ಜಿಲ್ಲೆ

ಡಬಲ್ ಇಂಜಿನ್ ವೇಗಕ್ಕೆ ಪ್ರತಿಪಕ್ಷ ಧೂಳಿಪಟ: ಕಾಂಗ್ರೆಸ್ ವಿರುದ್ಧ ಆರೋಗ್ಯ ಸಚಿವ ಸುಧಾಕರ್ ಟೀಕಾಪ್ರಹಾರ

Chikkaballapur

ಗೌರಿಬಿದನೂರು: ಕೇಂದ್ರ ಮತ್ತು ರಾಜ್ಯದ ಡಬಲ್ ಇಂಜಿನ್ ಸರ್ಕಾರದ ವೇಗಕ್ಕೆ ಪ್ರತಿ ಪಕ್ಷಗಳು ಧೂಳಿಪಟವಾಗುವುದು ಖಚಿತ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಜು.28ರಂದು ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಂಡಿರುವ ಬಿಜೆಪಿ ಸರ್ಕಾರದ 4 ವರ್ಷಗಳ ಸಾಧನಾ ಸಮಾವೇಶದ ಹಿನ್ನೆಲೆಯಲ್ಲಿ ತಾಲೂಕಿನ ಹೊಸೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕೇಂದ್ರದಲ್ಲಿ ಎರಡನೇ ಬಾರಿಗೆ ಪ್ರಧಾನಿ ಮೋದಿ ಅವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬಂತೆ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಬೊಮ್ಮಾಯಿ ಅವರ ಆಡಳಿತ ಸಾಗುತ್ತಿದೆ. ಇದು ಕಾಂಗ್ರೆಸ್ಸಿಗರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ನೆಪ ಹೇಳಿ ಸರ್ಕಾರದ ವಿರುದ್ಧ ಹಾದಿ ಬೀದಿ ಹೋರಾಟ ನಡೆಸುತ್ತಿದ್ದಾರೆ

ದೇಶದ ಜನತೆ ಕಾಂಗ್ರೆಸ್ಸಿಗರ ಆಟಗಳನ್ನು ನೋಡುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಜನತೆಗೆ ಕನಿಷ್ಠ ಕುಡಿಯುವ ನೀರು ನೀಡಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ವೈಫಲ್ಯ ಹಾಗೂ ನಮ್ಮ ಸರ್ಕಾರದ ಸಾಧನೆಗಳನ್ನು ಜನತೆಗೆ ಮುಟ್ಟಿಸುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಪರಿಣಾಮಕಾರಿಯಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಸಾಧನಾ ಸಮಾವೇಶದಲ್ಲಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಉತ್ತರ ಪ್ರದೇಶ ಸರ್ಕಾರ ದೇಶಕ್ಕೆ ಮಾದರಿಯಾಗಿದೆ. ಅದೇ ಹಾದಿಯಲ್ಲಿ ಕರ್ನಾಟಕ ಸಾಗುತ್ತಿದೆ ಎಂದರು.


ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ.ನಾಗರಾಜ್ ಮಾತನಾಡಿ, ಪ್ರಧಾನಿ ಮೋದಿ ಅವರು ಜನ ಸಾಮಾನ್ಯರಿಗೆ ತಲುಪುವ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿದ್ದಾರೆ. ಅಂತಹ ದಕ್ಷ ಹಾಗೂ ಪ್ರಾಮಾಣಿಕ ಪ್ರಧಾನಿ ದೊರೆತಿರುವುದು ನಮ್ಮ ಅದೃಷ್ಟ. ಕಾಂಗ್ರೆಸ್ಸಿಗರು ಅಧಿಕಾರ ಕಳೆದುಕೊಂಡ ಹತಾಶೆಯಲ್ಲಿದ್ದಾರೆ. ದಿನ ಕಳೆಯುವುದಕ್ಕಾಗಿ ಜನರನ್ನು ದಿಕ್ಕು ತಪ್ಪಿಸಿ ಇಲ್ಲಸಲ್ಲದ ವಿಷಯಕ್ಕೆ ಹೋರಾಟ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಮಾತನಾಡಿ, ಗೌರಿಬಿದನೂರು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಕಳೆದ ಎರಡು ವಿಧಾನಸಭೆ ಚುನಾವಣೆಯಲ್ಲಿ 30 ಸಾವಿರಕ್ಕೂ ಅಧಿಕ ಮತ ನೀಡಿದ್ದಾರೆ. ಆದರೆ ಈವರೆಗೆ ಗೆಲುವು ಸಾಧ್ಯವಾಗಿಲ್ಲ. ಮುಂದೆ ವಿಜಯಮಾಲೆ ದೊರೆಯಲಿದೆ. ಅದಕ್ಕಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶ್ರಮಿಸಬೇಕು. ಸಂಘಟಿತ ಹೋರಾಟ ನಡೆಸಬೇಕು ಎಂದರು. ಅಲ್ಲಿಪುರ, ವಿದುರಾಶ್ವತ್ಥ ಹಾಗೂ ಗೌರಿಬಿದನೂರು ನಗರಗಳಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.


ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ವಿಭಾಗೀಯ ಕಾರ್ಯದರ್ಶಿ ಕಾಂತರಾಜು, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎನ್.ಎಂ.ರವಿನಾರಾಯಣರೆಡ್ಡಿ, ತಾಲೂಕು ಘಟಕ ಅಧ್ಯಕ್ಷ ರಮೇಶ್ ರಾವ್, ನಗರ ಘಟಕ ಅಧ್ಯಕ್ಷ ಎ.ಮೋಹನ್, ಯೋಜನಾ ಪ್ರಾಧಿಕಾರ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಬಿ.ಎನ್.ರಂಗನಾಥ್, ಅಲ್ಲಿಪುರ ಹಸನ್ ರಜಾ, ಕೆ.ನಾಗಭೂಷಣರಾವ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ್, ನಗರಸಭೆ ಸದಸ್ಯ ಡಿ.ಜೆ.ಚಂದ್ರಮೋಹನ್ ಇತರರಿದ್ದರು.