ಮೈಸೂರು: ಮನೆ ಮನೆಗೆ ತೆರಳಿ ಬಟ್ಟೆ ಬ್ಯಾಗ್ ವಿತರಿಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಮೈಸೂರಿಗೆ ಕೈಜೋಡಿಸಬೇಕೆಂದು ನಗರಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನದ ಅಂಗವಾಗಿ ಕೆ.ಎಂ.ಪಿ.ಕೆ. ಟ್ರಸ್ಟ್‌ನಿಂದ ನಗರದ ಚಾಮುಂಡಿಪುರಂನಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮನೆ ಮನೆಗೆ ತೆರಳಿ ‘ಪ್ಲಾಸ್ಟಿಕ್ ಬ್ಯಾಗ್ ತ್ಯಜಿಸಿ, ಬಟ್ಟೆ ಚೀಲ ಬಳಿಸಿ’ ಘೋಷವಾಕ್ಯದೊಂದಿಗೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ಪ್ರತಿಯೊಬ್ಬರೂ ತ್ಯಜಿಸಬೇಕು. ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು.
ಪ್ಲಾಸ್ಟಿಕ್ ನಿಷೇಧ ಹಾಗೂ ಪರಿಸರ ರಕ್ಷಣೆ ಜವಾಬ್ದಾರಿ ಕೇವಲ ಸರ್ಕಾರ ಹಾಗೂ ಸ್ಥಳೀಯ ಆಡಳಿತದ್ದಲ್ಲ. ನಮ್ಮೆಲ್ಲರದ್ದು ಸಾರ್ವಜನಿಕರು ತಮ್ಮ ಹೊಣೆ ಅರಿತು ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
ಪ್ಲಾಸ್ಟಿಕ್ ಪರಿಸರಕ್ಕೆ ಮಾರಕ, ಭೂಮಿಯಲ್ಲಿ ಕೊಳೆಯದ ಇದು, ದಹಿಸಿದಾಗ ವಿಷಕಾರಕ ಅಂಶಗಳನ್ನು ಪರಿಸರಕ್ಕೆ ಬಿಡುಗಡೆ ಮಾಡುತ್ತದೆ. ಇದರಿಂದ ಕ್ಯಾನ್ಸರ್‌ನಂತಹ ಹಲವು ಮಾರಣಾಂತಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸುವ ಸಂಕಲ್ಪ ಮಾಡಬೇಕು ಎಂದು ಆಯುಕ್ತರು ಕೋರಿದರು.
ಸುಂದರ ಪರಿಸರ ನಿರ್ಮಿಸಿ:
ನಗರಪಾಲಿಕೆಯ ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಮಾತನಾಡಿ, ಪ್ಲಾಸ್ಟಿಕ್ ಬ್ಯಾಗುಗಳು ಹಾಗು ವಸ್ತುಗಳ
ಬಳಕೆ ನಿಲ್ಲಿಸಿದರೆ ಸುಂದರ ಪರಿಸರ ನಮ್ಮದಾಗುತ್ತದೆ. ದೈನಂದಿನ ಜೀವನದಲ್ಲಿ ಬಟ್ಟೆ, ಕಾಗದ ಹಾಗೂ ಇತರ ಪರಿಸರ ಸ್ನೇಹಿ ಕೈಚೀಲ ಬಳಸಬೇಕು. ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಮುಂದಾಗಲಿ ಎಂದು ಅವರು ಹೇಳಿದರು.
ನಗರಪಾಲಿಕೆ ವಲಯ ಆಯುಕ್ತ ಮಂಜುನಾಥ್ ರೆಡ್ಡಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೀನಾಕ್ಷಿ ,ಪಾಲಿಕೆ ಪರಿಸರ ಇಂಜಿನಿಯರ್ ಜ್ಯೋತಿ, ಆರೋಗ್ಯ ನಿರೀಕ್ಷಕರಾದ ಶಿವಪ್ರಸಾದ, ಪ್ರೀತಿ ಇತರರು ಇದ್ದರು.
ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ರಾಜ್, ಮುಖಂಡರಾದ ಮುತ್ತಣ್ಣ, ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ಶ್ರೀಕಾಂತ್ ಕಶ್ಯಪ್, ಎಸ್. ಎನ್.ರಾಜೇಶ, ಸುಚಿಂದ್ರ, ಸಚಿನ್ ನಾಯಕ್ ಇದ್ದರು.