ಆರ್.ತುಳಸಿಕುಮಾರ್ ಬೆಂಗಳೂರು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ವಿಂಗಡಿಸಿ ಸಣ್ಣ ಪಾಲಿಕೆಗಳನ್ನಾಗಿ ರಚಿಸುವಂತೆ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದ (ಜಿಬಿಜಿಬಿ) ಪರಿಶೀಲಿನಾ ಸಮಿತಿಯು ತನ್ನ ವರದಿಯನ್ನು ವಿಧಾನಸಭೆ ಸ್ಪೀಕರ್‌ಗೆ ಸಲ್ಲಿಸಿದೆ. ಈ ಶಿಾರಸು ಆಧರಿಸಿ ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಪರಿಷ್ಕೃತ ವಿಧೇಯಕ ಮಂಡಿಸಿ ಚರ್ಚೆ ನಡೆದು ಒಪ್ಪಿಗೆ ಪಡೆದ ಬಳಿಕವೇ ಕಾಯ್ದೆ ರೂಪ ಪಡೆಯಲಿದೆ. ಜಿಬಿಜಿಬಿ ಕಾಯ್ದೆಯು ವಿವಿಧ ಹಂತಗಳನ್ನು ದಾಟಿ ಜಾರಿಯಾಗಲು ಹೆಚ್ಚಿನ ಸಮಯಾವಕಾಶ ಹಿಡಿಯುವುದರಿಂದ ಹಾಲಿ ಪಾಲಿಕೆಗೆ ಈ ವರ್ಷವೂ ಚುನಾವಣೆ ನಡೆಯುವುದು ಅನುಮಾನವಾಗಿದೆ.
ಹಾಲಿ ಬಿಬಿಎಂಪಿಯ ಅಧಿಕಾರವಧಿ 2020ರ ಸೆ.10ರಂದೇ ಮುಗಿದಿದೆ. ಈ ನಾಲ್ಕೂವರೆ ವರ್ಷದಲ್ಲಿ ಪಾಲಿಕೆಯ ಆಡಳಿತ ಬಹುತೇಕ ಸೊರಗಿದೆ. ಪಾಲಿಕೆಯಿಂದ ಸಿಗಬೇಕಾದ ಸೌಲಭ್ಯಕ್ಕೆ ಜನರು ಪರದಾಟ ನಡೆಸುವಂತಾಗಿದೆ. ಈ ನೈಜ ಸಂಗತಿಯ ಅರಿವಿದ್ದರೂ, ಸರ್ಕಾರ ಪಾಲಿಕೆಯನ್ನು ಆರ್ಥಿಕವಾಗಿ ಮೇಲೆತ್ತುವುದಾಗಲಿ ಅಥವಾ ಚುನಾವಣೆ ನಡೆಸುವ ಗೋಜಿಗೆ ಹೋಗಿಲ್ಲ. ಇದರಿಂದಾಗಿ ಪಾಲಿಕೆ ಆಡಳಿತ ಸೊರಗಲು ಕಾರಣವಾಗಿದೆ. ಇದನ್ನೇ ನೆಪವಾಗಿಸಿ ಗ್ರೇಟರ್ ಬೆಂಗಳೂರು ರಚಿಸಿ ಹೊಸ ಆಡಳಿತ ವ್ಯವಸ್ಥೆಯನ್ನು ಮುನ್ನೆಲೆಗೆ ತರುವ ಪ್ರಯತ್ನ ಮಾಡಿದ್ದರೂ, ಅದನ್ನು ವ್ಯವಸ್ಥಿತವಾಗಿ ಜಾರಿಗೆ ತರುವಲ್ಲಿ ಮುತುವರ್ಜಿ ವಹಿಸದ ಕಾರಣ ಹೊಸ ಸ್ವರೂಪದ ವ್ಯವಸ್ಥೆಯೂ ಆರಂಭದಲ್ಲೇ ಅಸ್ಥಿರ ಹೆಜ್ಜೆಗಳನ್ನಿಟ್ಟಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಚುನಾವಣೆ ಮುಂದೂಡುವ ಯತ್ನ?:
