* ಇಲಾಖೆ ಗಮನಕ್ಕೆ ತರದೆ ಆನೆ ಹೂತು ಹಾಕಿದ ಜಮೀನಿನ ಮಾಲೀಕರು * ಜಮೀನಿಗೆ ಅಕ್ರಮ ವಿದ್ಯುತ್ ಸಂಪರ್ಕ? * ಅರಣ್ಯ ಇಲಾಖೆ ಕಾರ್ಯವೈಖರಿಗೆ ಬೇಸರ
ತಾಲೂಕಿನ ಕೋಡಿಹಳ್ಳಿಯ ಜಮೀನೊಂದರಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಆನೆಯನ್ನು ಹೂತು ಹಾಕಿರುವ ಪ್ರಕರಣ ಅನುಮಾನಗಳಿಗೆ ಕಾರಣವಾಗಿದೆ.
ಡಿ.4ರಂದು ಕೋಡಿಹಳ್ಳಿ ಬಳಿ ನಂಜೇಗೌಡ ಎಂಬುವವರ ಜಮೀನನ್ನು ಪಿಳ್ಳೇಗೌಡ ಎಂಬುವರು ಭೋಗ್ಯಕ್ಕೆ ಪಡೆದಿದ್ದು, ಈ ಜಮೀನಿನಲ್ಲಿ ವಿದ್ಯುತ್ ಪ್ರವಹಿಸಿ 15 ವರ್ಷದ ಗಂಡು ಆನೆ ಮೃತಪಟ್ಟಿತ್ತು.
ಈ ಬಗ್ಗೆ ವಿಜಯವಾಣಿ ಪತ್ರಿಕೆ ಡಿ.7ರಂದು ವರದಿ ಪ್ರಕಟಿಸಿತ್ತು. ಆನೆಗಳ ರಕ್ಷಣೆ ಅರಣ್ಯ ಇಲಾಖೆ ಜವಾಬ್ದಾರಿಯಾಗಿದ್ದು, ಗ್ರಾಮಗಳ ಬಳಿ ಓಡಾಡುವ ಕಾಡುಪ್ರಾಣಿಗಳ ಚಲನವಲನದ ಬಗ್ಗೆ ಅಧಿಕಾರಿಗಳು, ಸಿಬ್ಬಂದಿಗೆ ತಿಳಿದಿರುತ್ತದೆ. ಆನೆ ಓಡಾಡಿರುವ ಹೆಜ್ಜೆಯ ಗುರುತು ನೋಡಿ ಹೊರಟರೆ ಅದು ಅದು ಇರುವ ಸ್ಥಳದ ಗುರುತು ಪತ್ತೆಹಚ್ಚಬಹುದಾಗಿದೆ. ಆದರೆ, ಆನೆ ಮೃತಪಟ್ಟು ಮೂರು ದಿನಗಳಾದರೂ ಅರಣ್ಯ ಇಲಾಖೆ ಗಮನಕ್ಕೆ ಬಾರದಿರುವುದು ಆಶ್ಚರ್ಯ ಉಂಟುಮಾಡಿದೆ.
ಮೃತ ಆನೆಯನ್ನು ನಿಗೂಢವಾಗಿ ಹೂತು ಹಾಕಿರುವುದು ಕ್ರಿಮಿನಲ್ ಅಪರಾಧವಾಗಿದೆ. ಜಮೀನಿನ ಮಾಲೀಕರು ಆನೆ ಸಾವನ್ನು ಅಧಿಕಾರಿಗಳ ಗಮನಕ್ಕೆ ತರದೆ ಜೆಸಿಬಿ ಯಂತ್ರದಿಂದ ಬಳಸಿ ಗುಂಡಿ ತೆಗೆದು ಮುಚ್ಚಿಹಾಕಿದ್ದಾರೆ. ಕರಡಿ, ಚಿರತೆ, ಜಿಂಕೆಯಂತಹ ಪ್ರಾಣಿಗಳನ್ನು ಮುಚ್ಚಿಹಾಕಿದ್ದರೆ ಪ್ರಕರಣ ಹೊರಕ್ಕೇ ಬರುತ್ತಿರಲಿಲ್ಲವೇನೋ? ಆದರೆ, ದೈತ್ಯ ಆನೆಯನ್ನೇ ಮುಚ್ಚಿಹಾಕಿರುವುದು ಕಾಡುಪ್ರಾಣಿಗಳ ಜೀವಕ್ಕೆ ರಕ್ಷಣೆ ಇಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸಿದೆ.
ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಅರಣ್ಯ ನಾಶವಾಗಿದ್ದು, ಇದರ ಪರಿಣಾಮ ಕಾಡುಪ್ರಾಣಿಗಳು ನಾಡಿನತ್ತ ಆಹಾರ ಅರಸಿ ಬರುತ್ತಿವೆ. ಸರ್ಕಾರ ಇಂತಹ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಜನ ಮತ್ತು ವನ್ಯಜೀವಿಗಳ ರಕ್ಷಣೆಗೆ ಮುಂದಾಗಬೇಕಿದೆ. ಅಲ್ಲದೆ, ಆನೆ ಸಾವಿಗೆ ಕೂಡಲೇ ನ್ಯಾಯ ದೊರಕಿಸಬೇಕು ಎನ್ನುವುದು ಪ್ರಾಣಿಪ್ರಿಯರ ಒತ್ತಾಯವಾಗಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ತವರು ಗ್ರಾಮದ ಬಳಿಯೇ ನಡೆದಿರುವ ಈ ಘಟನೆ ಬೆಚ್ಚಿ ಬೀಳಿಸುವಂತಿದ್ದು, ರಾಜಕೀಯ ಪ್ರಭಾವಕ್ಕೆ ಒಳಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣವನ್ನು ನೆಪಮಾತ್ರಕ್ಕೆ ದಾಖಲಿಸಿ ಕೈತೊಳೆದುಕೊಂಡರೆ ಪ್ರಾಣಿಗಳ ಜೀವಕ್ಕೂ ಇಲ್ಲಿ ರಕ್ಷಣೆ ಇಲ್ಲದಂತಾಗುತ್ತದೆ. ಜಮೀನಿನ ಮಾಲೀಕರು ಜಮೀನಿಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಲ್ಲದೇ ಈ ಪ್ರಕರಣದಲ್ಲಿ ಮೃತಪಟ್ಟ ಆನೆಯನ್ನು ಮುಚ್ಚಿಹಾಕಿರುವುದು ಅಪರಾಧವಾಗಿದೆ. ಅರಣ್ಯ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರಗೆಳೆಯಬೇಕು. ಪ್ರಕರಣದ ಆರೋಪಿಗಳು ಜಾಮೀನಿನ ಮೇಲೆ ಹೊರಬಂದು ಸಾಕ್ಷಾೃಧಾರಗಳ ನಾಶಕ್ಕೆ ಮುಂದಾದರೆ ಇಡೀ ಪ್ರಕರಣ ಹಳ್ಳ ಹಿಡಿಯುತ್ತದೆ. ಆದ್ದರಿಂದ ಜಮೀನಿನ ಮಾಲೀಕರು, ಜೆಸಿಬಿ ಯಂತ್ರ ಮಾಲೀಕ ಮತ್ತು ಚಾಲಕನ ಮೇಲೂ ಪ್ರಕರಣ ದಾಖಲಿಸಿ ಶಿಸ್ತು ಕ್ರಮ ಜರುಗಿಸಬೇಕು ಎಂದು ಪ್ರಾಣಿಪ್ರಿಯರು ಒತ್ತಾಯಿಸಿದ್ದಾರೆ.
ತಾಲೂಕಿನಲ್ಲಿ ಹೊಲ, ಗದ್ದೆ, ತೋಟ ಇತರ ಜಮೀನುಗಳಿಗೆ ಕಾಡಾನೆಗಳು ನುಗ್ಗಿ ಬೆಳೆ ನಾಶ ಮಾಡುತ್ತಿರುವುದು ನಿರಂತರವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಕಾಡು ಪ್ರಾಣಿಗಳು, ರೈತರು ಹಾಗೂ ಜನರ ಜೀವ ಕಾಪಾಡಬೇಕಾದ ಅರಣ್ಯ ಇಲಾಖೆ ಬಗ್ಗೆ ಸಾರ್ವಜನಿಕರು ನಂಬಿಕೆಯನ್ನೇ ಕಳೆದುಕೊಳ್ಳುವಂತಾಗಿದೆ. 4-5 ತಿಂಗಳಿಂದ ಮೂರು ಮಂದಿ ಆನೆ ದಾಳಿಗೆ ಬಲಿಯಾಗಿದ್ದಾರೆ. ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಈ ಬಗ್ಗೆ ರೈತರು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿ, ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಈ ಮಧ್ಯೆ ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹಾಗೂ ಆನೆ ಹಾವಳಿ ತಡೆಯಲು ಬೇಕಾದ ತಾಂತ್ರಿಕ ಉಪಕರಣ ಮತ್ತು ಸಾಮಗ್ರಿಗಳ ಕೊರತೆ ಇದೆ ಎಂದು ರೈತರು ದೂರಿದ್ದಾರೆ.
ಆನೆ ಹಾಗೂ ಇತರ ಕಾಡುಪ್ರಾಣಿಗಳ ಜಾಡು ಹಿಡಿದು ಪತ್ತೆಹಚ್ಚುವಲ್ಲಿ ಅರಣ್ಯ ಇಲಾಖೆ ವಿಲವಾಗಿರುವುದೇ ಈ ರೀತಿ ಘಟನೆಗಳಿಗೆ ಕಾರಣವಾಗುತ್ತಿದೆ. ಕಾಳಜಿಗಿಂತ ನಿರ್ಲಕ್ಷ್ಯಕ್ಕೆ ವನ್ಯಜೀವಿಗಳನ್ನು ಕಳೆದುಕೊಳ್ಳುವಂತಾಗಿದೆ. ಇದರಿಂದ ಪ್ರಾಕೃತಿಕ ಅಸಮತೋಲನ ಉಂಟಾಗುತ್ತದೆ. ಕೂಡಲೇ ಸರ್ಕಾರ ರೈತರು ಮತ್ತು ವನ್ಯಜೀವಿಗಳ ರಕ್ಷಣೆಗೆ ಮುಂದಾಗಬೇಕು.ಪ್ರಶಾಂತ್ ಹೊಸದುರ್ಗ, ಅಧ್ಯಕ್ಷ, ಜೀವನ ಟ್ರಸ್ಟ್, ಕನಕಪುರಕೋಡಿಹಳ್ಳಿ ಜಮೀನೊಂದರಲ್ಲಿ ಕಾಡಾನೆ ಸಾವಿನ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಆರೋಪಿಗಳು ಪರಾರಿಯಾಗಿದ್ದಾರೆ. ಇಲಾಖೆ ಸಾಕ್ಷಾೃಧಾರಗಳನ್ನು ಕಲೆ ಹಾಕುತ್ತಿದ್ದು, ಆರೋಪಿಗಳ ಪತ್ತೆಗೂ ಶೋಧ ಮುಂದುವರಿದಿದೆ.ದಾಳೇಶ್, ವಲಯ ಅರಣ್ಯ ಅಧಿಕಾರಿ, ಕನಕಪುರ