ಮಡಿಕೇರಿ:
ವನ್ಯಜೀವಿಗಳ ಚರ್ಮ, ಕೂದಲು, ಉಗುರು ಇತ್ಯಾದಿಗಳನ್ನು ಬೇಟೆಯಾಡಿ ಬಳಸಿದರೆ ಮಾತ್ರ ಅಪರಾಧ. ಪೂರ್ವಜರಿಂದ ಬಳುವಳಿಯಾಗಿ ಬಂದಿದ್ದರೆ ಅದನ್ನು ಇಟ್ಟುಕೊಳ್ಳುವುದಕ್ಕೆ ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಸ್ಪಷ್ಟಪಡಿಸಿದ್ದಾರೆ.
ಹುಲಿ ಉಗುರು ಪ್ರಕರಣದಲ್ಲಿ ಒಬ್ಬ ಅಧಿಕಾರಿ ಮಾಡಿದ ಕೃತ್ಯದಿಂದ ಕೊಡಗಿನಲ್ಲೂ ಆತಂಕದ ಸ್ಥಿತಿ ನಿರ್ಮಾಣ ಆಗಿದೆ. ಹುಲಿ ಉಗುರು ಧರಿಸಿದ ವ್ಯಕ್ತಿಯ ಬಂಧನ, ರಾಜ್ಯ ಸಭೆ ಸದಸ್ಯರೊಬ್ಬರ ಮೇಲೆ ಪ್ರಕರಣ ದಾಖಲಾಗಿರುವ ವಿದ್ಯಮಾನಗಳು ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಜಿಲ್ಲೆಯ ಬಹುತೇಕ ಮನೆಗಳಲ್ಲಿ ಪೂರ್ವಜರಿಂದ ವಂಶಪಾರಂಪರ್ಯವಾಗಿ ಬಂದಿರುವ ಜಿಂಕೆ ಕೊಂಬು ಸೇರಿದಂತೆ ವನ್ಯಜೀವಿ ಉತ್ಪನ್ನಗಳಿವೆ. ಅಧಿಕಾರಿಯೊಬ್ಬರ ಕೃತ್ಯದಿಂದಾಗಿ ಇವುಗಳನ್ನು ಸರ್ಕಾರಕ್ಕೆ ಕೊಡುವ ಅಥವಾ ನಾಶ ಮಾಡುವ ಚಿಂತನೆಯಲ್ಲಿ ಇರುವವರು ಅಂತಹ ಕೆಲಸ ಮಾಡುವುದು ಬೇಡ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಡುಪ್ರಾಣಿಗಳ ರಕ್ಷಣೆಗೋಸ್ಕರ ವನ್ಯಜೀವಿ ಬೇಟೆ ನಿಷೇಧ ಕಾನೂನು ಇದೆ. ಯಾವುದೇ ಕಾನೂನು ಮಾನವೀಯತೆಗಿಂತ ಮೇಲಲ್ಲ. ಎಲ್ಲಾ ಕಾನೂನುಗಳನ್ನು ಮಾನವೀಯತೆ ಒಳಗೊಂಡಂತೆ ಜಾರಿ ಮಾಡಬೇಕು. ಜಗ್ಗೇಶ್ ಪ್ರಕರಣದಲ್ಲಿ ಕೋರ್ಟ್ ತಡೆಯಾಜ್ಞೆ ಇದೆ. ಹಾಗಾಗಿ ಈ ಪ್ರಕರಣ ಇತ್ಯರ್ಥ ಆಗುವ ತನಕ ಯಾವುದೇ ಕ್ರಮಕ್ಕೆ ಮುಂದಾಗದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಮತ್ತು ಅರಣ್ಯ ಮಂತ್ರಿ ಸೂಚನೆ ಕೊಡಬೇಕು. ಪರಂಪರೆಯಿಂದ ಬಂದ ಪ್ರಾಣಿ ಉತ್ಪನ್ನಗಳ ಬಗ್ಗೆ ಆತಂಕ ಬೇಡ. ಈ ವಿಷಯದಲ್ಲಿ ಕಾನೂನಾತ್ಮಕ ಚರ್ಚೆ ಮಾಡಿ ಪರಿಹಾರ ಕಂಡುಹಿಡಿಯಬೇಕು. ಅಧಿಕಾರಿಗಳು ಕಾನೂನು ಮೀರಿ ಕೆಲಸ ಮಾಡುವುದು ಬೇಡ. ವನ್ಯಜೀವಿ ಉತ್ಪನ್ನಗಳನ್ನು ಸಂಗ್ರಹಿಸಿರುವ ಸಮಯವನ್ನೂ ಅಧಿಕಾರಿಗಳೂ ಗಮನಿಸಬೇಕು. ಎಲ್ಲಾ ವಿಷಯಗಳಿಗೂ ಕಾನೂನಿನಲ್ಲಿ ತನ್ನದೇ ಆದ ರಕ್ಷಣೆ ಇದೆ.
