ಜಿಲ್ಲೆ

ಸಂಕಷ್ಟದಲ್ಲಿರುವ ಕಲಬುರಗಿ ತೊಗರಿ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್‌ ಘೋಷಿಸಿ :ಬೆಳಗಾವಿ ಸದನದಲ್ಲಿ ಡಾ. ಅಜಯ್ ಸಿಂಗ್‌ ಗೊತ್ತುವಳಿ ಮಂಡನೆ

ಕಲಬುರಗಿ : ತೊಗರಿ ಕಣಜವೆಂದೇ ಹೆಸರಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಕಾಂಡಮಚ್ಚೆ ರೋಗ, ನೆಟೆ ರೋಗ, ತೇವಾಂಶ ಕೊರತೆ ಸೇರಿದಂತೆ ವಿಚಿತ್ರ ರೋಗಗಳಿಂದಾಗಿ ಆಗಿರುವ ತೊಗರಿ ಬೆಳೆ ಹಾನಿಗೆ ಸರ್ಕಾರ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸುವ ಮೂಲಕ ನೆರವಿಗೆ ಬರಬೇಕು ಎಂದು ಕೆಕೆಆರ್‌ಡಿ ಅಧ್ಯಕ್ಷರು, ಜೇವರ್ಗಿ ಶಾಸಕರಾಗಿರುವ ಡಾ. ಅಜಯ್‌ ಧರ್ಮಿಸಿಂಗ್‌ ಅವರು ಬೆಳಗಾವಿ ಸದನದಲ್ಲಿ ಗಮನ ಸೆಳೆಯುವ ಗೊತ್ತುವಳಿ ಮಂಡಿಸಿ ವಿಷಯದ ಪ್ರಸ್ತಾವನೆ ಮಾಡಿ ಸರಕರಾದ, ಕೃಷಿ ಸಚಿವರ ಗಮನ ಸೆಳೆದಿದ್ದಾರೆ.

ತೇವಾಂಶದ ಕೊರತೆಯಿಂದ ತೊಗರಿ ಬೆಳೆ ಒಣಗುತ್ತಿದೆ, ಮೇಲೆ ರೋಗಗಳು ಕಾಡುತ್ತಿವೆ. ಈ ಬಾರಿ 6 ಲಕ್ಷಕ್ಕೂ ಅಧಿಕ ಹೆಕ್ಟರ್‌ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ಈ ಪೈಕಿ 2 ಲಕ್ಷ ಹೆಕ್ಟರ್ ಬೆಳೆ ಒಣಗಿ ಹಾನಿಯಾಗಿದೆ. ತಕ್ಷಣ ಸಮೀಕ್ಷೆಯಾಗಬೇಕು ಎಂದು ಡಾ. ಅಜಯ್‌ ಸಿಂಗ್‌ ಆಗ್ರಹಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ 2024-25 ಸಾಲಿನ ಮುಂಗಾರು ಹಂಗಾಮಿ ನಲ್ಲಿ ಮಳೆ ಬಂದಿದ್ದರಿಂದ ಒಳ್ಳೆಯ ಇಳುವರಿ ನಿರೀಕ್ಷಿಸಲಾಗಿತ್ತು. ಆದರೆ, ನವೆಂಬರ್ ತಿಂಗಳಿನಲ್ಲಿ ಶೇ 71 ರಷ್ಟು ಮಳೆ ಕೊರತೆಯಾದ ಹಿನ್ನೆಲೆಯಲ್ಲಿ ಭೂಮಿಯಲ್ಲಿ ತೇವಾಂಶದ ಕೊರತೆ ಕಂಡು‌ಬಂತು. ಆದ್ದರಿಂದ‌ ಅಷ್ಟೊತ್ತಿಗಾಗಲೇ ಕಾಯಿ‌ಕಟ್ಟುವ ಹಾಗೂ ಕಾಳು ಬಲಿಯುವ ಹಂತದಲ್ಲಿದ್ದ ತೊಗರಿ ಬೆಳೆ‌ ಒಣಗಲಾರಂಭಿಸಿದೆ.
ಜಿಲ್ಲೆಯಲ್ಲಿ ಕಳೆದ 2022-23 ಸಾಲಿನಲ್ಲಿಯೂ ಜಿಲ್ಲೆಯಲ್ಲಿ 1.58 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ತೊಗರಿ ಬೆಳೆಗೆ ನೆಟೆರೋಗ ಬಾಧಿಸಿದಾಗ ರಾಜ್ಯ ಸರ್ಕಾರದಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ಘೋಷಿಸಿ ಜಿಲ್ಲೆಯ 1,78,354 ರೈತರಿಗೆ ರೂ 181.86 ಕೋಟಿ ಪರಿಹಾರ ಹಾಗೂ ವಿಮಾ ಪರಿಹಾರ ಸೇರಿ 233 ಕೋಟಿ ರು ಪರಿಹಾರ ದೊರಕಿತ್ತು.
ಈ ಬಾರಿಯೂ ತೊಗರಿ ಬೆಳೆ ಒಣಗುತ್ತಿರುವುದರಿಂದ ಜಿಲ್ಲೆಯ ರೈತರು ಆರ್ಥಿಕ‌ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಿ ಅವರ ಸಂಕಷ್ಟ ಪರಿಹಸಬೇಕೆಂದು ಡಾ. ಅಜಯ್‌ ಸಿಂಗ್‌ ಆಗ್ರಹಿಸಿದ್ದಾರೆ.
ಡಾ. ಅಜಯ್‌ ಸಿಂಗ್‌ ಅವರ ಆಗ್ರಹಕ್ಕೆ ಸ್ಪಂದಿಸಿರುವ ಕೃಷಿ ಸಚಿವ ಚೆಲುವರಾಯಸ್ವಾಮಿ ವಿಮೆ ವ್ಯಾಪ್ತಿಯ 1. 70 ಸಕ್ಷ ರೈತರಿಗೆ 71 ಕೋಟಿ ವಿಮಾ ಪರಿಹಾರ ಬಿಡುಗಡೆಗೆ ಕಡತ ಸಿದ್ಧವಾಗುತ್ತಿದೆ. ಬೆಳೆ ಪರಿಹಾರ ಘೋಷಣೆ ವಿಚಾರವಾಗಿ ಸಂಪುಟದಲ್ಲಿ ಪರಿಶೀಲಿಸಿ ನಿರ್ಣಯಿಸಲಾಗುತ್ತದೆ ಎಂದಿದ್ದಾರೆ.