ಜಿಲ್ಲೆ

ಬೆಂಗಳೂರಲ್ಲಿ 250 ಅಡಿ ಎತ್ತರದ ಅಂಬೇಡ್ಕರ್​ ಪುತ್ಥಳಿ ನಿರ್ಮಿಸಿ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್​.ಅಂಬೇಡ್ಕರ್​ ಅವರ 250 ಅಡಿ ಎತ್ತರದ ಪುತ್ಥಳಿಯನ್ನು ರಾಜ್ಯದಲ್ಲಿ ನಿರ್ಮಿಸುವುದಾಗಿ ಈ ಬಾರಿಯ ಬಜೆಟ್​ನಲ್ಲಿ ಘೋಷಿಸುವಂತೆ ಕರ್ನಾಟಕ ಭೀಮ ಸೇನೆ ಒತ್ತಾಯಿಸಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಜಗದೀಶ್​, ಬೇರೆ ಸಮುದಾಯದ ನಾಯಕರುಗಳ ಪ್ರತಿಮೆಗಳನ್ನು ನಗರದ ಪ್ರಮುಖ ಜಾಗಗಳಲ್ಲಿ ಸ್ಥಾಪಿಸಿರುವ ರೀತಿಯಲ್ಲಿಯೇ ಬೆಂಗಳೂರಿನ ಲಾಲ್​ಬಾಗ್​ನಲ್ಲಿ ಅಂಬೇಡ್ಕರ್​ ಅವರ 250 ಅಡಿ ಎತ್ತರದ ಪುತ್ಥಳಿ ಸ್ಥಾಪಿಸುವುದರ ಜತೆಗೆ, ಬಾಬಾ ಸಾಹೇಬರ ಕುರಿತು ಮ್ಯೂಸಿಯಂ ಸ್ಥಾಪಿಸುವಂತೆ ಆಗ್ರಹಿಸಿದರು.

ತೆಲಂಗಾಣದಲ್ಲಿ 125 ಅಡಿ ಎತ್ತರದ ಅಂಬೇಡ್ಕರ್​ ಪ್ರತಿಮೆಯನ್ನು ಅಂದಿನ ಸಿಎಂ ಕೆ.ಸಿ.ಚಂದ್ರಶೇಖರರಾವ್​ ಪ್ರತಿಷ್ಠಾಪಿಸಿದರೆ, ಆಂಧ್ರಪ್ರದೇಶದ ಅಂದಿನ ಸಿಎಂ ವೈ.ಎನ್​.ಜಗಮೋಹನ್​ ರೆಡ್ಡಿ ಅವರು ಸುಮಾರು 206 ಅಡಿ ಎತ್ತರದ ಅಂಬೇಡ್ಕರ್​ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಈ ಎರಡು ರಾಜ್ಯಗಳ ರೀತಿಯಲ್ಲಿಯೇ ಕರ್ನಾಟಕವೂ ಕೂಡ ಬಾಬಾ ಸಾಹೇಬರ್​ 250 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಬೇಕೆಂಬುದು ಕೆಬಿಎಸ್​ ಹೋರಾಟವಾಗಿದೆ. ನಮ್ಮ ಮನವಿಗೆ ಸಿಎಂ, ಡಿಸಿಎಂ, ಸಚಿವರುಗಳು, ಶಾಸಕರುಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಏಕ ಕಾಲಕ್ಕೆ ಕರ್ನಾಟಕ ಭೀಮ ಸೇನೆ ಈ ಹೋರಾಟವನ್ನು ಕೈಗೆತ್ತಿಕೊಂಡಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ನಾವು ಬೆಂಗಳೂರು-&ಮೈಸೂರು ಎಕ್ಸ್​ಪ್ರೆಸ್​ ಕಾರಿಡಾರ್​ನ ಒಂದು ಭಾಗದಲ್ಲಿ ಅಂಬೇಡ್ಕರ್​ ಪ್ರತಿಮೆ ಸ್ಥಾಪಿಸಲು ಒತ್ತಾಯಿಸಿದ್ದೇವು.ಆದರೆ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಬೆಂಗಳೂರಿನ ಹೃದಯ ಭಾಗದಲ್ಲಿರುವ ಲಾಲ್​ಬಾಗ್​ ನಲ್ಲಿ ಸುಮಾರು 240 ಎಕರೆ ಜಾಗವಿದ್ದು, ಈ ಜಾಗದಲ್ಲಿಯೇ ಬಾಬಾ ಸಾಹೇಬರ ಪ್ರತಿಮೆ ಸ್ಥಾಪಿಸುವ ಭರವಸೆಯನ್ನು ಕೆಬಿಎಸ್​ಗೆ ನೀಡಿದ್ದು ಅದರಂತೆ ಈ ಸಾಲಿನ ಬಜೆಟ್​ನಲ್ಲಿ ಘೋಷಿಸುವಂತೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ತುಮಕೂರು ಜಿಲ್ಲಾಧ್ಯಕ್ಷ ಸಿ.ಎಲ್​.ಮಹದೇವಯ್ಯ, ಪ್ರಧಾನ ಕಾರ್ಯದರ್ಶಿ ಮಂಜುನಾಥ್​, ಯುವ ಘಟಕದ ಅಧ್ಯಕ್ಷ ಜಿ.ರಂಜನ್​, ಪದಾಧಿಕಾರಿಗಳಾದ ಮಣಿ ಪ್ರಶಾಂತ್​, ನಂದನ್​, ಮಹೇಶ್​, ರಾಕೇಶ್​, ರಮೇಶ್​ ಮತ್ತಿತರರು ಹಾಜರಿದ್ದರು.