ಜಿಂಕೆ ಕೊಂಬು ಮನೆಯಲ್ಲಿ ಇಡಬಹುದು. ತಾನಾಗಿಯೇ ಬಿದ್ದಿರುವ ನವಿಲು ಗರಿ ಇಟ್ಟು ಕೊಂಡರೆ ಅಪರಾಧ ಅಲ್ಲ. ಈ ವಿಷಯದಲ್ಲಿ ಜನರು ಆತಂಕಪಡುವ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದಂತೆ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದಿದೆ. ಇದರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಆಗಿಲ್ಲ. ಶ್ರೀಮಂಗಲದಲ್ಲಿ ೬೬ ಕೆವಿ ವಿದ್ಯುತ್ ಉಪಕೇಂದ್ರ ಸಿದ್ದವಾಗಿದ್ದು ನ.೩ರಂದು ಉದ್ಘಾಟಿಸಲಾಗುತ್ತಿದೆ. ಎಲ್ಲಾ ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ. ಭ್ರಷ್ಟಾಚಾರದ ಬಗ್ಗೆ ದಾಖಲೆಗಳಿದ್ದರೆ ನೇರವಾಗಿ ನನಗೆ ದೂರುಕೊಡಿ ಎಂದು ಹೇಳಿದರು.
೧೦ಹೆಚ್‌ಪಿ ಒಳಗಿನ ಕಾಫಿ ಬೆಳೆಗಾರರ ವಿದ್ಯುತ್ ಶುಲ್ಕ ವಸೂಲಾತಿಗೆ ಇಳಿದಿರುವ ಸೆಸ್ಕ್ ಬಗ್ಗೆ ಪ್ರತಿಕ್ರಿಯಿಸಿದ ಪೊನ್ನಣ್ಣ, ಹಿಂದಿನ ಸರ್ಕಾರದಲ್ಲಿ ಯಾವುದೇ ಆದೇಶ ಹೊರಡಿಸದೇ ಹಣ ಕಟ್ಟಬೇಡಿ ಎಂದಿದ್ದೇ ವಿದ್ಯುತ್ ಬಿಲ್ ಸಮಸ್ಯೆಗೆ ಕಾರಣ. ಈ ಸಮಸ್ಯೆಗೆ ಪರಿಹಾರ ಹುಡುಕಲಾಗುವುದು. ಬಿಲ್ ಬಾಕಿ ಉಳಿಸಿಕೊಂಡಿರುವವರ ವಿದ್ಯುತ್ ಕಡಿತ ಮಾಡುವುದನ್ನು ಸದ್ಯಕ್ಕೆ ತಡೆಯಲಾಗಿದೆ ಎಂದರು.
ಪ್ರಸ್ತುತ ರಾಜಕೀಯದ ಬಗ್ಗೆ ಮಾತನಾಡಿ ಬಿಜೆಪಿಗೆ ಯಾವುದೇ ಆಪರೇಷನ್ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಬಲಿಷ್ಠವಾಗಿದೆ. ಸುಭದ್ರ ಸರ್ಕಾರಕ್ಕೆ ಅಗತ್ಯವಿರುವ ಶಾಸಕರ ಬಲವನ್ನು ಹೊಂದಿದೆ. ಬಿಜೆಪಿ ಸಂಸದರು ತಮ್ಮ ಅವಧಿಯಲ್ಲಿ ಯಾವುದೇ ಕೆಲಸ ಮಾಡದ ಕಾರಣ ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಳ್ಳಲಾಗಿದೆ. ಇದು ಎರಡು ದುರ್ಬಲ ಪಕ್ಷಗಳ ಮೈತ್ರಿ ಆಗಿದ್ದು, ರಾಜ್ಯದಲ್ಲಿ ಸದೃಢವಾಗಿರುವ ಕಾಂಗ್ರೆಸ್‌ಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ. ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಇಲ್ಲ. ಇಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಅಭಿಪ್ರಾಯ ವ್ಯತ್ಯಾಸ ಸಹಜ. ಲೋಕಸಭಾ ಚುನಾವಣೆಗೂ ಎಲ್ಲರೂ ಜತೆಯಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.