ಬಗ್ಗೆ ತಿರಸ್ಕಾರ ಭಾವನೆ ಹೊಂದಿರುವ ಪಾಲಕರು ಇಂಗ್ಲಿಷ್ ಭಾಷೆಗೆ ಶರಣಾಗಿರುವ ಕಾರಣದಿಂದಾಗಿ ರಾಜ್ಯದಲ್ಲಿ ಕನ್ನಡ ಶಾಲೆಗಳು ಮುಚ್ಚಿ ಹೋಗುತ್ತಿವೆ. ನೆರೆ ರಾಜ್ಯದ ಭಾಷೆಗಳಿಂದ ಕನ್ನಡಕ್ಕೆ ಹೊರೆ ಎಂಬುವುದನ್ನು ಯೋಚಿಸಬಾರದು, ಅದು ತಪ್ಪು ತಿಳಿವಳಿಕೆ. ತಮಿಳು, ಮರಾಠಿ, ಇತರ ನೆರೆಯ ಭಾಷೆಗಳಿಂದ ಎಂದೂ ಕೂಡ ಕುತ್ತು ಬರುವುದಿಲ್ಲ ಎಂದು ಹೇಳಿದರು.

ನೆರೆ ಭಾಷೆಗಳಿಂದ ಬೇಕಾದಷ್ಟು ಕೊಡು-ಕೊಳ್ಳುವಿಕೆ ಮಾಡಿದ್ದೇವೆ. ಉತ್ಪಾದನಾ ರಂಗ ಮಾತ್ರವಲ್ಲದೇ ಕಲೆ -ಸಾಹಿತ್ಯ,ರಂಗಭೂಮಿ ಇನ್ನೂ ಮುಂತಾದ ಕ್ಷೇತ್ರಗಳಲ್ಲಿ ಎಲ್ಲರೂ ಬೆರೆತು ಬೆಳೆದಿದ್ದೇವೆ. ಅದನ್ನು ಮುಂದುವರಿಸಬೇಕು ಎಂದರು.

ಸಿಎಫ್‌ಟಿಆರ್‌ಐ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್, ಕನ್ನಡ ಸಹೃದಯ ಬಳಗದ ಅಧ್ಯಕ್ಷ ಆರ್.ಚೇತನ್, ಕಾರ್ಯದರ್ಶಿ ಆರ್.ಕೃಷ್ಣಯ್ಯ ಇತರರು ಇದ್ದರು.