ಜಿಲ್ಲೆ

ನಾಳೆ ಕಿವುಡ ಮಾಡಿದ ಕಿತಾಪತಿ ನಾಟಕ ಪ್ರದರ್ಶನ

ಬೆಳಗಾವಿ:ಬಾಗಲಕೋಟೆಯ ವೀರೇಶ್ವರ ನಾಟ್ಯಸಂಘದಿಂದ ಮಾ.2ರಂದು ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ‘ಕಿವುಡ ಮಾಡಿದ  ಕಿತಾಪತಿ’ ನಾಟಕ ಪ್ರದರ್ಶನ ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ನಾಟಕ ವೀಕ್ಷಿಸಬೇಕು ಎಂದು ರಂಗಸಂಪದ ಅಧ್ಯಕ್ಷ ಡಾ.ಅರವಿಂದ ಕುಲಕರ್ಣಿ ಕೋರಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಒಂದು ದಿನ ಮಾತ್ರ ನಾಟಕ ಪ್ರದರ್ಶನವಿದೆ. ಮಧ್ಯಾಹ್ನ 3.15 ಮತ್ತು ಸಂಜೆ 6.15 ಎರಡು ಪ್ರದರ್ಶನ ಇರಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ನಾಟಕ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದರು.

ಬಾಗಲಕೋಟೆಯ ವೀರೇಶ್ವರ ನಾಟ್ಯಸಂಘದ ವ್ಯವಸ್ಥಾಪಕ ವೀರೇಶ ಚಳಗೇರಿ ಮತ್ತು ಮೀನಾಕ್ಷಿ ದಾವಣಗೇರಿ ಮಾತನಾಡಿ, ವೀರೇಶ್ವರ ನಾಟ್ಯ ಸಂಘ ನಾಟಕ ತಂಡ ಪ್ರಾರಂಭಿಸಿ 13 ವರ್ಷಗಳಾದವು. ಕಲಾವಿದರು, ಸಂಗೀತ ಸಂಯೋಜಕರು, ಮೇಕಪ್‌ಮನ್, ಕೆಲಸಗಾರರು ಹೀಗೆ ಒಟ್ಟು 22 ಜನ ತಂಡದಲ್ಲಿದ್ದಾರೆ. ಈ ಪ್ರದರ್ಶನವನ್ನು ಮಕ್ಕಳ ಶಿಕ್ಷಣದ ಸಹಾಯಾರ್ಥವಾಗಿ ಇಟ್ಟುಕೊಂಡಿದ್ದು, ಎಲ್ಲರೂ ಹಣ ಕೊಟ್ಟು ನಾಟಕ ನೋಡಿ ಪ್ರೋತ್ಸಾಹಿಸಬೇಕು ಎಂದರು. ಡಾ.ಎಚ್.ಐ. ತಿಮ್ಮಾಪುರ, ಬಿ.ಎ. ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.