ವಿಜಯಪುರ ನಗರದ ತೊರವಿ ರಸ್ತೆಯ ಡಾ. ಅಂಬೇಡ್ಕರ್ ಎಜ್ಯುಕೇಶನಲ್ ಅಸೋಸಿಯೇಶನ್‌ನ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ನಡೆದ ಮಾಜಿ ಸಚಿವ, ಕ್ರಾಂತಿಕಾರಿ ದಲಿತ ನಾಯಕ ಬಿ. ಬಸವಲಿಂಗಪ್ಪ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಲೇಖಕ ರಂಜಾನ್ ದರ್ಗಾ ಮಾತನಾಡಿದರು. ತುಕಾರಾಮ ಚಂಚಲಕರ, ಮಹಾದೇವ ಹೊರಟ್ಟಿ, ಗುರು ಸಿದ್ದಪ್ಪ ಗುದಗೆನ್ನವರ ಮತ್ತಿತರರಿದ್ದಾರೆ.  
ಜಿಲ್ಲೆ

ಡಾ. ಅಂಬೇಡ್ಕರ್ ಭಾರತೀಯರ ಸ್ವಾಭಿಮಾನದ ಪ್ರತೀಕ; ಲೇಖಕ ರಂಜಾನ್ ದರ್ಗಾ ಅಭಿಮತ

ವಿಜಯಪುರ: ಭಾರತದ ಬಹುಸಂಖ್ಯಾತ ದಲಿತರು, ಶೋಷಿತರು, ವಿಶೇಷವಾಗಿ ಮಹಿಳೆಯರು ಇಂದು ಗೌರವಯುತವಾಗಿ ಬದುಕುತ್ತಿದ್ದಾರೆಂದರೆ ಅದಕ್ಕೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಮತ್ತು ಸಂವಿಧಾನವೇ ಕಾರಣ ಎಂಬುದನ್ನು ಯಾರೂ ಮರೆಯಬಾರದು ಎಂದು ಪ್ರಗತಿಪರ ಚಿಂತಕ, ಲೇಖಕ ರಂಜಾನ್ ದರ್ಗಾ ಹೇಳಿದರು.

ನಗರದ ತೊರವಿ ರಸ್ತೆಯ ಡಾ. ಅಂಬೇಡ್ಕರ್ ಎಜ್ಯುಕೇಶನಲ್ ಅಸೋಸಿಯೇಶನ್‌ನ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಮಾಜಿ ಸಚಿವ, ಕ್ರಾಂತಿಕಾರಿ ದಲಿತ ನಾಯಕ ಬಿ. ಬಸವಲಿಂಗಪ್ಪ ಅವರ 101ನೇ ಜನ್ಮದಿನಾಚರಣೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಡಾ. ಅಂಬೇಡ್ಕರ್ ಅವರ ಬಾಲ್ಯ ಮತ್ತು ವಿದ್ಯಾರ್ಥಿ ಜೀವನ ಸುಖಮಯವಾಗಿರಲಿಲ್ಲ. ಕಠಿಣ ಪರಿಶ್ರಮದಿಂದ ಜಗತ್ತಿನ ಅತ್ಯಂತ ವಿದ್ಯಾವಂತರಲ್ಲಿ ಒಬ್ಬರಾದರು. ಅವರ ಜನ್ಮದಿನವನ್ನು ವಿಶ್ವ ಜ್ಞಾನ ದಿನವನ್ನಾಗಿ ಘೋಷಿಸಲಾಗಿದೆ. ಭಾರತದ ಸಂವಿಧಾನ ಬರೆಯುವ ಜವಾಬ್ದಾರಿ ಅವರ ಹೆಗಲಿಗೆ ಬಂತು. ಇಡೀ ಸಂವಿಧಾನ ಸಭೆಯಲ್ಲಿ ಅವರಷ್ಟು ಪದವಿಗಳು ಯಾರ ಬಳಿಯೂ ಇರಲಿಲ್ಲ. ವಿದ್ಯಾರ್ಥಿಗಳು ಡಾ. ಅಂಬೇಡ್ಕರ್ ಅವರನ್ನು ಆದರ್ಶವನ್ನಾಗಿ ಇಟ್ಟುಕೊಳ್ಳಬೇಕು ಎಂದರು.

ಡಾ. ಅಂಬೇಡ್ಕರ್ ಅವರ ಸಾಧನೆಯ ಹಿಂದೆ ಅವರ ಪತ್ನಿ ರಮಾತಾಯಿಯವರ ತ್ಯಾಗವು ತುಂಬಾ ದೊಡ್ಡದು. ಅವರು ವಿದೇಶದಲ್ಲಿ ಕಲಿಯುತ್ತಿರುವಾಗ ಇಲ್ಲಿ ರಮಾತಾಯಿ ಬೇರೆಯವರ ಮನೆಯಲ್ಲಿ ಕೆಲಸ ಮಾಡಿ ಜೀವನನಿರ್ವಹಣೆ ಮಾಡಿದರು. ಗಂಡನ ಓದಿಗೆ ತೊಂದರೆಯಾಗಬಾರದೆಂದು ಮಗನ ಸಾವಿನ ಸುದ್ದಿಯನ್ನು ಕೂಡ ಅವರಿಗೆ ತಿಳಿಸಲಿಲ್ಲ. ಅಂತಹ ಮಹಾತಾಯಿಯು ವಿದ್ಯಾರ್ಥಿನಿಯರಿಗೆ ಪ್ರೇರಣೆಯಾಗಬೇಕು ಎಂದರು.

