ಹುಬ್ಬಳ್ಳಿ: ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳಿಗಾಗಿ ಎಸ್ಸಿಎಸ್ಪಿ/ಟಿಎಸ್ಪಿ ನಿಧಿಯನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ, ಕೂಡಲೇ ಅಧಿಕಾರಿಗಳು ಇದನ್ನು ಸರಿಪಡಿಸಿ ನಿಗದಿಪಡಿಸಿದ ಉದ್ದೇಶಕ್ಕೆ ಬಳಸಬೇಕು ಎಂದು ಮಾದಿಗ ದಂಡೋರ ಉತ್ತರ ಕರ್ನಾಟಕ ವಿಭಾಗ ಅಧ್ಯಕ್ಷ ಮಂಜುನಾಥ ಕೊಂಡಪಲ್ಲಿ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪರಿಶಿಷ್ಟ ವರ್ಗಗಳ ಆಯೋಗವು ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿದ್ದು, ಈ ಬಗ್ಗೆ ವಿಸತ ವರದಿಯನ್ನು ಕೇಳಿದೆ. ಇದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ, ಸರ್ಕಾರ ತಾನು ಅನ್ಯ ಉದ್ದೇಶಕ್ಕೆ ನಿಧಿ ಬಳಸಿಕೊಂಡಿರುವುದನ್ನು ಸಮರ್ಥಿಸಲು ಹೊರಟಿರುವುದು ಖಂಡನೀಯ ಎಂದರು.
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಎಸ್ಸಿಎಸ್ಟಿ ಸಮುದಾಯಗಳ ಅಭಿವೃದ್ಧಿಗೆಂದೇ ಮೀಸಲಾದ ಪ್ರತ್ಯೇಕ ಇಲಾಖೆ ಹಾಗೂ ಅನುಸೂಚಿತ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕ ಬಜೆಟ್ ಇರಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ, ಇದು ಈ ವರೆಗೆ ಈಡೇರಿಲ್ಲ. ಮೊದಲು ಬುಡಕಟ್ಟು ಉಪಯೋಜನೆ (ಟಿಎಸ್ಪಿ) ವಿಶೇಷ ಘಟಕ ಯೋಜನೆ (ಎಸ್ಸಿಪಿ) ಪರಿಚಯಿಸಲಾಯಿತು. ಏಪ್ರಿಲ್ 2006ರಲ್ಲಿ ಇದನ್ನು ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್ಸಿಎಸ್ಪಿ) ಎಂದು ಮರುನಾಮಕರಣ ಮಾಡಲಾಗಿದೆ.
ಇದು ಜಾರಿಗೆ ಬಂದು ಇಷ್ಟು ವರ್ಷವಾದರೂ ಯೋಜನೆ ಬಗ್ಗೆ ಸಮುದಾಯದ ಜನರಲ್ಲಿ ಜಾಗೃತಿ ಇಲ್ಲ. ಸರ್ಕಾರಗಳು ಸಹ ನಿಧಿಯನ್ನು ಸಮುದಾಯದ ಏಳ್ಗೆಗೆ ಬಳಕೆ ಮಾಡದೇ ಅನ್ಯ ಕೆಲಸಗಳಿಗೆ ಬಳಕೆ ಮಾಡುತ್ತಲೇ ಬರಲಾಗಿದೆ. ಇದು ನಿಲ್ಲಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಸಮಿತಿಯ ಜಿಲ್ಲಾಧ್ಯಕ್ಷ ಸತ್ಯನಾರಾಯಣ ಎಂ, ಹುಲಿಗೆಪ್ಪ ಚಲವಾದಿ, ಕೃಷ್ಣ ಹಂದಿಗೋಳ, ವಿಶ್ವನಾಥ ಬೂದೂರ್, ಪ್ರಕಾಶ ಗುಡಿಹಾಳ ಇದ್ದರು.