ಜಿಲ್ಲೆ

ಬಾಬೂಜಿ ತತ್ವ, ಆದರ್ಶವನ್ನು ರೂಢಿಸಿಕೊಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ಅನೇಕ ಜನಪರ ಯೋಜನೆಗಳನ್ನು ನೀಡಿದ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಂ ಅವರ ತತ್ವ ಹಾಗೂ ಆದರ್ಶಗಳನ್ನು ಎಲ್ಲರೂ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ಉದ್ಯಾನದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಬಾಬು ಜಗಜೀವನ್ ರಾಂ ಪುಣ್ಯ ಸ್ಮರಣೆಯ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಬಾಬೂಜಿ ಅವರು ಸೃಷ್ಟಿಸಿದ ಹಸಿರು ಕ್ರಾಂತಿಯಿಂದ ದೇಶದಲ್ಲಿ ಬಡವರಿಗೆ ಆಹಾರದ ಕೊರತೆ ದೂರವಾಯಿತು ಎಂದರು.

ಅಧಿಕಾರ ಮತ್ತು ಆಸ್ತಿಯಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ ಹಾಗೂ ತ್ಯಾಗದಿಂದ ಗಳಿಸಬಹುದೆಂದು ಬಾಬು ಜಗಜೀವನರಾಮ್ ಅವರ ಬದುಕು ತಿಳಿಸಿಕೊಡುತ್ತದೆ. ಅವರ ನಿಸ್ವಾರ್ಥ ಸೇವೆ, ಸ್ವಾತಂತ್ರ್ಯ ಚಳವಳಿ ಮತ್ತು ಸಮರ್ಪಣಾ ಮನೋಭಾವದ ಹೋರಾಟದಿಂದ ಸಮಾಜಕ್ಕೆ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.

ವನಮಹೋತ್ಸವದ ಅಂಗವಾಗಿ ಜಿಲ್ಲೆಯಲ್ಲಿ ಹಸಿರೀಕರಣ ಹೆಚ್ಚಿಸಲು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸರ್ಕಾರ ಈ ವರ್ಷ 5 ಕೋಟಿ ಗಿಡ ನೆಡುವ ಗುರಿ ಹೊಂದಿದೆ. ಈ ಹಿನ್ನಲೆಯಲ್ಲಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಜನಪ್ರತಿನಿಧಿಗಳು ತೆರಳಿದಾಗ ಆ ಸ್ಥಳದಲ್ಲಿ ಗಿಡ ನಡುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾರ್ವಜನಿಕರನ್ನು ಪ್ರೇರೆಪಿಸಲಾಗುತ್ತಿದೆ ಎಂದು ವಿವರಿಸಿದರು.

ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿದ್ದಲಿಂಗೇಶ್ ಇತರರಿದ್ದರು.