ಗ್ರೇಟರ್ ಬೆಂಗಳೂರು ರಚನೆ ಪ್ರಕ್ರಿಯೆಗೆ ಆರು ತಿಂಗಳಿಗಿಂತಲೂ ಹೆಚ್ಚಿನ ಸಮಯದಿಂದ ಕಸರತ್ತು ನಡೆಸಲಾಗಿದೆ. ಆಡಳಿತ ದೃಷ್ಟಿಯಿಂದ 5 ಅಥವಾ 7 ಸಣ್ಣ ಪಾಲಿಕೆ ಮಾಡಿ ಅಧಿಕಾರ ವಿಕೇಂದ್ರೀಕರಣ ಮಾಡುವ ಭರವಸೆ ದೊರೆತಿದೆ. ಇದಕ್ಕಾಗಿ ಈಗಾಗಲೇ ವಿಧಾನಮಂಡಲದಲ್ಲಿ ಮಂಡಿಸಿದ್ದ ವಿಧೇಯಕಕ್ಕೆ ಪ್ರತಿಪಕ್ಷ ವಿರೋಧಿಸಿದ್ದರಿಂದ ಜಂಟಿ ಪರಿಶೀಲನಾ ಸಮಿತಿ ರಚಿಸಲಾಯಿತು. ಇದಾಗಿ ಎರಡು ದಿನಗಳ ಹಿಂದೆ ಸಮಿತಿಯು ತನ್ನ ಪೂರ್ಣ ವರದಿಯನ್ನು ನೀಡಿದೆ. ವರದಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿ ಸಲ್ಲಿಸಿರುವುದರಿಂದ ಮತ್ತೆ ಅಧಿವೇಶನದಲ್ಲಿ ಪರಿಷ್ಕೃತ ರೂಪದಲ್ಲಿ ಬಿಲ್ ಮಂಡಿಸಬೇಕಿದೆ. ಇದರ ಮೇಲೆ ಚರ್ಚೆ ನಡೆದು ಒಪ್ಪಿಗೆ ದೊರೆತಲ್ಲಿ ಮಾತ್ರ ಮಸೂದೆಯಾಗಿ ರಾಜ್ಯಪಾಲರಿಂದ ಒಪ್ಪಿಗೆ ಸಿಗುತ್ತದೆ. ಒಂದು ವೇಳೆ ಪ್ರತಿಪಕ್ಷಗಳು ಮತ್ತೆ ವಿರೋಧಿಸಿದ್ದಲ್ಲಿ ಹಾಲಿ ನಡೆಸಿರುವ ಯತ್ನ ವಿಫಲಗೊಳ್ಳಲಿದೆ. ಮುಖ್ಯವಾಗಿ ಬೆಂಗಳೂರನ್ನು ವಿಭಜಿಸಿ 5-7 ಪಾಲಿಕೆ ಮಾಡುವುದಕ್ಕಾಗಿ ಬಿಬಿಎಂಪಿ ವ್ಯವಸ್ಥೆಯನ್ನು ಬಲಿಕೊಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಇನ್ನಷ್ಟು ಪುಷ್ಟಿ ಸಿಗಲಿದ್ದು, ಅಂತಿಮವಾಗಿ ಬಿಬಿಎಂಪಿಗೆ ಚುನಾವಣೆ ನಡೆಸದ ಸ್ಥಿತಿ ನಿರ್ಮಾಣ ಆಗಲಿದೆ ಎಂಬ ಅನುಮಾನ ಮೂಡಿದೆ.
