ಮಂಗಳೂರು: ಆನ್‌ಲೈನ್‌ನಲ್ಲಿ ಟ್ರೇಡಿಂಗ್ ಮಾಡುವುದರಿಂದ ದ್ವಿಗುಣ ಲಾಭ ಪಡೆಯಬಹುದು ಎಂದು ನಂಬಿಸಿ ಹಿರಿಯ ನಾಗರಿಕರೋರ್ವರಿಗೆ 4 ಲಕ್ಷ ರೂ. ವಂಚಿಸಿರುವ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
62 ವರ್ಷ ಪ್ರಾಯದ ದೂರುದಾರರಿಗೆ ಕಳೆದ ಏಪ್ರಿಲ್ 29ರಂದು ಫರಲಾನ್ ಅರಾನ ಎನ್ನುವ ಹೆಸರಿನ ಅಪರಿಚಿತ ವ್ಯಕ್ತಿಯಿಂದ ವಾಟ್ಸ್ ಆ್ಯಪ್ ಸಂದೇಶ ಬಂದಿದೆ. ಅದರಲ್ಲಿ ಟ್ರೇಡಿಂಗ್ ಆ್ಯಪ್ ನಲ್ಲಿ ಹಣ ಹೂಡಿಕೆ ಮಾಡಿದರೆ ದ್ವಿಗುಣ ಲಾಭ ಮಾಡಬಹುದು ಎಂದು ಬರೆದಿತ್ತು. ಅದರಂತೆ ದೂರುದಾರರು ಟ್ರೇಡಿಂಗ್ ಗ್ರೂಪಿಗೆ ಸೇರ್ಪಡೆಗೊಂಡಿದ್ದಾರೆ.
ಬಳಿಕ ಏನೇನು ಮಾಡಬೇಕು ಎಂದು ಸಂದೇಶ ಬಂದಿದೆ. ಅದರಂತೆ ಎ.29ರಂದು 50 ಸಾವಿರ ರೂ. ಮತ್ತು ಮೇ 1ರಂದು 50 ಸಾವಿರ ರೂ. ಮತ್ತು ಮೇ 3ರಂದು 4 ಲಕ್ಷ ರೂ. ಹಣವನ್ನು ಅವಿಯರ್ ಎಂಟರ್ ಪ್ರೈಸಸ್ ಸಂಸ್ಥೆಯ ಖಾತೆಗೆ ಪಾವತಿ ಮಾಡಿದ್ದಾರೆ.
ಮೇ 7ರಂದು ದೂರುದಾರರು ತನ್ನ ಸ್ನೇಹಿತನಿಗೆ ಈ ಬಗ್ಗೆ ಕರೆ ಮಾಡಿ ತಿಳಿಸಿದಾಗ, ಅದೆಲ್ಲ ವಂಚನೆ ಕೂಡಲೇ ಹಣವನ್ನು ಹಿಂಪಡೆಯುವಂತೆ ಸಲಹೆ ನೀಡಿದ್ದಾರೆ. ಹಾಗಾಗಿ 5 ಲಕ್ಷ ರೂ. ಹಣವನ್ನು ಹಿಂಪಡೆಯಲು ಹೋಗಿದ್ದು, ಅದರಲ್ಲಿ 1 ಲಕ್ಷ ರೂ. ವಾಪಾಸು ಬಂದಿದೆ. ಉಳಿದ 4 ಲಕ್ಷ ಹಿಂಪಡೆಯಲು ಸಾಧ್ಯವಾಗಿಲ್ಲ. ಆ ಹಣವನ್ನು ವಾಪಾಸು ಮಾಡುವಂತೆ ಸಂದೇಶ ಕಳುಹಿಸಿದ್ದು, ಆಗ ವಾಟ್ಸ್ ಆ್ಯಪ್ ಗ್ರೂಪ್ ಮತ್ತು ಟ್ರೇಡಿಂಗ್ ಆ್ಯಪ್ ಬ್ಲಾಕ್ ಆಗಿದೆ.
ಈ ಬಗ್ಗೆ ಬಂದರು ಠಾಣೆಯಲ್ಲಿ ದೂರು ನೀಡಿದ್ದು, ನಂಬಿಸಿ ಮೋಸ ಮಾಡಿದವರನ್ನು ಪತ್ತೆ ಹಚ್ಚಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.