ಕೊಳ್ಳೇಗಾಲ: ದಿ.ಎನ್.ದೊರೈರಾಜ್ ಅವರು ಗೌರವಯುತ ಬದುಕು ನಡೆಸಿದ ರಾಜಕಾರಣಿಯಾಗಿದ್ದರಲ್ಲದೆ, ಜನರಿಗೆ ಉತ್ತಮ ಸೇವೆ ನೀಡಿದ್ದರು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಬಣ್ಣಿಸಿದರು.
ಪಟ್ಟಣದ ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶನಿವಾರ ದೊರೆ ಬೆಳಕು ಚಾರಿಟಬಲ್ ಟ್ರಸ್ಟ್ ವತಿಯಿಂದ 2 ದಿನದ ಹೊನಲು ಬೆಳಕಿನ ಪ್ರೊ ಕಬಡ್ಡಿ ಪಂದ್ಯಾವಳಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
1994ರಲ್ಲಿ ನಾನು ಪ್ರಥಮ ಬಾರಿಗೆ ಶಾಸಕನಾಗಿದ್ದ ಸಂದರ್ಭದಲ್ಲಿ ಎನ್.ದೊರೈರಾಜ್ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಅವರ ಪುತ್ರ ಚೇತನ್ ದೊರೈರಾಜ್ ತಂದೆಯ ಸ್ಮರಣಾರ್ಥ ಕೊಳ್ಳೇಗಾಲದಲ್ಲಿ ಪ್ರೊ ಕಬಡ್ಡಿ ಆಯೋಜನೆ ಮಾಡಿ ದೊರೆಗೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಚೇತನ್ ದೊರೈ ಅವರ ರಾಜಕೀಯ ಭವಿಷ್ಯದಲ್ಲಿ ಒಳಿತಾಗಲಿಎಂದು ಹಾರೈಸಿದರು.
ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಎನ್.ದೊರೈರಾಜ್ ವಿದ್ಯಾರ್ಥಿ ನಾಯಕರಾಗಿ ಬೆಳೆದು ರಾಜಕೀಯ ಪ್ರವೇಶಿಸಿ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, 2 ಬಾರಿ ಉಪಾಧ್ಯಕ್ಷರಾಗಿ ಅನ್ಯಾಯಕ್ಕೊಳಗಾದ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರು. ದೊರೈರಾಜ್ ಅವರು ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿದ್ದರು. ಯಾರೇ ತಪ್ಪು ಮಾಡಿದರೂ ಖಂಡಿಸುತ್ತಿದ್ದರು. ಅವರ ಸೇವೆಯ ದಾರಿಯಲ್ಲಿ ಪುತ್ರ ಚೇತನ್ ದೊರೈರಾಜ್ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರಿಗೆ ನನ್ನ ಬೆಂಬಲ ಸದಾಕಾಲ ಇರುತ್ತದೆ ಎಂದರು.
‘ವಿಜಯವಾಣಿ’ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ ಮಾತನಾಡಿ, ಕಬಡ್ಡಿ ದೇಶದ ನೆಲಮೂಲ ಸಂಸ್ಕೃತಿಯನ್ನು ಒಳಗೊಂಡ ಕ್ರೀಡೆಯಾಗಿದೆ. ಇದಕ್ಕೆ 4 ಸಾವಿರ ವರ್ಷಗಳ ಇತಿಹಾಸವಿದೆ. ಪ್ರಸ್ತುತ ಕಬಡ್ಡಿಗೆ ಹೊಸ ಪದವನ್ನು ಕಂಡುಕೊಂಡಿದ್ದೇವೆ. ಅದುವೆ ಯುದ್ಧ, ಭಾರತೀಯ ಸೈನ್ಯಕ್ಕೆ ಸಂಬಂಧಿಸಿದ ದಿ ಸರ್ಜಿಕಲ್ ಸ್ಟ್ರೈಕ್ ಎಂಬುದಾಗಿದೆ. ಇದನ್ನು ಆಧರಿಸಿ ಉರಿ ಎಂಬ ಸಿನಿಮಾವನ್ನು ಚಿತ್ರಿಸಲಾಗಿದೆ. ವಿಶೇಷವೆಂದರೆ, ತನ್ನ ಅಂಕಣದಿಂದ ಪ್ರತಿಸ್ಪರ್ಧಿಯ ಅಂಕಣಕ್ಕೆ ನುಗ್ಗಿ, ಗೆಲುವು ಸಾಧಿಸಿ ಸುರಕ್ಷಿತವಾಗಿ ಹಿಂದಿರುಗುವ ರೋಮಾಂಚನಕಾರಿ ಆಟವಿದು. ದಿ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಯ ಬಹುದೊಡ್ಡ ಮೂಲ ಕಬಡ್ಡಿ ಎಂದರೆ ಉತ್ಪ್ರೇಕ್ಷೆಯಾಗಲಾರದು ಎಂದರು.