ವಾರ್ಡ್ ವಿಂಗಡಣೆ, ಮೀಸಲು ಸವಾಲು:
ಜಿಬಿಜಿಬಿ ಅನ್ವಯ ಐದು ಪಾಲಿಕೆ ಮಾಡಿದರೆ ಪ್ರತಿಯೊಂದು ಪಾಲಿಕೆ 100 ವಾರ್ಡ್‌ಗಳನ್ನು ಹೊಂದಲಿವೆ. ಅಂದರೆ ಐದೂ ಪಾಲಿಕೆಗಳಿಂದ ಒಟ್ಟು 500 ವಾರ್ಡ್‌ಗಳನ್ನು ರಚಿಸಲು ಹಾಲಿ ಬಿಬಿಎಂಪಿಯ 225 ವಾರ್ಡ್‌ಗಳನ್ನು ಪುನರ್ ವಿಂಗಡಿಸಬೇಕಾಗುತ್ತದೆ. ಈಗಾಗಲೇ 225 ವಾರ್ಡ್‌ಗಳನ್ನು ರಚಿಸುವ ವೇಳೆ ವಿಧಾನಸಭಾ ಕ್ಷೇತ್ರವಾರು ಸೇರಿ ಕೆಲವೊಂದು ಮಾನದಂಡ ಆಧರಿಸಿ ರಚಿಸಿದ್ದರೂ, ಆಡಳಿತ ಪಕ್ಷದ ಸೂಚನೆ ಮೇರೆಗೆ ಮನಬಂದಂತೆ ರೂಪಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಈಗ ಮತ್ತೆ ಐದೂ ಪಾಲಿಕೆಗಳಿಗೆ ವಾರ್ಡ್‌ಗಳನ್ನು ರಚಿಸಲು ಹೊಸ ಮಾನದಂಡ ಅನುಸರಿಸಬೇಕಾಗುತ್ತದೆ. ತಜ್ಞರು, ಅಧಿಕಾರಿಗಳ ಸಮಿತಿಯು ಕೈಗೊಳ್ಳುವ ಪ್ರಕ್ರಿಯೆ ಹಿಂದಿನಂತೆ ತಪ್ಪು ಮಾಡುವುದಿಲ್ಲ ಎಂಬುದಕ್ಕೆ ಗ್ಯಾರಂಟಿ ಇಲ್ಲ. ಕರಡು ಪಟ್ಟಿ ಪ್ರಕಟಗೊಂಡು ಸಾರ್ವಜನಿಕರಿಂದ ಆಕ್ಷೇಪಣೆ ಸ್ವೀಕರಿಸಿದ ನಂತರ ಅಂತಿಮಗೊಳಿಸಲು ಕೆಲ ತಿಂಗಳು ಹಿಡಿಯಲಿವೆ.
ಹೊಸ ವ್ಯಾಪ್ತಿ ಬಗ್ಗೆ ನಿಖರತೆ ಇಲ್ಲ:
ಹೆಚ್ಚು ಪಾಲಿಕೆಗಳನ್ನು ರಚಿಸಲಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಗಡಿಗೆ ಹೊಂದಿಕೊಂಡಿರುವ ಹೊಂದಿಷ್ಟು ಪ್ರದೇಶವನ್ನು ಸೇರ್ಪಡೆ ಮಾಡಿಕೊಳ್ಳಬೇಕಾಗುತ್ತದೆ. ಮುಖ್ಯವಾಗಿ ಸಂಪನ್ಮೂಲ ಹೆಚ್ಚಿಸಿಕೊಳ್ಳಲು ಇಲೆಕ್ಟ್ರಾನಿಕ್ ಸಿಟಿ ಪ್ರದೇಶವನ್ನು ಗ್ರೇಟರ್ ಬೆಂಗಳೂರಿಗೆ ಸೇರಿಸಿಕೊಳ್ಳಲು ಉತ್ಸುಕತೆ ಹೊಂದಲಾಗಿದೆ. ಇದು ಸಾಕಾರವಾದಲ್ಲಿ ಹಾಲಿ ಬಿಬಿಎಂಪಿ ವ್ಯಾಪ್ತಿ 900 ಚದರ ಕಿ.ಮೀ. ದಾಟಲಿದೆ. ಇಂತಹ ಪ್ರದೇಶವನ್ನು ಯಾವ ಪಾಲಿಕೆ ಅಥವಾ ವಾರ್ಡ್‌ವಾರು ಹೇಗೆ ವಿಭಾಗಿಸಬೇಕು ಎಂಬ ಹೊಸ ಜಿಜ್ಞಾಸೆ ಮೂಡಲಿದೆ. ಈ ಕಸರತ್ತಿಗಾಗಿಯೇ ಸಮಿತಿಯ ಅಮೂಲ್ಯ ಸಮಯ ವ್ಯರ್ಥವಾಗಲಿದ್ದು, ಪಾಲಿಕೆಗಳ ರಚನಾ ಸ್ವರೂಪ ವಿಳಂಬ ಹೊಸದಾಗಿ ರೂಪುಗೊಳ್ಳುವ ಸ್ಥಳೀಯ ಸಂಸ್ಥೆಗಳಿಗೂ ಚುನಾವಣೆ ನಡೆಯುವುದು ನಿಧಾನವಾಗಲಿದೆ ಎಂಬ ಮಾತು ಕೇಳಿಬಂದಿದೆ.
