ಬೀರೂರು: ಯುವಜನತೆ ಕಲಿಕೆಯ ಸಮಯವನ್ನು ಹಾಳು ಮಾಡದೇ ಗುರಿ ಸಾಧನೆಗೆ ಮುಂದಾಗಬೇಕು ಎಂದು ನಿವೃತ್ತ ಯೋಧ ದಕ್ಷಿಣಮೂರ್ತಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ರೀಡಾ ಸಾಂಸ್ಕೃತಿಕ, ಎನ್‌ಎಸ್‌ಎಸ್, ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಯುವ ರೆಡ್‌ಕ್ರಾಸ್ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಪ್ರಗತಿ ಹಾಗೂ ದೇಶ ರಕ್ಷಣೆ ಜವಾಬ್ದಾರಿಯೊಂದಿಗೆ ಬದುಕು ಕಟ್ಟಿಕೊಳ್ಳಲು ಭಾರತೀಯ ಸೇನೆಯಲ್ಲಿ ಇರುವ ಅವಕಾಶಗಳ ಮಾಹಿತಿ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮುಬಾರಕ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಾಧನೆ ಎಂಬ ಕೀಲಿಕೈಗಳು ನಿಮ್ಮ ಕೈಲಿದ್ದು, ಅದನ್ನು ವ್ಯರ್ಥಗೊಳಿಸಬೇಡಿ ಎಂದರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಮಲ್ಲಿಕಾರ್ಜುನ್ ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸಿಕೊಳ್ಳುವ ಜತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿಕೊಳ್ಳಲು ಇರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಪ್ರಚಾರ್ಯ ಡಾ.ಎಸ್.ಹರೀಶ್‌ಕುಮಾರ್ ಮಾತನಾಡಿ, ಸಮಯ ಎಂಬುದು ಸಾಧಕನ ಸ್ವತ್ತು, ಶಿಕ್ಷಣ ವ್ಯಕ್ತಿತ್ವ ವಿಕಸನದ ಜತೆ ಮಾನಸಮ್ಮಾನ ತಂದು ಕೊಡಬಲ್ಲವು. ವಿದ್ಯಾರ್ಥಿಗಳು ಅಧ್ಯಯನ ಶೀಲರಾಗಿ ಉತ್ತಮ ಹವ್ಯಾಸಗಳ ಮೂಲಕ ಯೋಧ ಮತ್ತು ರೈತರ ಸೇವೆಯ ನಿಸ್ವಾರ್ಥತೆಯನ್ನು ಅರಿತು ಸಾಧಕ ಬದುಕು ಕಟ್ಟಿಕೊಳ್ಳಬೇಕು ಎಂದರು.
ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಚಾಲಕ ಉಪನ್ಯಾಸಕ ಜಿ.ಸಿ.ಪ್ರಸಾದ್‌ಕುಮಾರ್, ನಿವೃತ್ತ ಯೋಧ ಅಜ್ಜಂಪುರದ ಕುಮಾರಸ್ವಾಮಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮೈಲಾರಪ್ಪ, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಪ್ರವೀಣ್, ಬಸವರಾಜ್ ಹಾಗೂ ರಾಜೇಶ್ವರಿ, ಆರ್.ಕೇದಾರನಾಥ ಸ್ವಾಮಿ, ಯೋಗೇಶ್ ಇದ್ದರು.