ಕಟ್ಟಾ ಅಂಬೇಡ್ಕರ್‌ವಾದಿಯಾಗಿದ್ದ ಬಿ. ಬಸವಲಿಂಗಪ್ಪ ಅವರು, ಕರ್ನಾಟಕದಲ್ಲಿ ಡಾ. ಅಂಬೇಡ್ಕರ್ ಅವರ ವಿಚಾರಗಳನ್ನು ಜಾರಿಯಲ್ಲಿ ತಂದರು. ತಲೆಯ ಮೇಲೆ ಮಲ ಹೊರುವ ಕೆಟ್ಟ ಸಂಪ್ರದಾಯವನ್ನು ನಿಷೇಧಿಸಿದರು. ಭೂಹೀನರನ್ನು ಭೂಮಿಯ ಒಡೆಯರನ್ನಾಗಿ ಮಾಡಿದರು. ದೇವರಾಜ ಅರಸು ಅವರ ವಿಚಾರಗಳ ಹಿಂದೆ ಬಸವಲಿಂಗಪ್ಪ ಇದ್ದರು ಎನ್ನುವುದನ್ನು ಅಲ್ಲಗಳೆಯಲಾಗದು ಎಂದರು.

ಧಾರವಾಡದ ಬಸವ ಮಿಷನ್‌ನ ಮಹಾದೇವ ಹೊರಟ್ಟಿ ಮಾತನಾಡಿ, ಬಿ. ಬಸವಲಿಂಗಪ್ಪ ಅವರು ಒಬ್ಬ ಕ್ರಾಂತಿಕಾರಿ ಹೋರಾಟಗಾರರಾಗಿದ್ದರು. ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳದ ರಾಜಕಾರಣಿಯಾಗಿದ್ದರು. ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಲ್ಲಿ ಅವರು ಕ್ಷಣವೂ ಇರುತ್ತಿರಲಿಲ್ಲ. ಹೊಂದಾಣಿಕೆ ರಾಜಕಾರಣ ಮಾಡಿದದ್ದರೆ ಬಸವಲಿಂಗಪ್ಪ ಅವರು ಯಾವತ್ತೋ ಮುಖ್ಯಮಂತ್ರಿಯಾಗುತ್ತಿದ್ದರು. ಇಂದಿರಾ ಗಾಂಧಿಯಂಥವರನ್ನೇ ಧಿಕ್ಕರಿಸಿದವರು ಅವರು ಎಂದು ಹೇಳಿದರು.

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಧಾರವಾಡದಲ್ಲಿ ಪ್ರಾರಂಭಿಸಿದ್ದ ವಿದ್ಯಾರ್ಥಿನಿಲಯವನ್ನು ವಹಿಸಿಕೊಂಡು ಅದನ್ನು ಮುಂದುವರೆಸಿ ಅಸ್ಪಶ್ಯ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟರು. ಇವತ್ತಿಗೂ ಆ ವಿದ್ಯಾರ್ಥಿನಿಲಯವು ಉಳಿದವರಿಗೆ ಮಾದರಿಯಾಗಿ ನಿಂತಿದೆ ಎಂದರು.

ಅಲ್-ಅಮೀನ್ ಮೆಡಿಕಲ್ ಕಾಲೇಜ್ ಟ್ರಸ್ಟಿ ಡಾ. ರಿಯಾಜ ಫಾರೂಖಿ, ಡಿ. ದೇವರಾಜ ಅರಸು ವಿಚಾರ ಜಾಗೃತಿ ಸಂಘದ ಅಧ್ಯಕ್ಷ ಅರವಿಂದ ಹಿರೊಳ್ಳಿ (ವಕೀಲ), ಸಮಾಜವಾದಿ ನಾಯಕ ಅಪ್ಪಾಸಾಹೇಬ ಯರನಾಳ, ಅಂಬೇಡ್ಕರ್‌ವಾದಿ ಲೇಖಕ ಅನಿಲ ಹೊಸಮನಿ ಮಾತನಾಡಿ, ದಲಿತರ ಅಭ್ಯುದಯಕ್ಕೆ ಬಿ.ಬಸವಲಿಂಗಪ್ಪ ಅವರ ಕೊಡುಗೆಯನ್ನು ಸ್ಮರಿಸಿದರು.

ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ತುಕಾರಾಮ ಚಂಚಲಕರ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ಅಶ್ವಿನಿ ನಾಯಕ ಸ್ವಾಗತಿಸಿ ನಿರೂಪಿಸಿದರು. ಪ್ರೌಢಶಾಲೆಯ ಮುಖ್ಯ ಗುರು ಸಿದ್ದಪ್ಪ ಗುದಗೆನ್ನವರ ವಂದಿಸಿದರು. ಸಂಸ್ಥೆಯ ಅಧ್ಯಕ್ಷ ನಟರಾಜ ಚಂಚಲಕರ, ಉಪಾಧ್ಯಕ್ಷೆ ಸಿಂಧೂ ಚಂಚಲಕರ, ನಿವೃತ್ತ ಪ್ರಾಧ್ಯಾಪಕ ಎಸ್.ಆರ್. ಕಟ್ಟಿ ಮತ್ತಿತರರಿದ್ದರು.