5 ಪಾಲಿಕೆ ರಚನೆಗೆ ಒಲವು:
ಗ್ರೇಟರ್ ಬೆಂಗಳೂರು ಪರಿಕಲ್ಪನೆಯಡಿ ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ರಚಿಸಲು ಸರ್ಕಾರ ಒಲವು ಹೊಂದಿದಂತಿದೆ. ಈ ಐದೂ ಪಾಲಿಕೆಗಳೂ ಬೆಂಗಳೂರು ಹೆಸರನ್ನು ಹೊಂದಿರಲಿದ್ದು, ಉತ್ತರ, ದಕ್ಷಿಣ, ಪೂರ್ಣ, ಪಶ್ಚಿಮ ಹಾಗೂ ಸೆಂಟ್ರಲ್ ಪಾಲಿಕೆಗಳಾಗಿ ವಿಂಗಡಣೆಯಾಗಲಿವೆ. ಹಾಲಿ ಬಿಬಿಎಂಪಿ ಕೇಂದ್ರ ಕಚೇರಿ ಹೊಂದಿರುವ ಸೆಂಟ್ರಲ್ ಬಿಜಿನೆಸ್ ಡಿಸ್ಟ್ರಿಕ್ (ಸಿಬಿಡಿ) ವ್ಯಾಪ್ತಿಯನ್ನು ಸೆಂಟ್ರಲ್ ಪಾಲಿಕೆಯಾಗಿರಲಿದೆ. ಇದಕ್ಕೆ ಹೊಂದಿಕೊಂಡಂತೆ ಉಳಿದ ನಾಲ್ಕೂ ಪಾಲಿಕೆ ರಚಿಸಬೇಕು ಎಂಬ ಉದ್ದೇಶ ಇದೆ. ಇದರ ಹೊರತಾಗಿಯೂ ಹಲವು ವರ್ಷಗಳಿಂದ ಪಾಲಿಕೆ ಅಧಿಕಾರ ಹಿಡಿಯಲು ಯತ್ನಿಸುತ್ತಿರುವ ಆಡಳಿತಾರೂಢ ಕಾಂಗ್ರೆಸ್ ಐದರಲ್ಲಿ ಕನಿಷ್ಠ 2 ಪಾಲಿಕೆಗಳನ್ನಾದರೂ ಗೆದ್ದು ರಾಜಧಾನಿಯಲ್ಲಿ ತನ್ನ ಅಸ್ತಿತ್ವ ಸಾಬೀತುಪಡಿಸಬೇಕು ಎಂಬ ದೂರಾಲೋಚನೆಯಿಂದ ಹೊಸ ಪಾಲಿಕೆಗಳ ರಚನೆಗೆ ರಾಜಕೀಯ ಲೇಪ ನೀಡಿದೆ ಎಂಬುದು ಚರ್ಚೆಯ ವಿಷಯವಾಗಿದೆ.
ಹಾಲಿ ಬಿಬಿಎಂಪಿ ವ್ಯವಸ್ಥೆಯಿಂದ ಆಡಳಿತ ಸುಧಾರಣೆ ಆಗುತ್ತಿಲ್ಲ. ಜನರಿಗೂ ಸೂಕ್ತ ಸೌಲಭ್ಯಗಳೂ ಸಿಗುತ್ತಿಲ್ಲ. ಬೆಂಗಳೂರಿನ ಮೂಲಸ್ವರೂಪಕ್ಕೆ ಧಕ್ಕೆ ಬಾರದಂತೆ ಅಧಿಕಾರ ವಿಕೇಂದ್ರೀಕರಣಕ್ಕಾಗಿ ಸಣ್ಣ ಪಾಲಿಕೆಗಳನ್ನು ರಚಿಸುವುದು ಯುಕ್ತ. ಆದರೆ, ಈ ಕಸರತ್ತನ್ನು ಭವಿಷ್ಯದ ದೃಷ್ಟಿಯನ್ನಿಟ್ಟುಕೊಂಡು ನಿಖರ ಹಾಗೂ ವೈಜ್ಞಾನಿಕವಾಗಿ ಕೈಗೊಂಡಲ್ಲಿ ಮಾತ್ರ ಹೊಸ ವ್ಯವಸ್ಥೆಯನ್ನು ಜನರು ಒಪ್ಪಿಕೊಳ್ಳುತ್ತಾರೆ. ಇದನ್ನು ಮಾಡಲಾಗದಿದ್ದರೆ ಹಾಲಿ ಬಿಬಿಎಂಪಿಗೆ ಚುನಾವಣೆ ನಡೆಸುವುದು ಒಳಿತು.
- ಶ್ರೀನಿವಾಸ್ ಅಲಿವಿಲ್ಲಿ, ಸಾಮಾಜಿಕ ಕಾರ್ಯಕರ್ತ