ದೊರೆ ಬೆಳಕು ಚಾರಿಟಬಲ್ ಟ್ರಸ್ಟ್ ಗಡಿ ಭಾಗದ ತಾಲೂಕಿನಲ್ಲಿ ವರ್ಣರಂಜಿತ ಕ್ರೀಡಾ ಸ್ಪರ್ಧೆಯನ್ನು ಆಯೋಜಿಸಿದೆ. ಪ್ರಸ್ತುತ ಯುವ ಮನಸ್ಸುಗಳು ಮನರಂಜನೆ ಹೆಸರಲ್ಲಿ ದಿಕ್ಕುತಪ್ಪುತ್ತಿದೆ. ಅಂತಹ ಮನಸ್ಸುಗಳನ್ನು ಸದಭಿರುಚಿಯ ಮನರಂಜನೆ ಮೂಲಕ ಒಗ್ಗೂಡಿಸುವ ಕೆಲಸವನ್ನು ಚೇತನ್ ದೊರೈರಾಜ್ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ರಫೀಕ್ ಅಹಮ್ಮದ್ ಮಾತನಾಡಿ, ದಿ.ಎನ್.ದೊರೈರಾಜ್ ಅವರ ಹೆಸರಲ್ಲಿ ದೊರೆ ಬೆಳಕು ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿರುವುದು ಸಂತೋಷದ ವಿಷಯ. ವಿಶೇಷವಾಗಿ ದೇಸಿ ಕ್ರೀಡೆ ಕಬಡ್ಡಿ ಮೂಲಕ ಟ್ರಸ್ಟ್‌ಗೆ ಚಾಲನೆ ನೀಡಲಾಗಿದೆ. ದೊರೈರಾಜ್ ಈ ಭಾಗದ ಪ್ರಭಾವಿ ರಾಜಕಾರಣಿ ಆಗಿದ್ದರು. ವಿದ್ಯಾರ್ಥಿ ಕಾಂಗ್ರೆಸ್, ಯುವ ಕಾಂಗ್ರೆಸ್ ನಾಯಕರಾಗಿ, ಜಿಪಂ ಸದಸ್ಯ, ಉಪಾಧ್ಯಕ್ಷರಾಗಿ ಸಾಕಷ್ಟು ಸೇವೆ ಮಾಡಿದ್ದಾರೆ. ಶಾಸಕರಾಗುವ ಪ್ರಯತ್ನವನ್ನೂ ಮಾಡಿದ್ದರು. ಇವರೊಟ್ಟಿಗೆ ರಾಜಕೀಯ ಪ್ರವೇಶಿದ ಅನೇಕರು ಇಂದು ಪ್ರಭಾವಿ ನಾಯಕರಾಗಿದ್ದಾರೆ. ಅದರಲ್ಲಿ ರಮಾನಾಥ್ ರೈ ಕೂಡ ಒಬ್ಬರಾಗಿದ್ದಾರೆ. ದೊರೈರಾಜ್ ಪುತ್ರ ಚೇತನ್ ದೊರೈರಾಜ್ ತಂದೆಯಂತೆ ಜನಸೇವೆ ಮಾಡುತ್ತಿದ್ದಾರೆ ಎಂದರು.
ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ದಿ.ಎನ್.ದೊರೈರಾಜ್ ಧರ್ಮಪತ್ನಿ ರಾಜಮ್ಮ, ಕೆಎಂಎಫ್ ನಿರ್ದೇಶಕ ಮಧುವನಹಳ್ಳಿ ನಂಜುಂಡಸ್ವಾಮಿ, ರಾಜ್ಯ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್ ಮಧುವನಹಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ನಗರಸಭಾ ಮಾಜಿ ಅಧ್ಯಕ್ಷ ಶಾಂತರಾಜು ಬಸ್ತೀಪುರ, ಮುಖಂಡ ಓಲೆ ಮಹದೇವ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಡಿ.ಸಿದ್ದರಾಜು, ನಗರಸಭಾ ಸದಸ್ಯರು ಹಾಗೂ ಮುಖಂಡರು ಇದ್ದರು.