ಜಿಲ್ಲೆ

ಡಾ. ಅಖಿಲ್ ಕುಟ್ಟಪ್ಪ ಮತ್ತು ಅಶ್ವಥ್ ಅಯ್ಯಪ್ಪ ಸ್ಮರಣಾರ್ಥ ಕ್ರಿಕೆಟ್

ಮಡಿಕೇರಿ:

ಕ್ರೀಡೆಯಲ್ಲಿ ಛಲ, ಪರಿಶ್ರಮದೊಂದಿಗೆ ಗುರಿ ಇದ್ದಾಗ ಖಂಡಿತಾ ಗೆಲವು ಸುಲಭ ಸಾಧ್ಯ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಅಭಿಪ್ರಾಯಪಟ್ಟರು. ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊಡಗು ವಿದ್ಯಾಲಯದ ಸಹಯೋಗದಲ್ಲಿ ಆಯೋಜಿತ ಡಾ. ಅಖಿಲ್ ಕುಟ್ಟಪ್ಪ ಮತ್ತು ಅಶ್ವಥ್ ಅಯ್ಯಪ್ಪ ಸ್ಮರಣಾರ್ಥ ಅಂತರ ಪ್ರೌಢÀಶಾಲಾ ಕ್ರಿಕೆಟ್ ಪಂದ್ಯಾಟಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ವಿದ್ಯೆಯೊಂದಿಗೆ ಕ್ರೀಡೆ ಕೂಡ ಜೀವನದ ಭಾಗವಾಗಬೇಕು. ಕ್ರಿಕೆಟ್ ಸೇರಿದಂತೆ ಕ್ರೀಡೆಯಲ್ಲಿ ಛಲದ ಜತೆ ನಿರ್ದಿಷ್ಟ ಗೆಲುವಿನತ್ತ ಗುರಿ ಇದ್ದರೆ ವಿಜಯ ಸುಲಭವಾಗುತ್ತದೆ. ಯಾವುದೇ ಸಾಧನೆಯನ್ನು ಉಚಿತವಾಗಿ ಸಾಧಿಸಲಾಗದು. ಅಂತೆಯೇ ಕ್ರೀಡೆಯಲ್ಲಿ ಕಠಿಣ ಪರಿಶ್ರಮವೂ ಸಾಧನೆಗೆ ಅತೀ ಮುಖ್ಯವಾಗುತ್ತದೆ. ಅಥ್ಲೆಟಿಕ್ಸ್ಗೆ ಅತೀ ಹೆಚ್ಚಿನ ಸಾಧಕ ಕ್ರೀಡಾಪಟುಗಳನ್ನು ನೀಡಿರುವ ಕೊಡಗು ಜಿಲ್ಲೆಯಲ್ಲಿ ಇದೀಗ ಬಾಲಕಿಯರ ಕ್ರಿಕೆಟ್ ತಂಡವನ್ನು ರೂಪಿಸಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ ಎಂದರು.

ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಆಧ್ಯಾತ್ಮಿಕ ನೆಲೆಯಾದ ಭಾರತ ಪುಣ್ಯ ಭೂಮಿ ಕೂಡ ಆಗಿದ್ದು ವಿಶ್ವದಲ್ಲಿಯೇ ವಿಶ್ವಗುರುವಿನ ಸ್ಥಾನವನ್ನು ಭಾರತ ಪಡೆದಿದೆ. ಈ ಖ್ಯಾತಿಗೆ ಅನೇಕ ಸಾಧಕರ ಕೊಡುಗೆ ಇದೆ. 18 ನೇ ಶತಮಾನದಲ್ಲಿ ಬ್ರಿಟಿಷರು ಪರಿಚಯಿಸಿದ ಕ್ರಿಕೆಟ್ 1932 ರಲ್ಲಿ ಭಾರತದಲ್ಲಿಯೂ ಪರಿಚಿತವಾಯಿತು. 1973 ರಲ್ಲಿ ಪ್ರಥಮ ಬಾರಿಗೆ ಮಹಿಳಾ ಕ್ರಿಕೆಟ್ ತಂಡ ಕ್ರೀಡಾರಂಗಕ್ಕೆ ಪದಾರ್ಪಣೆ ಮಾಡಿತು ಎಂದರು.

ಹೆಸರಾಂತ ಆಧ್ಯಾತ್ಮ ಗುರು ಮಮ್ತಾಜ್ ಅಲಿ (ಶ್ರೀ ಎಂ) ಮಾತನಾಡಿ, ಮಹಿಳಾ ಕ್ರಿಕೆಟ್ ತಂಡವು ಕೂಡ ಸಾಧನೆಯ ಮೂಲಕ ವಿಶ್ವಮಟ್ಟದಲ್ಲಿ ಗುರುವಿನ ಸ್ಥಾನ ಪಡೆಯುವಂತಾಗಲಿ ಎಂದು ಹಾರೈಸಿದರು.

ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್ ಮಾತನಾಡಿ, ಹಿರಿಯರು ನೀಡಿದ ಮಾರ್ಗದರ್ಶನ ಎಲ್ಲರಿಗೂ ಜೀವನದಲ್ಲಿ ಮೇಲ್ಪಂಕ್ತಿಯಾಗಬೇಕು. 10 ವರ್ಷಗಳ ಹಿಂದೆ ಅಕಾಲಿಕವಾಗಿ ಸಾವನ್ನಪ್ಪಿದ ಕೊಡಗಿನ ಕ್ರೀಡಾ ಧ್ರುವತಾರೆಗಳಾದ ಡಾ.ಅಖಿಲ್ ಮತ್ತು ಅಶ್ವಥ್ ಅವರ ಸ್ಮರಣಾರ್ಥ ಈ ಸಹೋದರರ ತಂದೆ ರಘು ಮಾದಪ್ಪ ಅವರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 9 ವರ್ಷಗಳಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಾ ಕಿರಿಯ ವಯಸ್ಸಿನ ಕ್ರಿಕೆಟ್ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವುದು ಸ್ವಾಗತಾರ್ಹ ಎಂದರು.

ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ ಮಾತನಾಡಿ, ಯಾವುದೇ ಪಂದ್ಯದಲ್ಲಿ ಸೋತಾಗ ಅಂಥ ತಂಡವನ್ನು ಟೀಕಿಸದೇ ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಸೂಕ್ತ ರೀತಿಯಲ್ಲಿ ಪರಾಮರ್ಶಿಸಿ ಗೆಲುವಿನ ಹಾದಿಗೆ ಅಗತ್ಯವಾದ ಅಂಶಗಳನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೊಡಗು ವಿದ್ಯಾಲಯದ ಕ್ರೀಡಾ ಸಮಿತಿ ಅಧ್ಯಕ್ಷರೂ ಆದ ಪಂದ್ಯಾವಳಿಯ ಆಯೋಜಕÀ ಕೋಡಿಮಣಿಯಂಡ ರಘುಮಾದಪ್ಪ, ಕೊಡಗು ವಿದ್ಯಾಲಯದ ಆಡಳಿತ ವ್ಯವಸ್ಥಾಪಕ ಪಿ. ರವಿ, ಪ್ರಮುಖರಾದ ಡಾ. ಅನಿಲ್ ಚಂಗಪ್ಪ, ಬೋಸ್ ಮಂದಣ್ಣ, ಅಜಿತ್ ಅಪ್ಪಚ್ಚು, ಸಿ.ಎಸ್.ಗುರುದತ್, ಯಾಲದಾಳ್ ಹರೀಶ್, ಐಮುಡಿಯಂಡ ನಂದ, ದಾಮೋದರ್, ದಿನೇಶ್, ಬಿ.ವಿ.ನಂದ ಕೊಡಗು ವಿದ್ಯಾಲಯದ ಶಿಕ್ಷಕಿ ಎ.ಜಿ. ದಿವ್ಯಾ, ವಿದ್ಯಾರ್ಥಿನಿಯರಾದ ಮೌಲ್ಯ ಪುಟ್ಟಯ್ಯ, ಪ್ರಥ್ವಿ ಪಿ.ರೈ ಇಶಾನ್
ಸೇರಿದಂತೆ ಅನೇಕರು ಇದ್ದರು.

ಕೊಡಗು ಬಾಲಕಿಯರ ಕ್ರಿಕೆಟ್ ತಂಡ ಅಸ್ತಿತ್ವಕ್ಕೆ.
ಇದೇ ಮೊದಲ ಬಾರಿಗೆ ಕೊಡಗಿನಲ್ಲಿ ಪ್ರೌಢಶಾಲಾ ವಿಭಾಗದ ಬಾಲಕಿಯರ ಕ್ರಿಕೆಟ್ ತಂಡವನ್ನು ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಕೊಡಗು ಬಾಲಕಿಯರ ಕ್ರಿಕೆಟ್ ತಂಡವು ರಾಜ್ಯಮಟ್ಟದ ಸ್ಪರ್ಧೆಗಳಿಗೂ ತೆರಳಲಿದೆ. ಮಡಿಕೇರಿಯಲ್ಲಿ ನಡೆದ ಪ್ರದರ್ಶನ ಪಂದ್ಯದಲ್ಲಿ ದಕ್ಷಿಣ ಕನ್ನಡ ಬಾಲಕಿಯರ ಕ್ರಿಕೆಟ್ ತಂಡ 9 ವಿಕೆಟ್‌ಗಳಿಂದ ಕೊಡಗು ಬಾಲಕಿಯರ ಕ್ರಿಕೆಟ್ ತಂಡವನ್ನು ಸೋಲಿಸಿತು.