ಮೈಸೂರು: ಮಹಿಳೆಯರು ಪ್ರೋತ್ಸಾಹಕ್ಕೆ ಕಾಯುತ್ತಾ ಕೂರದೆ ತನ್ನ ಗುರಿಯ ಅನುಷ್ಠಾನಕ್ಕಾಗಿ ಪ್ರಯತ್ನಿಸಬೇಕು. ಯೋಜನೆಗಳನ್ನು ರೂಪಿಸಬೇಕು ಆಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಆರ್.ಎಚ್.ಪವಿತ್ರಾ ಹೇಳಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶ್ರೀದುರ್ಗಾ ಫೌಂಡೇಷನ್‌ನಿಂದ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ 35 ಸಾಧಕ ಮಹಿಳೆಯರಿಗೆ ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಏಳಿಗೆಯಲ್ಲಿ ಅನೇಕ ಮಹಿಳಾ ಸಾಧಕಿಯರ ಶ್ರಮವಿದೆ. ಮಹಿಳೆಯರಿಗೆ ಸಮಸ್ಯೆಗಳು ಸಹಜ. ಆದರೂ ಅನೇಕ ಸಾಧನೆಗೆ ಮಹಿಳೆಯರೇ ಪ್ರೇರಣೆಯಾಗಿದ್ದಾರೆ. ಮನೆಗಳಲ್ಲಿ ಹೆಣ್ಣು ಮಕ್ಕಳನ್ನು ತಾರತಮ್ಯ ಮಾಡದೆ ಗಂಡುಮಕ್ಕಳಂತೆಯೇ ಸಮಾನತೆಯಿಂದ ಬೆಳೆಸುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.
ನಗರದ ಸಂಚಾರ ವಿಭಾಗದ ಎಸಿಪಿ ಪರಶುರಾಮಪ್ಪ ಮಾತನಾಡಿ, ವಿವಿಧ ರಂಗಗಳಲ್ಲಿ ದುಡಿಯುವ ಮಹಿಳೆಯರು ತಾಳ್ಮೆಗೆ ಹೆಸರಾಗಿದ್ದು, ಮಹಿಳೆಯರಿಗೆ ಸರ್ವಕಾಲದಲ್ಲೂ ಗೌರವ ಸಲ್ಲಿಸುವ ಕೆಲಸ ಆಗಬೇಕು. ಜಗತ್ತಿನ ಪ್ರಗತಿಯಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದ್ದು ಮಹಿಳೆಯರು ವಿಶೇಷ ವ್ಯಕ್ತಿತ್ವ ರೂಪಿಸಿಕೊಳ್ಳುವ ಮೂಲಕ ಎಲ್ಲರಿಗೂ ಆದರ್ಶವಾಗಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು
ಬಿಜೆಪಿ ನಗರ ಉಪಾಧ್ಯಕ್ಷೆ ಹೇಮಾ ನಂದೀಶ್, ಮಾತೃಮಂಡಳಿ ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪಲತಾ ಚಂದ್ರಶೇಖರ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ನೃತ್ಯ ಶಿಕ್ಷಕಿ ವಂದಿತಾ ರೈ, ಸಮಾಜ ಸೇವಕಿ ಶಾಂತಾ ರಾಮಕೃಷ್ಣ, ಸರಿಗಮಪ ಚಾಂಪಿಯನ್ ತೀರ್ಪುಗಾರರಾದ ಶ್ರುತಿ, ಶ್ರೀದುರ್ಗ ಫೌಂಡೇಷನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಬಳ್ಳಾರಿ ಮುರಾರ್ಜಿ ಶಾಲೆಯ ಪ್ರಾಂಶುಪಾಲೆ ಅನಸೂಯಾ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಇತರರು ಇದ್ದರು.