ಜಿಲ್ಲೆ

ಸ್ವಾಗತ ಕಮಾನು ಸಂರಕ್ಷಣೆಗೆ ಡಿಪಿಆರ್

ಮೈಸೂರು: ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ನಗರದ ಸರ್ಕಾರಿ ಅತಿಥಿ ಗೃಹಕ್ಕೆ ಸೇರಿದ ಪಾರಂಪರಿಕ ಕಟ್ಟಡವಾಗಿರುವ ಸ್ವಾಗತ ಕಮಾನಿನ ಸಂರಕ್ಷಣಾ ಕಾಮಗಾರಿ ಕೈಗೊಳ್ಳಲು ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಕಾರ್ಯಕ್ಕೆ ಶುಕ್ರವಾರ ಚಾಲನೆ ದೊರೆಯಿತು.

ಮೇಯರ್ ಶಿವಕುಮಾರ್, ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯ ಡಾ.ಎನ್.ಎಸ್. ರಂಗರಾಜು, ನಮ್ಮ ಮೈಸೂರು ಫೌಂಡೇಷನ್ ಸಂಸ್ಥಾಪಕ ದಶರಥ್ ಹಾಗೂ ಪಾಲಿಕೆ ಇಂಜಿನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಡಿಪಿಆರ್ ತಯಾರಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ನಗರ ಪಾಲಿಕೆ ಇಂಜಿನಿಯರ್‌ಗಳು ಹಾಗೂ ನಮ್ಮ ಮೈಸೂರು ಫೌಂಡೇಷನ್ ವತಿಯಿಂದ ಜಂಟಿಯಾಗಿ ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯ ಡಾ.ಎನ್.ಎಸ್. ರಂಗರಾಜು ಮಾರ್ಗದರ್ಶನದಲ್ಲಿ ಡಿಪಿಆರ್ ತಯಾರಿಸಲಾಗುತ್ತಿದೆ. ಒಂದು ವಾರದ ಒಳಗೆ ಡಿಪಿಆರ್ ತಯಾರಾಗಲಿದ್ದು, ಡಿಪಿಆರ್ ತಯಾರಾದ ನಂತರ ಸಂರಕ್ಷಣಾ ಕಾರ್ಯಕ್ಕೆ ಎಷ್ಟು ಅನುದಾನದ ಅವಶ್ಯಕತೆ ಇದೆ ಎಂಬುದು ಸ್ಪಷ್ಟವಾಗುತ್ತದೆ. ಅನುದಾನವನ್ನು ಪಾಲಿಕೆಯಿಂದ ಒದಗಿಸುವ ಭರವಸೆಯನ್ನು ಮೇಯರ್ ಶಿವಕುಮಾರ್ ನೀಡಿದ್ದಾರೆ.

ಮರು ಪ್ಲಾಸ್ಟರಿಂಗ್ ಅವಶ್ಯಕ

ಕಟ್ಟಡ ದುಸ್ಥಿತಿಗೆ ತಲುಪಿರುವ ಹಿನ್ನೆಲೆಯಲ್ಲಿ ಕಟ್ಟಡದ ಪ್ಲಾಸ್ಟರಿಂಗ್‌ಅನ್ನು ಸಂಪೂರ್ಣ ತೆಗೆದು ನಂತರ ಮರು ಪ್ಲಾಸ್ಟರಿಂಗ್ ಮಾಡುವ ಅವಶ್ಯಕತೆ ಇದೆ. ಪ್ಲಾಸ್ಟರಿಂಗ್ ತೆರವುಗೊಳಿಸುವ ಸಂದರ್ಭ ಕಟ್ಟಡ ಎಷ್ಟೊಂದು ಬಿರುಕು ಬಿಟ್ಟಿದೆ ಎಂಬುದು ತಿಳಿಯುತ್ತದೆ. ಬಿರುಕು ಬಿಟ್ಟ ಜಾಗವನ್ನು ಪಂಚಲೋಹವನ್ನು ಬಳಸಿ ವಾಲ್‌ಸೀಲ್ ಮಾಡಿ ಭದ್ರಗೊಳಿಸಲಾಗುವುದು. ಕಟ್ಟಡದಲ್ಲಿ ನವಿಲು, ಎಲೆಗಳು ಸೇರಿದಂತೆ ವಿವಿಧ ಕಲಾಕೃತಿಗಳು ಇದ್ದು, ಪ್ಲಾಸ್ಟರಿಂಗ್ ತೆಗೆಯುವ ಸಂದರ್ಭ ಆ ಕಲಾಕೃತಿಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು. ಸಂರಕ್ಷಣಾ ಕಾರ್ಯಕ್ಕೆ ಕಬ್ಬಿಣ, ಸಿಮೆಂಟ್‌ಗಳನ್ನು ಬಳಕೆ ಮಾಡುವುದಿಲ್ಲ. ಸುಣ್ಣದಗಾರೆ, ಮರವಜ್ರ ಸೇರಿದಂತೆ ವಿವಿಧ ವಸ್ತುಗಳನ್ನು ಬಳಕೆ ಮಾಡಿಕೊಳ್ಳಲಾ ಗುವುದು ಎಂದು ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯ ಡಾ.ಎನ್.ಎಸ್. ರಂಗರಾಜು ‘ವಿಜಯವಾಣಿ’ಗೆ ತಿಳಿಸಿದರು.

ಕಟ್ಟಡದ ಕೆಳಭಾಗದಲ್ಲಿ ಹುಲ್ಲುಗಳು ಬೆಳೆದಿದ್ದು, ಇದರಿಂದ ನೀರು ನಿಂತು ಕಟ್ಟಡದ ಅಡಿಪಾಯ ದುರ್ಬಲಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಹುಲ್ಲನ್ನು ತೆರವುಗೊಳಿಸಿ ಪ್ಲಾಸ್ಟರಿಂಗ್ ಮಾಡಲಾಗುವುದು. ಸಂರಕ್ಷಣಾ ಕಾರ್ಯದ ಸಂದರ್ಭ ಕಟ್ಟಡ ಕುಸಿದು ಬೀಳದಂತೆ ಎಚ್ಚರ ವಹಿಸಲು ಸೂಕ್ತ ಭದ್ರತೆಯನ್ನು ಮಾಡಿಕೊಳ್ಳಲಾಗುವುದು ಎಂದು ಹೇಳಿದರು.