ಜಿಲ್ಲೆ

ಹರಿದಾಸ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಡಾ.ಎ.ಬಿ.ಶ್ಯಾಮಾಚಾರ್​ ಆಯ್ಕೆ; ಉಡುಪಿಯಲ್ಲಿ ನ.9 ರಿಂದ ಸಮ್ಮೇಳನ

ಬೆಂಗಳೂರು: ಪರ್ಯಾಯ ಪುತ್ತಿಗೆ ಮಠದ ಸಹಯೋಗದಲ್ಲಿ ಉಡುಪಿಯಲ್ಲಿ ವಿಜಯದಾಸರ ಆರಾಧನೆ ಅಂಗವಾಗಿ ನ.9 ರಿಂದ ನ.11ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ದಾಸ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹರಿದಾಸ ಸಂಶೋಧಕ ಡಾ.ಎ.ಬಿ.ಶ್ಯಾಮಾಚಾರ್​ ಆಯ್ಕೆಯಾಗಿದ್ದಾರೆ.

ಬಸವನಗುಡಿ ಪುತ್ತಿಗೆ ಮಠ ಗೋವರ್ಧನ ಕ್ಷೇತ್ರದಲ್ಲಿ ಗುರುವಾರ ಆಯೋಜಿಸಿದ್ದ ಸಮ್ಮೇಳನದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ.ಬಿ.ಗೋಪಾಲ್​ ಆಚಾರ್​ ಕಾರ್ಯಕ್ರಮದ ರೂಪರೇಷೆ ವಿವರಿಸಿದರು.

ಉಡುಪಿ ಮಠದ ರಾಜಾಂಗಣದಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶೀಪಾದರಿಂದ ಸಮ್ಮೇಳನ ಉದ್ಘಾಟನೆಯಾಗಲಿದೆ. ಬೇಲಿ ಮಠದ ಶಿವಾನುಭವ ಶಿವಮೂರ್ತಿ ಸ್ವಾಮೀಜಿ ದಿಕ್ಸೂಚಿ ಭಾಷಣ, ದೇಶದ ನಾನಾ ಭಾಗಗಳಿಂದ ಆಗಮಿಸುವ ವಿದ್ವಾಂಸರಿಂದ ವಿಜಯದಾಸರು ವರ್ಣಿಸಿದ ಉಡುಪಿಯ ಶೀ ಕೃಷ್ಣ ಎಂಬ ವಿಚಾರದ ಕುರಿತು ಪ್ರಬಂಧ ಮಂಡನೆ, ದಾಖಲೆಯ ವಿಜಯದಾಸರ ಕೀರ್ತನೆಗಳ ಸಹಸ್ರ ಕಂಠ ಗಾಯನ, ವೈಭವದ ಶೀನಿವಾಸ ಕಲ್ಯಾಣ ಮಹೋತ್ಸವ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಶೀನಿವಾಸ ಉತ್ಸವ ಬಳಗ ಅಧ್ಯಕ್ಷ ಟಿ.ವಾದಿರಾಜ, ಅಂತಾರಾಷ್ಟ್ರೀಯ ಹರಿದಾಸ ಸಾಹಿತ್ಯ ಸಮ್ಮೇಳನ ಕಾರ್ಯಕಾರಿ ಸಮಿತಿಯ ಕೆ.ಆರ್​.ಗುರುರಾಜ ರಾವ್​, ಭಾರತೀಯ ಹರಿದಾಸ ಸಾಹಿತ್ಯ ವಿದ್ಯಾಲಯದ ನಿರ್ದೇಶಕ ಡಾ.ಪರಶುರಾಮ ಬೆಟಗೇರಿ, ಪ್ರಣವ ಮೀಡಿಯಾ ಹೌಸ್​ ಪ್ರಕಾಶನದ ಡಾ.ಗುರುರಾಜ ಪೋಶೆಟ್ಟಿಹಳ್ಳಿ, ವಿದುಷಿ ಡಾ.ವಾರುಣಿ ಜಯತೀರ್ಥ, ಪತ್ರಕರ್ತ ಸುಧೀಂದ್ರರಾವ್​ ಇತರರಿದ್ದರು.