ಮೈಸೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಪ್ರಯೋಜನಗಳ ಕುರಿತು ಪ್ರತಿಯೊಬ್ಬ ಕಾರ್ಯಕರ್ತನು ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡಿ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಕರೆ ನೀಡಿದರು.
ನಗರದ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕರ್ತರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು ಮತ್ತು ಗ್ಯಾರಂಟಿ ಯೋಜನೆಗಳ ಫಲಾನುವಿಗಳನ್ನು ಒಂದೆಡೆ ಸೇರಿಸಲು ಜಿಲ್ಲೆಯಲ್ಲಿ ಸಮಾವೇಶ ಮಾಡಬೇಕಿದೆ. ಚುನಾವಣಾ ನೀತಿ ಸಂಹಿತೆ ಮಾರ್ಚ್ ಮೊದಲ ವಾರದಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ. ಅಷ್ಟರೊಳಗೆ ಸಮಾವೇಶ ಮಾಡಿ ಮುಖಂಡರಿಗೆ ತಿಳಿಸಿದರು.
ಕಾಂಗ್ರೆಸ್ ಟೀಕೆ ಮಾಡುವುದನ್ನೇ ಬಿಜೆಪಿ ತನ್ನ ಕೆಲಸವನ್ನಾಗಿ ಮಾಡಿಕೊಂಡಿದೆ. ದೇಶದಲ್ಲಿ ಎರಡು ಲಕ್ಷ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿ ಯುವಕರಿಗೆ ಉದ್ಯೋಗ ನೀಡದೆ ವಂಚಿಸಿದೆ. ಆದರೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಲ್ಲಿ ನಿರುದ್ಯೋಗ ಯುವಕರಿಗೆ ಯುವನಿಧಿ ಪ್ರೋತ್ಸಾಹ ಧನವನ್ನು ನೀಡುತ್ತಿದೆ. ಈ ರೀತಿಯ ಬಿಜೆಪಿಯ ವೈಫಲ್ಯಗಳನ್ನು ಕಾರ್ಯಕರ್ತರು ಜನರ ಮುಂದಿಡಬೇಕು ಎಂದರು.
ಧರ್ಮ, ದೇವರ ಹೆಸರಿನಲ್ಲಿ ಬಿಜೆಪಿ ಜನರನ್ನು ಬ್ಲಾಕ್‌ಮೇಲ್ ಮಾಡುತ್ತಿದೆ. ಕೋಮು ಗಲಭೆಗಳನ್ನು ಮಾಡುತ್ತಿದೆ. ಬಡವರು, ಸಮಾಜದ ಕಟ್ಟಕಡೆಯ ವ್ಯಕ್ತಿ ಆರ್ಥಿಕ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದ ಬಿಜೆಪಿ ಕಾಂಗ್ರೆಸ್ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ ಎಂದು ಹರಿಹಾಯ್ದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ. ಯುವ ಮತದಾರರ ಮನೆ ಬಾಗಿಲಿಗೆ ಎಡತಾಗಿ ಅವರಿಗೆ ಮತ ಹಾಕುವಂತೆ ಪ್ರೇರೇಪಿಸಬೇಕು. ಜಿಲ್ಲಾಧಿಕಾರಿ ಬಳಿ ಜಿಲ್ಲೆಯ ಒಟ್ಟು ಮತದಾರರ ಪಟ್ಟಿಯನ್ನು ಪಡೆದು ಮನೆ ಮನೆಗೆ ಭೇಟಿ ನೀಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರಿಂದ ಸಚಿವ ಡಾ.ಮಹದೇವಪ್ಪ ಅವರು ಅಹವಾಲು ಸ್ವೀಕರಿಸಿದರು. ಮಹಿಳೆಯರು ಮತ್ತು ಪುರುಷರಿಂದ ಪ್ರತ್ಯೇಕ ಅರ್ಜಿಗಳನ್ನು ಸ್ವೀಕರಿಸಿ ಅಹವಾಲು ಆಲಿಸಿದರು.
ನಿಗಮ ಮಂಡಳಿಗಳಲ್ಲಿ ಅಧ್ಯಕ್ಷ, ನಿರ್ದೇಶಕರ ಸ್ಥಾನಕ್ಕೆ ನೇಮಕಾತಿ, ಕಾಂಗ್ರೆಸ್‌ನ ವಿವಿಧ ಸಮಿತಿಗಳಿಗೆ ನೇಮಕಾತಿ ಮಾಡುವಂತೆ ಒತ್ತಾಯಿಸಿ ಬಹುತೇಕ ಕಾರ್ಯಕರ್ತರು ಅರ್ಜಿಗಳನ್ನು ಸಚಿವರಿಗೆ ಸಲ್ಲಿಸಿದರು.
ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ ಇದ್ದರು.