ಹನೂರಿನಲ್ಲಿ ಪೊಲೀಸ್ ಠಾಣೆ ಮುಂಭಾಗದ ವೃತ್ತದಲ್ಲಿದ್ದ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಯನ್ನು ಎಸಿ ಮಹೇಶ್ ಸಮ್ಮುಖದಲ್ಲಿ ಸಮುದಾಯ ಭವನಕ್ಕೆ ಸ್ಥಳಾಂತರಿಸಲಾಯಿತು. ಗುರುಪ್ರಸಾದ್, ಶಶಿಕುಮಾರ್, ಸಿದ್ದರಾಜು, ಕಿರಣ್ ಇತರರು ಇದ್ದರು. 
ಜಿಲ್ಲೆ

ಡಾ.ಬಿ.ಆರ್.ಅಂಬೇಡ್ಕರ್ ಸ್ಥಳಾಂತರ

ಶಿವಶಂಕರ್ ಎಂ. ಹೆಬ್ಬಳ್ಳ

ಹನೂರು : ಪಟ್ಟಣದ ಪೊಲೀಸ್ ಠಾಣೆ ಮುಂಭಾಗದ ವೃತ್ತದಲ್ಲಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ರಸ್ತೆ ಮಧ್ಯ ಪ್ರತಿಷ್ಠಾಪಿಸಬೇಕೆಂಬ ಒತ್ತಾಯದ ಮೇರೆಗೆ ಉಪ ವಿಭಾಗಾಧಿಕಾರಿ ಮಹೇಶ್ ನೇತೃತ್ವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನಕ್ಕೆ ಸ್ಥಳಾಂತರಿಸಲಾಗಿದೆ.

ಪೋಲಿಸ್ ಠಾಣೆಯ ಮುಂಭಾಗದ ವೃತ್ತದಲ್ಲಿ 2012ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಆದರೆ ಇತ್ತೀಚೆಗೆ ಕೆ-ಶಿಪ್ ಯೋಜನೆಯಡಿ ಪಟ್ಟಣದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿತ್ತು. ಈ ವೇಳೆ ದಲಿತ ಸಮುದಾಯದ ಮುಖಂಡರು ಪ್ರತಿಮೆಯನ್ನು ರಸ್ತೆ ಮಧ್ಯದಲ್ಲಿರಿಸಿ ವೃತ್ತ ನಿರ್ಮಿಸಬೇಕೆಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ ಮಧ್ಯದಲ್ಲಿ ಸ್ಥಾಪಿಸುವವರೆಗೂ ಪ್ರತಿಮೆಯನ್ನು ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಇರಿಸಲು ತೀರ್ಮಾನಿಸಲಾಗಿತ್ತು.

ಈ ಸಂಬಂಧ ಎಸಿ ಮಹೇಶ್ ಮಾದ್ಯಮದವರೊಂದಿಗೆ ಮಾತನಾಡಿ, ಜಿಲ್ಲಾಧಿಕಾರಿ ಅವರ ಆದೇಶದ ಮೇರೆಗೆ ಪ್ರತಿಮೆಯನ್ನು ಸುರಕ್ಷಿತವಾಗಿ ಸಮುದಾಯ ಭವನಕ್ಕೆ ಸ್ಥಳಾಂತರಿಸಲಾಗಿದೆ. ಕೆ-ಶಿಪ್ ಅಧಿಕಾರಿಗಳು ಪಟ್ಟಣದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸಿದ ಬಳಿಕ ಪ್ರತಿಮೆಯನ್ನು ರಸ್ತೆ ಮಧ್ಯದಲ್ಲಿ ಇರಿಸಿ ವೃತ್ತ ನಿರ್ಮಿಸಲಾಗುವುದು. ಈ ಸಂಬಂಧ ಈಗಾಗಲೇ ಪ್ರಸ್ತಾವನೆಯನ್ನು ಸಂಬಂಧಪಟ್ಟ ಇಲಾಖೆಗೆ ಅನುಮೋದನೆಗಾಗಿ ಕಳುಹಿಸಲಾಗಿದೆ. ಬಳಿಕ ಸಂಬಂಧಪಟ್ಟ ಇಂಜಿನಿಯರ್‌ರಿಂದ ಪ್ರತಿಮೆಯ ಆಕಾರಕ್ಕೆ ಸಂಬಂಧಿಸಿದಂತೆ ಅನುಮೋದನೆ ಪಡೆದು ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಪ್ರತಿಮೆ ಇರಿಸಿರುವ ಸ್ಥಳಕ್ಕೆ ಪೊಲೀಸ್ ಗಸ್ತು ನಿಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇನ್ನು ಕೆ-ಶಿಪ್ ಯೋಜನೆಯಡಿ ಹನೂರು ಪಟ್ಟಣ, ಮಂಗಲ ಹಾಗೂ ಕಾಮಗೆರೆ ಗ್ರಾಮದಲ್ಲಿ ಕಾಮಗಾರಿ ಕುಂಠಿತವಾಗಿದ್ದು, ಈ ಬಗ್ಗೆ ಅಗತ್ಯ ಕ್ರಮವಹಿಸಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದ್ದಾರೆ. ಆದ್ದರಿಂದ ಕಾಮಗಾರಿಯನ್ನು ಚುರುಕುಗೊಳಿಸಿ ಶೀಘ್ರ ಪೂರ್ಣಗೊಳಿಸುವುದಾಗಿ ತಿಳಿಸಿದರು. ತಹಸೀಲ್ದಾರ್ ವೈ.ಕೆ. ಗುರುಪ್ರಸಾದ್, ಇನ್‌ಸ್ಪೆಕ್ಟರ್ ಶಶಿಕುಮಾರ್, ಪಪಂ ಸದಸ್ಯ ಸಂಪತ್‌ಕುಮಾರ್, ಸಮುದಾಯದ ಮುಖಂಡರಾದ ಕಿರಣ್, ಸಿದ್ದರಾಜು, ಪುಟ್ಟಸ್ವಾಮಿ ಹಾಗೂ ಇನ್ನಿತರರು ಇದ್ದರು.