ರಾಯಚೂರು: ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಇತರ ನಾಯಕರು ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸುವ ಅವಶ್ಯವಿದ್ದಿಲ್ಲ ಎಂದು ಕೆಆರ್‌ಪಿಪಿ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಗುಂಜಳ್ಳಿಯಲ್ಲಿ ಪಕ್ಷದ ಅಭ್ಯರ್ಥಿ ಪರ ರೋಡ್ ಶೋ ನಡೆಸಿದ ನಂತರ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದರು. ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಮತ ಕೇಳುತ್ತಿದೆ. ಆದರೆ ನಾನು ಎಲ್ಲ ಧರ್ಮದವರ ಜತೆಗೂಡಿ ಪಕ್ಷ ಕಟ್ಟಿದ್ದೇನೆ. ಬಿಜೆಪಿ ಸರ್ಕಾರದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ನಾವು ಅಧಿಕಾರಕ್ಕೆ ಬಂದರೆ ರೈತರ ಖಾತೆಗೆ 15 ಸಾವಿರ ರೂ. ಹಾಕಲಾಗುವುದು. ಉಚಿತ ವಿಮೆ, ರೈತ ಭರವಸೆ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಹೇಳಿದರು.